Advertisement

ಅಯೋಧ್ಯೆ ಸಂಧಾನ ವಿಫ‌ಲ

01:57 AM Aug 03, 2019 | Sriram |

ನವದೆಹಲಿ: ಅಯೋಧ್ಯೆಯಲ್ಲಿರುವ ವಿವಾದಿತ ಜಮೀನಿನ ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದನ್ನು ಸಂಧಾನದ ಮೂಲಕ ಪರಿಹರಿಸುವ ಸುಪ್ರೀಂಕೋರ್ಟ್‌ ಪ್ರಯತ್ನ ಕೈಗೂಡಿಲ್ಲ. ಹೀಗಾಗಿ ಆ.6ರಿಂದ ಈ ಹೈಪ್ರೊಫೈಲ್ ಪ್ರಕರಣದ ದೈನಂದಿನ ವಿಚಾರಣೆ ಶುರುವಾಗಲಿದೆ. ಮುಖ್ಯ ನ್ಯಾ. ರಂಜನ್‌ ಗೊಗೋಯ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಶುಕ್ರವಾರ ಈ ಆದೇಶ ನೀಡಿದ್ದು, ಪ್ರಕರಣಕ್ಕೆ ಸದ್ಯದಲ್ಲೇ ತಾರ್ಕಿಕ ಅಂತ್ಯ ಸಿಗುವ ಸುಳಿವು ನೀಡಿದೆ.

Advertisement

ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವದ ತ್ರಿಸದಸ್ಯ ಮಧ್ಯಸ್ಥಿಕೆ ಸಮಿತಿ ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಿತ್ತು. ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠ ಅದನ್ನು ಪರಿಶೀಲಿಸಿತು. ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಇರುವ 2.77 ಎಕರೆ ಪ್ರದೇಶ ಯಾರಿಗೆ ಸೇರಬೇಕು ಎನ್ನುವುದನ್ನು ಸಂಧಾನದ ಮೂಲಕ ಪರಿಹರಿಸಲು ನ್ಯಾಯಾಲಯ ನೇಮಿಸಿದ ಸಮಿತಿಯಿಂದ ಸಾಧ್ಯವಾಗಿಲ್ಲ. ಹೀಗಾಗಿ, ಆ.6ರಿಂದ ದಿನವಹಿ ವಿಚಾರಣೆಗೆ ನಿರ್ಧರಿಸಲಾಗಿದೆ ಎಂದು ನ್ಯಾ.ಎಸ್‌. ಎ.ಬೋಬ್ಡೆ, ನ್ಯಾ.ಡಿ.ವೈ.ಚಂದ್ರ ಚೂಡ್‌, ನ್ಯಾ.ಅಶೋಕ್‌ ಭೂಷಣ್‌, ನ್ಯಾ.ಎಸ್‌. ಎ.ನಝೀರ್‌ ಅವರನ್ನೊಳ ಗೊಂಡ ಪೀಠ ಹೇಳಿತು.

ದಾಖಲೆಗಳನ್ನು ಸಿದ್ಧಗೊಳಿಸಿ: ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳ ಪರ ವಕೀಲರಿಗೆ ಎಲ್ಲಾ ವಾದ- ಪ್ರತಿವಾದಕ್ಕೆ ಸಿದ್ಧತೆ ನಡೆಸಿ ಎಂದು ಹೇಳಿದ ನ್ಯಾಯ ಪೀಠ, ಸುಪ್ರೀಂಕೋರ್ಟ್‌ ರಿಜಿಸ್ಟ್ರಿ ಕೂಡ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಿ ಎಂದು ಸೂಚಿಸಿತು. ‘ವಾದ- ಪ್ರತಿವಾದ ಮಂಡನೆ ಮುಕ್ತಾಯ ಆಗುವಲ್ಲಿಯವರೆಗೆ ದಿನವಹಿ ವಿಚಾರಣೆ ನಡೆಯಲಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಗೊಗೋಯ್‌ ನೇತೃತ್ವದ ಪೀಠ ಹೇಳಿತು.

