ಮೇಲುಕೋಟೆ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಈ ಐತಿಹಾಸಿಕ ಕ್ಷಣ ಭಾರತಾದ್ಯಂತ ಸಂಚಲನ ಮೂಡಿಸಿದೆ. ಪ್ರಖ್ಯಾತ ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆಯ ದನುಷ್ಕೋಟಿ, ಸೀತಾರಣ್ಯ, ಪಟ್ಟಾಭಿರಾಮನ ಸನ್ನಿಗಳು ಶ್ರೀರಾಮ ಚಂದ್ರನಿಗೂ ಚೆಲುವನಾರಾಯಣ ಸ್ವಾಮಿಯ ದಿವ್ಯ ಸನ್ನಿಗೂ ಇರುವ ದೈವೀಕ ಸಂಬಂಧವನ್ನು ಪುಷ್ಟೀಕರಿಸಿದ್ದು ಇಲ್ಲೂ ಸಂಭ್ರಮ ಮನೆ ಮಾಡಿದೆ.
ಅಕ್ಕತಂಗಿ ಕೊಳದ ಬಳಿಯ ಸೀತಾರಾಮನಿಗೆ ಬೆಳಗ್ಗೆ 10ಕ್ಕೆ ಮಹಾಭಿಷೇಕ, 12ಕ್ಕೆ ಅನ್ನಸಂತರ್ಪಣೆ ರಾತ್ರಿ ದೀಪೋತ್ಸವ ನಡೆಯುತ್ತಿದೆ. ತ್ರೇತಾಯುಗದಲ್ಲಿ ಸೀತಾಲಕ್ಷ್ಮಣ ಸಮೇತನಾಗಿ ಶ್ರೀರಾಮಚಂದ್ರ ದಟ್ಟಡವಿಯಾಗಿದ್ದ ಯದುಗಿರಿಯ ಬೆಟ್ಟದ ಮೇಲೆ ಪದಸ್ಪರ್ಷಮಾಡಿ ಬಂಡೆಯಿಂದ ನೀರುಕ್ಕಿಸಿ ಸೀತಾದೇವಿಯ ದಾಹ ತಣಿಸಿ ಕ್ಷೇತ್ರಕ್ಕೆ ದೈವೀಕ ಸ್ಥಾನ ಕರುಣಿಸಿದ್ದಾನೆ. ಇನ್ನು ರಾಮನ ಭೇಟಿ ಸ್ಥಳಗಳ ನಕ್ಷೆ ಯಲ್ಲೂ ಮೇಲುಕೋಟೆಯನ್ನು ಗುರುತಿಸಲಾಗಿದೆ.
ಚೆಲುವನಾರಾಯಣನೇ ರಾಮಪ್ರಿಯ: ಅದಿದೈವ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿ ಸಾಕ್ಷಾತ್ ರಾಮಚಂದ್ರನೇ ಆರಾಸಿದ ದಿವ್ಯಮೂರ್ತಿ ಯಾಗಿದ್ದು, ಈ ಕಾರಣದಿಂದಲೇ ಸ್ವಾಮಿಗೆ ರಾಮಪ್ರಿಯ ಎಂಬ ಹೆಸರಿದೆ. ತ್ರೇತಾಯುಗದಲ್ಲಿ ರಾಮನ ಅನುಜನಾಗಿದ್ದ ಲಕ್ಷಣ ಕಲಿಯುಗದಲ್ಲಿ ರಾಮಾನುಜರಾಗಿ ಅವತರಿಸಿ ಶ್ರೀರಾಮಚಂದ್ರ ಆರಾದಿಸಿದ ಚೆಲುವರಾಯಸ್ವಾಮಿಗೆ ಶ್ರೀರಾಮ ಚಂದ್ರನಿಗೆ ಪಟ್ಟಾಭಿಷೇಕ ನಿಗಯಾಗಿದ್ದ ಪುಷ್ಯ ನಕ್ಷತ್ರದಂದೇ ವೈರಮುಡಿ ಉತ್ಸವ ನಡೆಯುವಂತೆ ಏರ್ಪಾಟು ಮಾಡಿರುವುದು ಐತಿಹಾಸಿಕ ಸಂಗತಿ ಯಾಗಿದೆ. ಇಲ್ಲಿನ ಧನುಷ್ಕೋಟಿ, ಸೀತಾರಣ್ಯ, ಪಟ್ಟಾ ಭಿರಾಮನ ಸನ್ನಿಗಳು ಶ್ರೀಕ್ಷೇತ್ರದೊಂದಿಗೆ ಶ್ರೀರಾಮ ಚಂದ್ರನ ಭಾಂಧವ್ಯದ ಮಹಿಮೆಗೆ ಸಾಕ್ಷಿಯಾಗಿದೆ.
