Advertisement
ಸಾಮಾನ್ಯವಾಗಿ ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹಾಗೂ ಮಹಿಳೆಯ ಸ್ತನ ಕ್ಯಾನ್ಸರ್‌ನ ಅಪಾಯ ಹೆಚ್ಚಾಗಿರುತ್ತದೆ.
Related Articles
Advertisement
ವಂಶವಾಹಿಗಳಲ್ಲಿ ಉಂಟಾಗುವ ಬದಲಾವಣಗೆ ಹಲವು ಕಾರಣಗಳಿರುತ್ತವೆ. ಮುಖ್ಯವಾಗಿ ಅನುಚಿತ ಆಹಾರ, ಜೀವನ ಶೈಲಿ, ತಂಬಾಕು ಸೇವನೆ, ಆಲ್ಕೋಹಾಲ್, ಸೋಂಕು, ಹಾರ್ಮೋನ್‌ನಲ್ಲಿ ಅಸಮತೋಲನ, ನೇರಳಾತೀತ ವಿಕಿರಣಗಳಿಗೆ ಒಡ್ಡಿಕೊಳ್ಳುವುದು ಇತ್ಯಾದಿ.
ಕ್ಯಾನ್ಸರ್ನಿಂದ ರಕ್ಷಣೆಗಿರುವ ಆಯುರ್ವೇದ ವಿಧಾನ :
ಆಯುರ್ವೇದವು ಯಾವುದೇ ಅನಾರೋಗ್ಯದ ಮೂಲ ಕಾರಣವನ್ನು ಗುರುತಿಸುತ್ತದೆ. ಇದರಲ್ಲಿ ರೋಗಲಕ್ಷಣದ ಚಿಕಿತ್ಸೆಯ ಜತೆಗೆ ಮೂಲ ಕಾರಣಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಕಾಯಿಲೆ ಉಲ್ಬಣಿಸದಂತೆ ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ಹೆಚ್ಚಿನ ಕಾಯಿಲೆಗಳಿಗೆ ಮುಖ್ಯ ಕಾರಣ ಆಹಾರ ಪದ್ಧತಿ, ಜೀವನ ಕ್ರಮದಲ್ಲಿರುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಅದನ್ನು ತಡೆಯದೇ ಇರುವುದೇ ಆಗಿರುತ್ತದೆ. ಆಯುರ್ವೇದ ಪದ್ಧತಿಯಲ್ಲಿ ಮೊದಲಿಗೆ ನಮ್ಮ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದು ಕ್ಯಾನ್ಸರ್ ತಡೆಯಲು ಇರಿಸುವ ಮೊದಲ ಹೆಜ್ಜೆಯಾಗಿರುತ್ತದೆ. ಇದು ನಮ್ಮೊಳಗೆ ಜಾಗೃತಿಯನ್ನು ಮೂಡಿಸಿ ಆಲ್ಕೋಹಾಲ್, ತಂಬಾಕು ಸೇವನೆ, ಧೂಮಪಾನದಂಥ ಚಟುವಟಿಕೆಗಳಿಂದ ಹೊರಬರಲು ಪ್ರೇರಣೆಯಾಗುತ್ತದೆ.
ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು :
ನಾವು ಸೇವಿಸುವ ಆಹಾರವು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ನಿರ್ಧರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾದರೆ ಯಾವುದೇ ಕಾಯಿಲೆ ಬರುವ ಸಂಭವ ಕಡಿಮೆ ಇರುತ್ತದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ನಿತ್ಯವೂ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಬಹುದು. ಬೆಟ್ಟದ ನೆಲ್ಲಿಕಾಯಿಯು ತನ್ನ ಮಕ್ಕಳನ್ನು ರಕ್ಷಿಸುವ ತಾಯಿಯಂತೆ ಕಾಯಿಲೆಗಳ ವಿರುದ್ಧ ಹೋರಾಡಲು ದೇಹವನ್ನು ಪ್ರಚೋದಿಸುತ್ತದೆ. ಇದರೊಂದಿಗೆ ತುಪ್ಪ ಮತ್ತು ಹಾಲನ್ನು ಪ್ರತಿದಿನ ನಿಯಮಿತವಾಗಿ ಸೇವಿಸಬೇಕು. ಇದು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಗೆ ಬೇಕಾಗುವ ಜಠರಾಗ್ನಿಯನ್ನು ರಕ್ಷಿಸುತ್ತದೆ ಎಂಬುದು ಆಯುರ್ವೇದದ ಅಭಿಪ್ರಾಯ.
