ಹಳೆಯಂಗಡಿ: ಆಯುರ್ವೇದ, ಯುನಾನಿ, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಇಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಿಬಿರಗಳು ಸಹಕಾರಿಯಾಗಿವೆ ಎಂದು ಅಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ| ಅಶ್ಫಾಕ್ ಹೇಳಿದರು.
ಇಲ್ಲಿನ ಜಾರಂದಾಯ ದೈವಸ್ಥಾನದ ಶ್ರೀನಿವಾಸ ಕಲಾಮಂದಿರದಲ್ಲಿ ಜಿಲ್ಲಾ ಆಯುಷ್ ಇಲಾಖೆಯಿಂದ ಪ್ರಸ್ತುತ ವರ್ಷದ ಐ.ಇ.ಸಿ. ಕಾರ್ಯಕ್ರಮಗಳ ಎಸ್. ಸಿ.ಪಿ. ಯೋಜನೆಯಡಿಯಲ್ಲಿ ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಅಧ್ಯಕ್ಷತೆ ವಹಿಸಿ, ಅಲೋಪತಿ ವೈದ್ಯ ಪದ್ಧತಿಯ ಔಷಧಗಳನ್ನು ಹೆಚ್ಚು ಪ್ರಚುರಪಡಿಸಲು ಇಲಾಖೆಯ ವೈದ್ಯರು ಪ್ರಯತ್ನಿಸಬೇಕು. ಮಿತವ್ಯಯವಾದ ಔಷಧಗಳು ಆರೋಗ್ಯ ರಕ್ಷಣೆಗೆ ಸಹಕಾರಿ ಎಂದರು.
ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲ, ಇಂದಿರಾ ನಗರದ ದಲಿತ ಸಂಘರ್ಷ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆ ಇಂದಿರಾನಗರ ಇವುಗಳ ಜಂಟಿ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಯಿತು.
ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಶುಭ ಹಾರೈಸಿದರು. ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸದಾಶಿವ, ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತಾ ವಾಸುದೇವ, ಅಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ| ಮುರಳೀ, ಡಾ| ಮಣಿಕರ್ಣಿಕಾ, ನ್ಯಾಯವಾದಿ ಮಹಾಬಲ ಅಂಚನ್, ಸಾಮಾಜಿಕ ಕಾರ್ಯಕರ್ತ ರಮೇಶ್ ಅಂಚನ್, ಕೆಮ್ರಾಲ್ ಗ್ರಾ.ಪಂ. ಅಧ್ಯಕ್ಷ ನಾಗೇಶ್, ಗ್ರಾ.ಪಂ. ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಸುಧಾಕರ್, ಸುರತ್ಕಲ್ ಪತಂಜಲಿ ಚಿಕಿತ್ಸಾ ವಲಯದ ಸಂಚಾಲಕಿ ಶಾಂತಾ ರಮೇಶ್, ಶ್ರಾವ್ಯಾ ಹರ್ಷಿತ್, ಮೀರಾ ಉಪಸ್ಥಿತರಿದ್ದರು. ಡಾ| ಯಶ್ವಿತಾ ಅನೂಪ್ ಸ್ವಾಗತಿಸಿ, ಟ್ರಸ್ಟಿ ಎಚ್. ರಾಮಚಂದ್ರ ಶೆಣೈ ನಿರೂಪಿಸಿದರು.