Advertisement

ಸಾಣೂರಿನ ಆಯುಷ್‌: ಕಿರಿಯರ ಬ್ಯಾಡ್ಮಿಂಟನ್‌ನಲ್ಲಿ ದೊಡ್ಡ ಸಾಧನೆ

01:10 PM Jul 23, 2018 | Team Udayavani |

ಕಾರ್ಕಳ: ಬ್ಯಾಡ್ಮಿಂಟನ್‌ನಲ್ಲಿ ಸತತ 13 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಕಾರ್ಕಳ ತಾಲೂಕಿನ ಸಾಣೂರು ಎನ್ನುವ ಪುಟ್ಟ ಊರಿನ ಹುಡುಗನ ಸಾಧನೆ ಇದು. ಸಾಣೂರು ಗ್ರಾಮದ ರಾಮ್‌ಪ್ರಕಾಶ್‌ ಶೆಟ್ಟಿ ಹಾಗೂ ಶಾಲಿಲಿ ದಂಪತಿಯ ಪುತ್ರ ಆಯುಷ್‌ ಆರ್‌. ಶೆಟ್ಟಿ ಬ್ಯಾಡ್ಮಿಂಟನ್‌ನಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಪ್ರತಿಭಾನ್ವಿತ. ಇಂದು ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

Advertisement

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 15 ವರ್ಷ ವಯೋಮಿತಿಯ ವಿಭಾಗದ ಐ-ನ್ಪೋರ್ಟ್ಸ್ ರಾಜ್ಯ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ ಸ್ಪರ್ಧೆಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದು, ಸತತ 13ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಕಳೆದ ಜೂನ್‌ ತಿಂಗಳಲ್ಲಿ ನಡೆದ ಸ್ಕೈ ಫಿಂಚ್‌ ರಾಜ್ಯ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ ಸ್ಪರ್ಧೆಯ ಸಿಂಗಲ್ಸ್‌ ಮತ್ತು ಡಬಲ್ಸ್‌ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಒಲಿದಿತ್ತು. ಆಯುಷ್‌ ಅಂಡರ್‌-13 ಸ್ಪರ್ಧೆಯಲ್ಲಿ ಆಡುತ್ತಿದ್ದಾಗ ದೇಶದಲ್ಲೇ ಪ್ರಥಮ ರ್‍ಯಾಂಕಿಂಗ್‌ನಲ್ಲಿದ್ದರು. ಸದ್ಯ ಅಂಡರ್‌-15 ವಿಭಾಗದಲ್ಲಿ ರಾಜ್ಯದ ಅಗ್ರಮಾನ್ಯ ಆಟಗಾರನಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎನ್ನುವ ಕನಸು ಕೂಡ ಹೊಂದಿದ್ದಾರೆ.

ಕ್ರೀಡಾ ಪ್ರೋತ್ಸಾಹ ಪ್ರಶಸ್ತಿ
ಸ್ಟೇಟ್‌ ರ್‍ಯಾಂಕಿಂಗ್‌ನಲ್ಲಿ ಸತತ 13 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಜತೆಗೆ ರಾಜ್ಯ ಮಟ್ಟದ ಅನೇಕ ಪಂದ್ಯಾಟಗಳಲ್ಲಿ 30ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿರುವುದು ಆಯುಷ್‌ ಸಾಧನೆ. ಈ ಸಾಧನೆಗಾಗಿ ಕಳೆದ ಬಾರಿ ರಾಜ್ಯ ಸರಕಾರದ “ಕ್ರೀಡಾ ಪ್ರೋತ್ಸಾಹ ಪ್ರಶಸ್ತಿ’ ಕೂಡ ಲಭಿಸಿದೆ. ಆಯುಷ್‌ ಕಾಂತಾವರದ ಪ್ರಕೃತಿ ನ್ಯಾಶನಲ್‌ ಹೈಸ್ಕೂಲಿನಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕಲಿಕೆಯಲ್ಲಿ ಸಹ ಮುಂದಿರುವ ಈತನಿಗೆ ಸಾಧನೆ ಗುರುತಿಸಿ ಶಾಲೆಯಿಂದಲೂ ಆರ್ಥಿಕ ಹಾಗೂ ವಿವಿಧ ರೀತಿಯ ಪ್ರೋತ್ಸಾಹ ದೊರೆಯುತ್ತಿದೆ.

3ನೇ ತರಗತಿಯಿಂದ ತರಬೇತಿ
3ನೇ ತರಗತಿಯಿಂದ ಈತ ಬ್ಯಾಡ್ಮಿಂಟನ್‌ ತರಬೇತಿ ಪಡೆಯುತ್ತಿದ್ದಾನೆ. ಪ್ರತೀ ದಿನ ಬೆಳಗ್ಗೆ  5 ಗಂಟೆಗೆ ಎದ್ದು ತರಬೇತಿಗೆ ಹೊರಡುತ್ತಿದ್ದರು. ಪ್ರಾರಂಭದಲ್ಲಿ ತಂದೆಯ ಜತೆಗೆ ಆಡಿ ತರಬೇತಿ ಪಡೆದಿರುವುದು ವಿಶೇಷ. ಅನಂತರ ಕಾರ್ಕಳದಲ್ಲಿ ಬ್ಯಾಡ್ಮಿಂಟನ್‌ ಕೋಚ್‌ ಸುಭಾಷ್‌ ಹಾಗೂ ಅನಂತರ ಮಂಗಳೂರಿನಲ್ಲಿ ಚೇತನ್‌ ಅವರ ಮೂಲಕ ತರಬೇತಿ ಪಡೆದರು.
ಸದ್ಯ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟಗಾರ ಕೃಷ್ಣ ಕುಮಾರ್‌ ಅವರಿಂದ ತರಬೇತಿ ಪಡೆಯುತ್ತಿದ್ದು, ಜು. 22ರಿಂದ ನಾಗ್ಪುರದಲ್ಲಿ ಆರಂಭಗೊಂಡಿರುವ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next