Advertisement

Ayodhya; ಜ.23ರಿಂದಲೇ ಸಾರ್ವಜನಿಕರಿಗೆ ರಾಮ್‌ಲಲ್ಲಾ ದರ್ಶನ ಭಾಗ್ಯ: ಟ್ರಸ್ಟ್‌ ಘೋಷಣೆ

12:27 AM Jan 16, 2024 | Team Udayavani |

ಹೊಸದಿಲ್ಲಿ: ಆದಷ್ಟು ಬೇಗ ರಾಮಲಲ್ಲಾನ ದರ್ಶನ ಮಾಡಬೇಕು ಎಂದು ಕಾಯುತ್ತಿದ್ದೀರಾ? ಜನಸಾಮಾನ್ಯರಿಗೆ ದರ್ಶನ ಯಾವಾಗ ಸಿಗುತ್ತದೋ ಎಂದು ಯೋಚಿಸುತ್ತಿದ್ದೀರಾ? ಅಯೋಧ್ಯೆಯ ರಾಮಮಂದಿರದಲ್ಲಿ ವಿರಾಜಮಾನನಾಗಲಿರುವ ಬಾಲರಾಮನ ದರ್ಶನಕ್ಕೆ ಕಾಯುತ್ತಿರುವ ದೇಶವಾಸಿಗಳಿಗೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸೋಮವಾರ ಸಿಹಿಸುದ್ದಿ ಕೊಟ್ಟಿದೆ. ಇದೇ 23ರಿಂದಲೇ ಸಾರ್ವಜನಿಕರ ದರ್ಶನಕ್ಕೆ ರಾಮಮಂದಿರ ಮುಕ್ತವಾಗಲಿದೆ ಎಂದು ತಿಳಿಸಿದೆ.

Advertisement

ಹೌದು, ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆದ ಮಾರನೇ ದಿನವೇ ರಾಮ್‌ಲಲ್ಲಾನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ಪ್ರಾಣ ಪ್ರತಿಷ್ಠೆ ಕಾರ್ಯವು ಮುಂದಿನ ಸೋಮವಾರ ಮಧ್ಯಾಹ್ನ 12.20ಕ್ಕೆ ಆರಂಭವಾಗಿ 1 ಗಂಟೆಗೆ ಪೂರ್ಣಗೊಳ್ಳಲಿದೆ. ಜ.22ರಿಂದಲೇ ರಾಮ್‌ಲಲ್ಲಾನ ದರ್ಶನಕ್ಕೆ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗುವುದು ಎಂದು ಅವರು ಹೇಳಿದ್ದಾರೆ.

ಬಂಗಾಳದ ಚಂದನನಗರದ ತಂತ್ರಜ್ಞರಿಂದ ವಿದ್ಯುದ್ದೀಪಾಲಂಕಾರ

ಶ್ರೀರಾಮಮಂದಿರ ಆವರಣದ 10 ಕಿ.ಮೀ. ರಸ್ತೆಯಲ್ಲಿ ಪ.ಬಂಗಾಳದ ಚಂದನನಗರ ತಂತ್ರಜ್ಞರು ವಿದ್ಯುದ್ದೀಪಾಲಂಕಾರ ನಡೆಸಿಕೊಡಲಿದ್ದಾರೆ. ಇಡೀ ದೇಶದಲ್ಲೇ ಈ ಪ್ರದೇಶದ ತಂತ್ರಜ್ಞರ ದೀಪಾಲಂಕಾರ ದೊಡ್ಡ ಹೆಸರು ಹೊಂದಿದೆ. ವಿಶ್ವದ ವಿವಿಧ ಭಾಗಗಳ ಸೌಂದರ್ಯವನ್ನು ಪ್ರತಿಫ‌ಲಿಸಿದ ಖ್ಯಾತಿ ಈ ನಗರದ ತಂತ್ರಜ್ಞರಿಗಿದೆ.