ಏನು ಮಾಡೇಬೇಕು/ ಮಾಡಬಾರದು :
ಆಹಾರವನ್ನು ಸೇವಿಸುವ ಮೊದಲು ಚೆನ್ನಾಗಿ ಬೇಯಿಸಬೇಕು. ಹಿಂದೆ ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುವ ಮೊದಲು ಮತ್ತೂಮ್ಮೆ ಆಹಾರ ಸೇವಿಸಬಾರದು. ಪ್ರತಿಬಾರಿಯು ಸೇವಿಸುವ ಸಮಯದಲ್ಲಿ ಆಹಾರವನ್ನು ಹೊಸದಾಗಿ ತಯಾರಿಸಬೇಕು ಮತ್ತು ಬಿಸಿ ಇರುವಾಗಲೇ ಸೇವಿಸಬೇಕು. ಅರಿಸಿನ, ಶುಂಠಿ, ಕಾಳು ಮೆಣಸು, ಜೀರಿಗೆ ಮೊದಲಾದ ಮಸಾಲೆ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸಬೇಕು. ರಾತ್ರಿ ಮೊಸರು ಸೇವಿಸ ಕೂಡದು. ಅನ್ನವನ್ನು ಮತ್ತೆಮತ್ತೆ ಬಿಸಿ ಮಾಡಿ ಬಳಸಲೇಬಾರದು. ಊಟವಾದ ಕೂಡಲೇ ಸ್ನಾನ ಮಾಡಬಾರದು. ಹಗಲಿನಲ್ಲಿ ನಿದ್ದೆ ಮಾಡುವುದನ್ನು ತಪ್ಪಿಸಬೇಕು.
ದಿನಚರಿ ಪಾಲಿಸಿ :
ಪ್ರತಿಯೊಬ್ಬರೂ ದಿನಚರಿಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅಭ್ಯಂಗ ಸ್ನಾನ, ನಿಯಮಿತ ವ್ಯಾಯಾಮ ಮಾಡುವುದು ಅಗತ್ಯ. ಅಲ್ಲದೇ ಸಮಯಕ್ಕೆ ಸರಿಯಾಗಿ ಮಲಗುವ ಕ್ರಮ ರೂಢಿಸಿಕೊಳ್ಳಬೇಕು. ರಾತ್ರಿ ದೀರ್ಘಕಾಲದವರೆಗೆ ಎಚ್ಚರವಾಗಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಲಮೂತ್ರ ವಿಸರ್ಜನೆ, ಆಕಳಿಕೆ, ಅಳು, ಹಸಿವು, ಬಾಯಾರಿಕೆ, ಸೀನುವಿಕೆ, ನಿದ್ರೆ, ಕೆಮ್ಮು, ವಾಂತಿ ಮೊದಲಾದವುಗಳನ್ನು ತಡೆಹಿಡಿಯಬಾರದು.
ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಯೋಗಾಭ್ಯಾಸವನ್ನು ಸೇರಿಸಿಕೊಳ್ಳಬೇಕು. ಭಂಗಿಗಳು, ಉಸಿರಾಟದ ತಂತ್ರಗಳ ಸರಳ ಮತ್ತು ಪರಿಣಾಮಕಾರಿ ಅನುಕ್ರಮವೆಂದರೆ ಸೂರ್ಯ ನಮಸ್ಕಾರ. ಈ ಅಭ್ಯಾಸವು ನಮ್ಮದೇಹ ಮತ್ತು ಮನಸ್ಸಿಗೆ ಜಾಗೃತಿ ಮೂಡಿಸುತ್ತದೆ ಮತ್ತು ದೇಹಾರೋಗ್ಯದ ಬಗ್ಗೆ ಪ್ರಜ್ಞಾಪೂರ್ವಕವಾಗಿರಲು ಸಹಾಯ ಮಾಡುತ್ತದೆ.
