ಆಗ್ರಾ: ಜಗದ್ವಿಖ್ಯಾತ ತಾಜ್ ಮಹಲ್‌ನಲ್ಲಿ ಧರ್ಮ ಸಂಸತ್ ಆಯೋಜಿಸಬೇಕೆಂದು ಕರೆ ಕೊಟ್ಟಿದ್ದ ಅಯೋಧ್ಯೆಯ ಧರ್ಮಗುರುವೊಬ್ಬರನ್ನು ತಾಜ್ ಮಹಲ್‌ಗೆ ತೆರಳುವುದನ್ನು ಆಗ್ರಾ ಪೊಲೀಸರು ತಡೆದಿದ್ದಾರೆ.
ಇತ್ತೀಚೆಗೆ, ತಾಜ್‌ಮಹಲ್‌ನಲ್ಲಿ ಧರ್ಮಸಂಸದ್ ಆಯೋಜಿಸುವಂತೆ ಕರೆ ಕೊಟ್ಟಿದ್ದ ತಪಸ್ವಿನಿ ಛಾವ್ನಿ ಪೀಠಾಧಿಪತಿಯಾದ ಜಗದ್ಗುರು ಪರಮಹಂಸಾಚಾರ್ಯ ಅವರು ಮಂಗಳವಾರ ತಾಜ್ ಮಹಲ್‌ಗೆ ಭೇಟಿ ನೀಡಲು ಪ್ರಯತ್ನಿಸಿದ್ದರು.
ಆಗ್ರಾದ ಹೊರವಲಯದಲ್ಲಿದ್ದಾಗಲೇ ಅವರನ್ನು ತಡೆದ ಪೊಲೀಸರು, ಅವರನ್ನು ಆಗ್ರಾಹ ಹೊರವಲಯದ ಬೇರೊಂದು ಸ್ಥಳಕ್ಕೆ ಕರೆದೊಯ್ದು ಮಾತುಕತೆ ನಡೆಸಿ ವಾಪಸ್ ಕಳುಹಿಸಿದರು ಎಂದು ಹೇಳಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, “ನಾವು ಜಗದ್ಗುರುಗಳನ್ನು ಬಂಧಿಸಿಲ್ಲ ಅಥವಾ ವಶಕ್ಕೂ ಪಡೆದಿಲ್ಲ. ತಾಜ್ ಮಹಲ್‌ನಲ್ಲಿ ಧಾರ್ಮಿಕ ಚಟುವಟಿಕೆ ನಡೆಸಬೇಕೆಂದು ಕರೆಕೊಟ್ಟಿದ್ದರಿಂದ ಅವರನ್ನು ತಾಜ್‌ಮಹಲ್‌ಗೆ ಭೇಟಿ ನೀಡದಂತೆ ಮಾರ್ಗ ಮಧ್ಯೆಯೇ ತಡೆದು ಹಿಂದಕ್ಕೆ ಕಳುಹಿಸಿದ್ದೇವಷ್ಟೇ’ ಎಂದು ಹೇಳಿದ್ದಾರೆ.