ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ವಿಸ್ತೃತ ಸಮಯ ಗುರುವಾರ ಜಾರಿಗೆ ಬಂದಿದ್ದು, ವಾಹನ ಸಂಚಾರವನ್ನು ನಿಯಂತ್ರಿಸಲು ದೇವಾಲಯದ ಪಟ್ಟಣಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಿರುವುದರಿಂದ ಬೆಳಗ್ಗೆ 6 ರಿಂದ ‘ದರ್ಶನ’ಕ್ಕೆ ಅವಕಾಶ ನೀಡಲಾಗಿದೆ.
ಜನವರಿ 22 ರಂದು ನಡೆದ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಬಳಿಕ ಅಯೋಧ್ಯೆಯಲ್ಲಿ ಭಾರೀ ಜನದಟ್ಟಣೆಯ ನಡುವೆ ಅಧಿಕಾರಿಗಳು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ದೇವಾಲಯದ ಹೊರಭಾಗದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬಂದಿಗಳನ್ನು ನಿಯೋಜಿಸಲಾಗಿದೆ.
ಬಸ್ತಿ, ಗೊಂಡಾ, ಅಂಬೇಡ್ಕರ್‌ನಗರ, ಬಾರಾಬಂಕಿ, ಸುಲ್ತಾನ್‌ಪುರ ಮತ್ತು ಅಮೇಥಿಯಿಂದ ಅಯೋಧ್ಯೆಯಿಂದ 15 ಕಿಲೋಮೀಟರ್ ಮುಂದೆ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಬುಧವಾರ, ದೇವಾಲಯದ ಆಡಳಿತ ಮಂಡಳಿಯು ಜನರು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲು ನಿರ್ಧರಿಸಿತ್ತು. ಮಧ್ಯಾಹ್ನ 12 ರಿಂದ ‘ಆರತಿ’ ಮತ್ತು ‘ಭೋಗ್’ ಗಾಗಿ 15 ನಿಮಿಷಗಳನ್ನು ನಿಗದಿಪಡಿಸಿದೆ. ಮೊದಲು, ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತ್ತು ನಡುವೆ ಎರಡು ಗಂಟೆಗಳ ವಿರಾಮವಿತ್ತು.
ಗುರುವಾರ, ಪೌಷ್ ಪೂರ್ಣಿಮಾ ಸಂದರ್ಭದಲ್ಲಿ ಭಕ್ತರು ದೇವಾಲಯದ ಪಟ್ಟಣಕ್ಕೆ ಆಗಮಿಸಲು ಪ್ರಾರಂಭಿಸಿದ್ದು ಲಕ್ಷಾಂತರ ಜನರು ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ.
ಈ ಹಿಂದೆ ಅಯೋಧ್ಯೆ ಆಯುಕ್ತ ಗೌರವ್ ದಯಾಳ್, “ನಾವು ಪರಿಸ್ಥಿತಿಯನ್ನು ಸರಾಗಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ತುರ್ತು ವಾಹನಗಳು ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಫೈಜಾಬಾದ್‌ಗೆ ತೆರಳಲು ಅನುಮತಿಸುತ್ತಿದ್ದೇವೆ. ಅಯೋಧ್ಯಾ ಪಟ್ಟಣದ ಪ್ರವೇಶವನ್ನು ಇನ್ನೂ ಮುಚ್ಚಲಾಗಿದೆ. ಸಮೀಪದ ಜಿಲ್ಲೆಗಳ ವಾಹನಗಳು ಅಯೋಧ್ಯೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.