ಋತುಚರ್ಯೆ ಪಾಲಿಸಿ :
ನಮ್ಮ ಆಹಾರ ಮತ್ತು ಚಟುವಟಿಕೆಗಳ ಆಯ್ಕೆಯು ಪ್ರಕೃತಿಯಲ್ಲಾಗುವ ಬದಲಾವಣೆಗಳೊಂದಿಗೆ ಹೊಂದಿಕೆಯಾಗಬೇಕು. ಪ್ರತಿ ಋತುವಿನಲ್ಲೂ ದೇಹಾರೋಗ್ಯಕ್ಕೆ ಸಂಬಂಧಪಟ್ಟಂತೆ ಸವಾಲುಗಳು ಎದುರಾಗುತ್ತವೆ. ಇದಕ್ಕಾಗಿ ಆಯುರ್ವೇದವು ಪ್ರತಿ ಋತುಗಳಿಗೆ ನಿರ್ದಿಷ್ಟ ಆಹಾರ ಮತ್ತು ಜೀವನಶೈಲಿ ಅಭ್ಯಾಸಗಳನ್ನು ಸೂಚಿಸಿದೆ.
ಚಳಿಗಾಲದಲ್ಲಿ ಗೋಧಿ, ಅಕ್ಕಿ, ಕಬ್ಬಿನ ರಸ, ಕಪ್ಪು ಧಾನ್ಯಗಳು, ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು. ಮಳೆಗಾಲದಲ್ಲಿ ಕೂಡಿಟ್ಟ ಹಳೆಯ ಸಿರಿಧಾನ್ಯಗಳಲ್ಲಿ, ಹಸುರು ಸೊಪ್ಪು, ಹಸುರು ಧಾನ್ಯ, ತುಪ್ಪ, ಜೇನು ತುಪ್ಪ ಸೇರಿಸಿ ಮಾಡಿದ ಸೂಪ್‌ಗ್ಳನ್ನು ಆಹಾರದಲ್ಲಿ ಬಳಸಿಕೊಳ್ಳಬೇಕು. ಬೇಸಗೆಯಲ್ಲಿ ಅಕ್ಕಿ, ಬಾಳೆಹಣ್ಣು, ಹಲಸಿನ ಹಣ್ಣು, ಸಿಹಿ ಬೆರೆಸಿದ ಎಮ್ಮೆ ಹಾಲನ್ನು ಸೇವಿಸಬೇಕು.
ಪ್ರತಿಯೊಬ್ಬರೂ ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಜಾಗೃತರಾಗಿರಬೇಕು. ದೇಹದ ಯಾವುದೇ ಭಾಗದಲ್ಲಿ ಮುಖ್ಯವಾಗಿ ಕುತ್ತಿಗೆ, ತೋಳು, ತೊಡೆ ಸಂದುಗಳಲ್ಲಿ ಅಸಹಜ ಬೆಳವಣಿಗೆ ಕಂಡು ಬಂದರೆ, ಚರ್ಮದ ಬಣ್ಣ ಬದಲಾಗಿದ್ದರೆ, ನೋವು, ಉರಿಯೂತ ಅನುಭವಿಸುತ್ತಿದ್ದರೆ ಇದನ್ನು ಕಡೆಗಣಿಸದೆ ವೈದ್ಯರ ಸಲಹೆ ಪಡೆಯುವುದು ಬಹುಮುಖ್ಯ. ಯಾಕೆಂದರೆ ಇದು ಕ್ಯಾನ್ಸರ್‌ನ ಲಕ್ಷಣವಾಗಿರುವ ಸಾಧ್ಯತೆಯೂ ಇರುತ್ತದೆ.
ಡಾ| ಮೇಘನಾ, ಡಬ್ಲಿನ್, ಐರ್ಲೆಂಡ್