ಹೆಂಗಳೆಯರಿಗೆ ಉಚಿತ ಬಳೆಗಳು: ಅಯೋಧ್ಯೆಯ ಪ್ರಾಣ ಪ್ರತಿಷ್ಠೆಗೆ ತೆರಳುವ ಮಹಿಳೆಯರಿಗೆ ಶ್ರೀರಾಮ, ಸೀತೆ ಮತ್ತು ಹನುಮಾನ್‌ನ ಚಿತ್ರವುಳ್ಳ ಬಳೆಗಳು ಮತ್ತು ಬ್ರೇಸ್‌ಲೆಟ್‌ಗಳನ್ನು ಉಚಿತವಾಗಿ ನೀಡುವುದಾಗಿ ಉತ್ತರಪ್ರದೇಶದ ಫಿರೋಜಾಬಾದ್‌ನ ವರ್ತಕ ಆನಂದ್‌ ಅಗರ್ವಾಲ್‌ ಘೋಷಿಸಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಕುಶಲಕರ್ಮಿಗಳು ಈ ಬಳೆಗಳನ್ನು ಅತ್ಯಂತ ಬದ್ಧತೆಯಿಂದ ತಯಾರಿಸಿದ್ದಾರೆ. ಒಟ್ಟು 10 ಸಾವಿರ ಬಳೆಗಳನ್ನು ವಿತರಿಸಲು ಯೋಜಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Advertisement

ಮಾಂಸ, ಮದ್ಯ ನಿಷೇಧ: ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಜ.22ರಂದು ರಾಜ್ಯಾದ್ಯಂತ ಮದ್ಯ, ಮಾಂಸ ಮಾರಾಟ ನಿಷೇಧಿಸಿ ಸೋಮವಾರ ಹರ್ಯಾಣ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ, ನೋಯ್ಡಾ, ಗ್ರೇಟರ್‌ ನೋಯ್ಡಾದಲ್ಲಿ ಜ.22ರಂದು ಮದ್ಯ ಮಾರಾಟವಿರುವುದಿಲ್ಲ ಎಂದು ಗೌತಮಬುದ್ಧ ನಗರ ಜಿಲ್ಲಾಡಳಿತ ಘೋಷಿಸಿದೆ.

ರೈಲು ಸಂಚಾರ ವ್ಯತ್ಯಯ: ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರೈಲು ಹಳಿಗಳ ಡಬ್ಲಿಂಗ್‌ ಮತ್ತು ವಿದ್ಯುದೀಕರಣ ಕಾಮಗಾರಿಯು ಭರದಿಂದ ಸಾಗಿದೆ. ಹೀಗಾಗಿ, 16ರಿಂದ 22 ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ವಂದೇ ಭಾರತ್‌ ಸೇರಿದಂತೆ 10 ರೈಲುಗಳ ಸಂಚಾರ ರದ್ದು ಮಾಡಲಾಗಿದೆ. 35 ರೈಲುಗಳ ಪಥ ಬದಲಿಸಲಾಗಿದೆ ಎಂದೂ ಹೇಳಿದ್ದಾರೆ.

