ಹೊಸದಿಲ್ಲಿ: ಅಯೋಧ್ಯೆ ಜಮೀನು ಮಾಲಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಅನಂತರ ಜನರಲ್ಲಿ ಜನ ಜಾಗೃತಿ ಮೂಡಿಸಿ ದೇಶದಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಹಿಂದೂ ಮತ್ತು ಮುಸ್ಲಿಂ ಧರ್ಮಗುರುಗಳು ರವಿವಾರ ಸಂಕಲ್ಪ ಮಾಡಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರು ಭಾರತದ ವಿವಿಧ ಮಠಾಧೀಶರ ಹಾಗೂ ಧಾರ್ಮಿಕ ಮುಖಂಡರ ಜತೆಗೆ ರವಿವಾರ ದಿಲ್ಲಿಯಲ್ಲಿನ ತನ್ನ ನಿವಾಸದಲ್ಲಿ ಸಭೆ ನಡೆಸಿದರು. ಉಡುಪಿ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ, ಯೋಗಗುರು ಬಾಬಾ ರಾಮದೇವ್ ಹಾಗೂ ಮುಸ್ಲಿಂ ಧರ್ಮದ ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಮುಖವಾಗಿ, ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನಂತರ, ಮುಂದೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸ ಲಾಯಿತು. ದೇಶದ ಒಳಗೆ ಹಾಗೂ ಹೊರಗೆ ಇರುವ ಕೆಲವು ರಾಷ್ಟ್ರವಿರೋಧಿ ಶಕ್ತಿಗಳು ಭಾರತೀಯ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಆತಂಕ ಎದ್ದಿದ್ದು, ಆ ಹಿನ್ನೆಲೆಯಲ್ಲಿ ಕೋಮು ಸೌಹಾರ್ದ, ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರ ನೆರವನ್ನು ಕೋರಲಾಯಿತು. ಡಿಜಿಟಲ್ ಮಾಧ್ಯಮಗಳ ಮೂಲಕ ಸಮಾಜವನ್ನು ಒಡೆಯುವಂಥ ಕೆಲಸಗಳು ನಡೆಯಬಹುದು ಎಂಬ ಬಗ್ಗೆ ಮಠಾಧೀಶರ ಗಮನ ಸೆಳೆದ ದೋವಲ್, ಅಂಥ ಯಾವುದೇ ಪ್ರಯತ್ನಗಳು ಸಫಲವಾಗದಂತೆ ಸಮಾಜದಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ಮಠಾಧೀಶರಲ್ಲಿ ವಿನಂತಿಸಿಕೊಂಡರು ಎಂದು ಸಭೆಯ ಅನಂತರ ಹೊರಡಿಸಲಾದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ದೋವಲ್ ಮನವಿಗೆ ಸ್ಪಂದಿಸಿದ ಧಾರ್ಮಿಕ ಮುಖಂಡರು, ತಮ್ಮ ಅನುಯಾಯಿಗಳ ಮೂಲಕ ಸಮಾಜದಲ್ಲಿ ಜನಜಾಗೃತಿಯನ್ನು ಮೂಡಿಸಿ, ಯಾವುದೇ ಬಾಹ್ಯಶಕ್ತಿಗಳಿಂದ ಸಮಾಜ ಒಡೆಯದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.
ವಿವಿಧ ಮತ ಧರ್ಮಗಳಲ್ಲಿ ಭಿನ್ನತೆ ಇದ್ದರೂ ಸಾಮ್ಯಗಳೂ ಇವೆ. ನಾವು ಪರಧರ್ಮ ಸಹಿಷ್ಣುಗಳು. ಅಯೋಧ್ಯೆ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲರೂ ಗೌರವಿಸಿದ್ದಾರೆ. ಇದು ವಿಶ್ವ ಕಲ್ಯಾಣ ಮತ್ತು ರಾಷ್ಟ್ರದ ಪ್ರಗತಿಗೆ ಕಾರಣವಾಗಬೇಕು. ಮುಂದಿನ ಎಲ್ಲ ಕೆಲಸಗಳಿಗೆ ಸಮನ್ವಯ ಸಮಿತಿ ರಚನೆಯಾಗಬೇಕು
– ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