ಅಯೋಧ್ಯೆ: ಬ್ರಿಟಿಷರ ವಿರುದ್ಧದ 1857ರ ಸಂಗ್ರಾಮದಲ್ಲಿ ಹೋರಾಡಿ ಮಡಿದ ಮೌಲ್ವಿ ಅಹ್ಮದುಲ್ಲಾ ಶಾ ಅವರ ಹೆಸರನ್ನು ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಮಸೀದಿಗೆ ಇಡಲು ಇಂಡೋ ಇಸ್ಲಾಮಿಕ್ ಕಲ್ಚರಲ್ ಟ್ರಸ್ಟ್ ಚಿಂತನೆ ನಡೆಸಿದೆ.
ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಈ ಟ್ರಸ್ಟ್, ಮಸೀದಿಗೆ “ಮೌಲ್ವಿ ಅಹ್ಮದುಲ್ಲಾ ಶಾ ಮಸೀದಿ’ ಎಂದು ನಾಮಕರಣ ಮಾಡುವ ಕುರಿತು ಪರಿಶೀಲಿಸುತ್ತಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದ್ದಾರೆ.
ಅಯೋಧ್ಯೆ ಮಸೀದಿಯನ್ನು ಕೋಮು ಸಾಮರಸ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿಸಲು ಟ್ರಸ್ಟ್ ಉದ್ದೇಶಿಸಿದ್ದು, ಅದೇ ಕಾರಣಕ್ಕಾಗಿ ಇಂಥ ಮೌಲ್ಯಗಳನ್ನು ಪ್ರತಿನಿಧಿಸಿದ ಮತ್ತು ಇಸ್ಲಾಂನ ನೈಜ ಅನುಯಾಯಿಯೂ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದುಲ್ಲಾ ಶಾ ಅವರ ಹೆಸರನ್ನೇ ಮಸೀದಿಗಿಡಲು ಚಿಂತನೆ ನಡೆಸಿದ್ದೇವೆ ಎಂದೂ ಹುಸೇನ್ ಹೇಳಿದ್ದಾರೆ.
ಇದನ್ನೂ ಓದಿ:ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ
1857ರ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಶಾ ಅವರು 1858ರ ಜೂ.5ರಂದು ಹುತಾತ್ಮರಾಗಿದ್ದರು. ಅಹ್ಮದುಲ್ಲಾ ಅವರ ಧೈರ್ಯ, ಶೌರ್ಯ ಹಾಗೂ ಸಂಘಟನಾತ್ಮಕ ಸಾಮರ್ಥ್ಯವನ್ನು ಜಾರ್ಜ್ ಬ್ರೂಸ್ ಮಲ್ಲೇ ಸನ್, ಥಾಮಸ್ ಸೀಟನ್ ಮತ್ತಿತರ ಬ್ರಿಟಿಷ್ ಅಧಿಕಾರಿಗಳೇ ಕೊಂಡಾಡಿದ್ದರು.