ರಾಮಲಲ್ಲಾನ ಹೊಸ ಉಡುಗೆ, ಧ್ವಜ ಹಸ್ತಾಂತರ

ಪ್ರಾಣ ಪ್ರತಿಷ್ಠೆಗೆ ಮಂಗಳವಾರದಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಸೋಮವಾರವೇ ಬಾಲರಾಮನ ಹೊಸ ವಸ್ತ್ರ ಮತ್ತು ಧ್ವಜವನ್ನು ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಅವರಿಗೆ ಹಸ್ತಾಂತರಿಸಲಾಗಿದೆ. ಪ್ರಾಣ ಪ್ರತಿಷ್ಠೆ ಮುಗಿದ ಬಳಿಕ ರಾಮ್‌ಲಲ್ಲಾ ಈ ವಸ್ತ್ರದಲ್ಲೇ ಕಂಗೊಳಿಸಲಿದ್ದಾನೆ. ಅಯೋಧ್ಯೆಯ ರಾಮದಳದ ಅಧ್ಯಕ್ಷ ಕಲ್ಕಿ ರಾಮ್‌ದಾಸ್‌ ಮಹರಾಜ್‌ ಅವರು ಈ ಉಡುಗೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇದೇ ವೇಳೆ, ಬಂಕೆ ಬಿಹಾರಿ ದೇಗುಲದ ಭಕ್ತರು ಸೋಮವಾರ ಬೆಳ್ಳಿಯ ಶಂಖ, ಕೊಳಲು ಮತ್ತು ಹಲವು ಆಭರಣಗಳನ್ನು ಕೂಡ ಆಚಾರ್ಯ ಸತ್ಯೇಂದ್ರ ದಾಸ್‌ ಅವರಿಗೆ ಹಸ್ತಾಂತರಿಸಿದ್ದಾರೆ.

ಜ. 22ರಂದು ರಾಮಲಲ್ಲಾನ ದರ್ಶನವಾಗಲಿದೆ: ಪ್ರಧಾನಿ ಮೋದಿ

ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಆಹ್ವಾನ ದೊರೆತಿರುವುದು ನನ್ನ ಅದೃಷ್ಟ. ಜ. 22ರಂದು ರಾಮಲಲ್ಲಾ ನಮಗೆ ದರ್ಶನ ನೀಡಲಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಐತಿಹಾಸಿಕ ದಿನದ ಹಿನ್ನೆಲೆಯಲ್ಲಿ ನಾನು ಈಗಾಗಲೇ 11 ದಿನಗಳ ವಿಶೇಷ ಅನುಷ್ಠಾನ ಕೈಗೊಂಡಿದ್ದೇನೆ ಎಂದೂ ಅವರು ತಿಳಿಸಿದ್ದಾರೆ. ಸೋಮವಾರ ಪ್ರಧಾನಮಂತ್ರಿ ಆವಾಸ್‌ ಯೋಜನೆ-ಗ್ರಾಮೀಣ(ಪಿಎಂಎವೈ-ಜಿ) ಫ‌ಲಾನುಭವಿಗಳನ್ನು ಉದ್ದೇಶಿಸಿ ವರ್ಚುವಲ್‌ ಭಾಷಣದ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ನಿವೇಶನ ಖರೀದಿಸಿದ ಅಮಿತಾಭ್‌ ಬಚ್ಚನ್‌

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಅಯೋಧ್ಯೆಯಲ್ಲಿ ಮನೆ ನಿರ್ಮಿಸಲು 14.5 ಕೋಟಿ ರೂ.ಗೆ ನಿವೇಶನ ಖರೀದಿ ಸಿದ್ದಾರೆ. ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದವರು. ಮುಂಬಯಿ ಮೂಲದ ಡೆವಲಪರ್‌ ಅಯೋಧ್ಯೆಯಲ್ಲಿ 51 ಎಕ್ರೆಯಲ್ಲಿ “ದಿ ಸರಯೂ’ ಹೆಸರಿನಲ್ಲಿ ಪ್ಲಾಟ್‌ಗಳನ್ನು ಅಭಿವೃದ್ಧಿಪಡಿ ಸಿದೆ. 10,000 ಚದರ ಅಡಿಯಲ್ಲಿ ಬಿಗ್‌ಬಿ ಇಲ್ಲಿ ಮನೆ ನಿರ್ಮಿಸಲಿದ್ದಾರೆ ಎನ್ನಲಾಗಿದೆ.

ನಟಿ ಹೇಮಾಮಾಲಿನಿಯಿಂದ ರಾಮಾಯಣ ನೃತ್ಯರೂಪಕ

ಬಾಲಿವುಡ್‌ನ‌ “ಡ್ರೀಮ್‌ ಗರ್ಲ್’ ಎಂದೇ ಖ್ಯಾತಿಯಾಗಿರುವ ನಟಿ ಹೇಮಾಮಾಲಿನಿ 17ರಂದು ಅಯೋಧ್ಯೆಯಲ್ಲಿ ರಾಮಾಯಣ ಕಥೆ ಆಧಾರಿತ ನೃತ್ಯ ನಿರೂಪಕ ಪ್ರದರ್ಶಿಸಲಿದ್ದಾರೆ. ಈ ಕುರಿತು ಟ್ವಿಟರ್‌(ಎಕ್ಸ್‌)ನಲ್ಲಿ ಅವರೇ ಮಾಹಿತಿ ನೀಡಿದ್ದಾರೆ.

