Advertisement

ಅಯೋಧ್ಯೆ ತೀರ್ಪು: ರಾಜ್ಯದಲ್ಲೂ ಬಿಗಿ ಭದ್ರತೆ ; ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

09:22 AM Nov 09, 2019 | Hari Prasad |

ಬೆಂಗಳೂರು: ಅಯೋಧ್ಯೆ – ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಶನಿವಾರ ಪ್ರಕಟಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಭದ್ರತೆಯನ್ನು ಬಿಗುಗೊಳಿಸಲಾಗಿದೆ. ರಾಜ್ಯದ ಹಲವು ಸೂಕ್ಷ್ಮಪ್ರದೇಶಗಳಲ್ಲಿ ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Advertisement

– ರಾಜ್ಯದಲ್ಲಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.

– ಕುವೆಂಪು, ದಾರವಾಢ, ಮೈಸೂರು ಸೇರಿದಂತೆ ಹಲವು ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

– ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಬಳೆ, ಕಾಸರಗೋಡು, ಚಂದೇರ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನವಂಬರ್ 11ರ ಮಧ್ಯರಾತ್ರಿ 12 ಗಂಟೆಯವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿ ಕಾಸರಗೋಡು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ:
– ಬೆಂಗಳೂರು ನಗರಾದ್ಯಂತ 144 ಸೆಕ್ಷನ್ ಜಾರಿ. ಬೆಳಿಗ್ಗೆ 07 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ.
– ರಾಜ್ಯಾದ್ಯಂತ ಶನಿವಾರ ಮದ್ಯಮಾರಾಟ ನಿಷೇಧ. ಬೆಳಿಗ್ಗೆ 06 ಗಂಟೆಯಿಂದಲೇ ಮದ್ಯ ಮಾರಾಟ ಇಲ್ಲ.
– ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮತ್ತು ಪ್ರತಿಭಟನೆ ಎರಡೂ ನಿಷೇಧ
– 18 ಡಿಸಿಪಿ, 34 ಎ.ಸಿ.ಪಿ., 08 ಸಾವಿರ ಪೊಲೀಸರ ನಿಯೋಜನೆ.
– ಫೇಸ್ಬುಕ್, ವಾಟ್ಸ್ಯಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಭದ್ರತೆ
ಆಯೋಧ್ಯೆ ತೀರ್ಪು ಶನಿವಾರ ಪ್ರಕಟಗೊಳ್ಳುವ ಹಿನ್ನಲೆಯಲ್ಲಿ ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಬಂದೋಬಸ್ತು ಕೈಗೊಳ್ಳಲಾಗಿದೆ. ಶುಕ್ರವಾರ ರಾತ್ರಿಯಿಂದಲೇ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆಯಕಟ್ಟಿನ ಜಾಗದಲ್ಲಿ ನಾಕಾಬಂದಿ ಅಳವಡಿಸಲಾಗುತ್ತಿದೆ.

ಶನಿವಾರ ಬೆಳಿಗ್ಗೆ 6 ಗಂಟೆಯಿಂದ ದ.ಕ. ಜಿಲ್ಲೆಯಲ್ಲಿ ಎಲ್ಲಾ ರೀತಿಯ ಮದ್ಯದಂಗಡಿ, ವೈನ್ ಶಾಪ್, ಬಾರ್ & ರೆಸ್ಟೋರೆಂಟ್ ಗಳು 24 ಗಂಟೆಗಳ ಕಾಲ ಬಂದ್. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ. ಕಟ್ಟು ನಿಟ್ಟಾಗಿ ಆದೇಶ ಜಾರಿಗೆ ಅಬಕಾರಿ ಇಲಾಖೆಗೆ ನಿರ್ದೇಶನ

ಮಂಗಳೂರು ನಗರ ವ್ಯಾಪ್ತಿಯಲ್ಲಿ  ಬಂದೋಬಸ್ತಿಗೆ ಈಗಾಗಲೇ 800 ಪೊಲೀಸರು ಹಾಗೂ 15 ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ತುಕುಡಿಯನ್ನು ಕೂಡ ನಗರದ ಆಯಕಟ್ಟಿನ ಜಾಗದಲ್ಲಿ  ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಂಗಳೂರು ಕಮಿಷನರೇಟ್‌ ವ್ಯಾಪ್ತಿ ಹೊರತುಪಡಿಸಿದ ಭಾಗದಲ್ಲಿಯೂ ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಸಂಬಂಧ 900 ಪೊಲೀಸರು, 5 ಕೆಎಸ್‌ಆರ್‌ಪಿ ಹಾಗೂ 5 ಡಿ.ಆರ್‌. ಪೊಲೀಸರ ತುಕುಡಿಯನ್ನು  ಕಾನೂನು ಸುವ್ಯವಸ್ಥೆ ಪಾಲನೆಗೆ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಲಕ್ಷ್ಮೀ ಪ್ರಸಾದ್‌ ಅವರು ಕೂಡ “ಉದಯವಾಣಿ’ಗೆ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ
ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಸುದ್ದಿಗಳನ್ನು ಹಾಕದಂತೆ, ಶೇರ್ ಮಾಡದಂತೆ ಮತ್ತು ಯಾವುದೇ ರೀತಿಯ ಹಿಂಸಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಬಂದೋಬಸ್ತ್ : ಶಾಲೆಗಳಿಗೆ ರಜೆ
ಶನಿವಾರ ರಾಮ ಜನ್ಮಭೂಮಿ ವಿವಾದದ ಐತಿಹಾಸಿಕ ತೀರ್ಪು ಬರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ ಎಂದು ಅಪರ ಜಿಲ್ಲಾದಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.

ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ಹಿನ್ನೆಲೆ, ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಇರಲು ಸೂಚಿಸಲಾಗಿದೆ. ಹೊರಗಿನಿಂದ ಪೊಲೀಸ್ ತುಕಡಿಗಳನ್ನು ಪಡೆದುಕೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಪರಿಸ್ಥಿತಿ ಅವಲೋಕಿಸಿ 144 ಸೆಕ್ಷನ್ ಅಡಿ ನಿಷೇದಾಜ್ನೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಅ.ಬಗಾದಿ ಗೌತಮ್ ತಿಳಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಬೆಳಗಾವಿ : ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆ
ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ. 9ರಂದು ಮಹತ್ವದ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಜಿಲ್ಲಾಡಳಿತ ಬೆಳಗಾವಿಯಲ್ಲಿ ಶಾಲಾ-ಕಾಲೇಜುಗಳಿಗೆ ಯಾವುದೇ ರಜೆ ಘೋಷಣೆ ಮಾಡಿಲ್ಲ.

ಅಯೋಧ್ಯೆ ತೀರ್ಪು, ಕೋಟೆನಾಡಲ್ಲಿ ಕಟ್ಟೆಚ್ಚರ
ಚಿತ್ರದುರ್ಗ: ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ತಿಳಿಸಿದ್ದಾರೆ. ನಗರದ ವಿವಿಧೆಡೆ ನಾಲ್ಕು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಿಲಾಗಿದೆ. 6 ಡಿಎಆರ್ ತಂಡಗಳು ಕೂಡಾ ಬಂದೋಬಸ್ತ್ ನಿಯೋಜನೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ನಾಳೆ ಬೆಳಗ್ಗೆ 8 ಗಂಟೆಯಿಂದ ಹಾವೇರಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ. ಪ್ರಮುಖ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ.

Advertisement

Udayavani is now on Telegram. Click here to join our channel and stay updated with the latest news.

Next