ಬಾಣ ಪ್ರಯೋಗಿಸಿ ನೀರು ತೆಗೆದ ರಾಮ: ಮೇಲುಕೋಟೆಯ ಬಂಡೆಯಲ್ಲಿ ಸೀತಾಲಕ್ಷಣ ಹನುಮನ ಸಮೇತ ರಾಮಚಂದ್ರನ ಉಬ್ಬು ಶಿಲ್ಪವಿದ್ದು ಪುಟ್ಟ ಗುಡಿ ನಿರ್ಮಿಸಲಾಗಿದೆ. ರಾಮನ ಪಾದುಕೆಯೂ ಇಲ್ಲಿದೆ. ಲಕ್ಷ್ಮಣ ಬಾಣ ಪ್ರಯೋಗ ಮಾಡಿದ ಗುರುತೆಂಬಂತೆ ಬಂಡೆಗಳ ಮೇಲೆ ಅಲ್ಲಲ್ಲಿ ಬಾಣದ ಗುರುತುಗಳಿವೆ. ದುಷ್ಕೋಟಿಯಲ್ಲಿ ರಾಮಚಂದ್ರ ಭಾಣಪ್ರಯೋಗ ಮಾಡಿದ ಜಾಗದಲ್ಲಿ ನೀರು ಸದಾಕಾಲ ಸಂಗ್ರವಾಗಿರುತ್ತದೆ.
ಬತ್ತದ ದನುಷ್ಕೋಟಿ ನೀರು : ಮೇಲುಕೋಟೆ ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಸುಮಾರು ಎರಡು ಕಿಮೀ ಕ್ರಮಿಸಿದರೆ 1000 ಅಡಿ ಎತ್ತರದ ಬೆಟ್ಟದ ಮೇಲೆ ಹೆಬ್ಬಂಡೆಯಲ್ಲಿ ದುನುಷ್ಕೋಟಿ ತೀರ್ಥವಿದೆ. ದನುಷ್ಕೋಟಿ ತಲುಪಲು ಬೆಟ್ಟಹತ್ತಿ ಕಡಿದಾದ ಹೆಬ್ಬಂಡೆಯನ್ನು ಇಳಿದು ಸಾಗಬೇಕು. ದನುಷ್ಕೋಟಿ ಮೇಲು ಕೋಟೆ ಬೆಟ್ಟದ ತುತ್ತ ತುದಿಯಲ್ಲಿದ್ದು, ರುದ್ರ ರಮಣೀಯ ದೃಶ್ಯ ವೈಭವ ಹೊಂದಿದೆ. ರಾಮ ಬಾಣ ಪ್ರಯೋಗ ದಿಂದ ಬಂದ ದನುಷ್ಕೋಟಿ ಯಲ್ಲಿನ ತೀರ್ಥ ಎಂಥಹ ಬರಗಾಲವಿದ್ದರೂ ಬತ್ತಿದ ನಿದರ್ಶನ ಇಲ್ಲ. ದಿನನಿತ್ಯ ಅಪಾರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಇಲ್ಲಿ ಹನುಮನ ಗುಡಿಯಿದೆ.