ಅಯೋಧ್ಯೆಯಲ್ಲಿ ವಿಶ್ವದ ಮೊದಲ ಸಸ್ಯಾಹಾರಿ 7 ಸ್ಟಾರ್‌ ಹೊಟೇಲ್‌!

ಕೇವಲ ಸಸ್ಯಾಹಾರವನ್ನಷ್ಟೇ ಪೂರೈಸುವಂಥ ವಿಶ್ವದ ಮೊದಲ 7 ಸ್ಟಾರ್‌ ಹೋಟೆಲ್‌ ಅಯೋಧ್ಯೆಯಲ್ಲಿ ತಲೆಎತ್ತಲಿದೆ. ನಗರದಲ್ಲಿ ಹೋಟೆಲ್‌ ನಿರ್ಮಾಣಕ್ಕೆ 25 ಪ್ರಸ್ತಾವನೆಗಳು ನಮ್ಮ ಮುಂದೆ ಬಂದಿದ್ದು, ಆ ಪೈಕಿ ಶುದ್ಧ ಸಸ್ಯಾಹಾರಿ ಸೆವೆನ್‌ ಸ್ಟಾರ್‌ ಹೋಟೆಲ್‌ ಕೂಡ ಒಂದು ಎಂದು ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

19ರಿಂದ ಲಕ್ನೋ-ಅಯೋಧ್ಯೆ ಹೆಲಿಕಾಪ್ಟರ್‌ ಸೇವೆ

ಇದೇ 19ರಿಂದ ಉತ್ತರಪ್ರದೇಶದ ಲಕ್ನೋ ದಿಂದ ಅಯೋಧ್ಯೆಗೆ ಹೆಲಿಕಾಪ್ಟರ್‌ ಸೇವೆ ಆರಂಭವಾಗಲಿದೆ. ಇದಕ್ಕಾಗಿ 6 ಹೆಲಿಕಾಪ್ಟರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಈ ಪೈಕಿ ಮೂರು ಲಕ್ನೋದಿಂದ ಅಯೋಧ್ಯೆಗೆ, ಉಳಿದ ಮೂರು ಅಯೋಧ್ಯೆಯಿಂದ ಲಕ್ನೋಗೆ ಸಂಚರಿಸಲಿವೆ ಎಂದು ಅಯೋಧ್ಯೆ ಮಾಹಿತಿ ಇಲಾಖೆ ತಿಳಿಸಿದೆ.

ಮುಂಬಯಿ-ಅಯೋಧ್ಯೆ ವಿಮಾನ ಸೇವೆ ಆರಂಭ

ಇಂಡಿಗೋ ವಿಮಾನಯಾನ ಸಂಸ್ಥೆಯು ಮುಂಬಯಿಯಿಂದ ಅಯೋಧ್ಯೆಗೆ ವಿಮಾನ ಸೇವೆಯನ್ನು ಸೋಮವಾರದಿಂದ ಆರಂಭಿಸಿದೆ. ಸೋಮವಾರ ಮ.12.30ಕ್ಕೆ ಮುಂಬಯಿಯಿಂದ ಹೊರಟ ವಿಮಾನಮ. 2.45ಕ್ಕೆ ಅಯೋಧ್ಯೆ ತಲುಪಿದೆ. ಸಂಜೆ 3.15ಕ್ಕೆ ಅಯೋಧ್ಯೆಯಿಂದ ಹೊರಟು 5.40ಕ್ಕೆ ಮುಂಬಯಿಗೆ ವಾಪಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next