ಮಾ.8ರಂದು ರಚನೆಯಾಗಿದ್ದ ಸಮಿತಿ: ಹಾಲಿ ಸಮಿತಿಯನ್ನು ಸುಪ್ರೀಂಕೋರ್ಟ್‌ ಮಾ.8ರಂದು ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಎಂ.ಎಂ.ಐ.ಖಲೀಫ‌ುಲ್ಲಾ ಮುಖ್ಯಸ್ಥರಾಗಿ, ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರುಜಿ, ಹಿರಿಯ ನ್ಯಾಯವಾದಿ ಶ್ರೀರಾಂ ಪಂಚು ಅವರನ್ನು ಸದಸ್ಯರನ್ನಾಗಿ ನೇಮಿಸಿ, ಫೈಜಾಬಾದ್‌ನಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಸುವಂತೆ ಸೂಚಿಸಿತ್ತು.

14 ಮೇಲ್ಮನವಿಗಳು: 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ವಿವಾದಿತ 2.77 ಎಕರೆ ಜಮೀನಿನ ಬಗ್ಗೆ ನೀಡಿದ ತೀರ್ಪನ್ನು ಪ್ರಶ್ನಿಸಿ 14 ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಅಲಹಾಬಾದ್‌ ಹೈಕೋರ್ಟ್‌ ವಿವಾದಿತ ಜಮೀನನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ಎಂಬ ಸಂಸ್ಥೆಗಳ ನಡುವೆ ಸಮಾನವಾಗಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು.

Advertisement

ಹಿಂದಿನ ಸಂಧಾನ ಪ್ರಯತ್ನಗಳು
1994- ವಿಶ್ವ ಹಿಂದೂ ಪರಿಷತ್‌ ಮತ್ತು ಅಖೀಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿ ನಡುವಿನ ಮಾತುಕತೆಗಳು ಸುಪ್ರೀಂಕೋರ್ಟ್‌ನಲ್ಲಿ ದಾಖಲು. ಒಂದು ಹಂತದಲ್ಲಿ ಮುರಿದು ಬಿದ್ದ ಸಂಧಾನ. 2003- ಕಂಚಿ ಶಂಕರಾಚಾರ್ಯರಿಂದ ವಿವಾದ ಬಗೆಹರಿಸಲು ಪ್ರಯತ್ನ. ಕಾಶಿ, ಮಥುರಾ ಮತ್ತು ಅಯೋಧ್ಯೆಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು 2003ರ ಜು.1 ರಂದು ಪತ್ರ ರವಾನೆಯಾದ ಬಳಿಕ ಸ್ಥಗಿತಗೊಂಡ ಪ್ರಕ್ರಿಯೆ. 2017 ಮಾ.21- ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಯಾಗಿದ್ದ ಜೆ.ಎಸ್‌.ಖೆಹರ್‌ ಬಿಜೆಪಿ ನಾಯಕ ಡಾ.ಸುಬ್ರ ಹ್ಮಣ್ಯನ್‌ ಸ್ವಾಮಿ ಸಲ್ಲಿಸಿದ್ದ ಮಾಲೀಕತ್ವ ವಿವಾದ ಪರಿಹಾರಕ್ಕಾಗಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆಗೆ ಅವಕಾಶ ಮಾಡಿಕೊಟ್ಟಿ ದ್ದರು ಮತ್ತು ಮಧ್ಯಸ್ಥಿಕೆ ವಹಿಸುವ ಆಸಕ್ತಿ ತೋರಿಸಿದ್ದರು. 2017- ಆರ್ಟ್‌ ಆಫ್ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಮತ್ತು ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಮ್‌ ರಿಝ್ವಿ ಮಾತುಕತೆಯ ಯತ್ನ ನಡೆಸಿದ್ದರೂ, ಫ‌ಲ ಕೊಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next