Advertisement

ಅಯೋಧ್ಯೆ: ರಾಜಿಗೆ ಸಮಿತಿ: ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ

12:30 AM Mar 09, 2019 | Team Udayavani |

ಹೊಸದಿಲ್ಲಿ: ಅಯೋಧ್ಯೆ ರಾಮಮಂದಿರ ಭೂವಿವಾದವನ್ನು ರಾಜಿ ಸಂಧಾನದ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಮತ್ತೂಂದು ಪ್ರಯತ್ನಕ್ಕೆ ಕೈಹಾಕಿದೆ. ಶುಕ್ರವಾರ ಈ ಕುರಿತ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮೂವರು ಸದಸ್ಯರ ಸಮಿತಿ ರಚಿಸಿ, ಎಂಟು ವಾರಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸು ವಂತೆ ಸೂಚಿಸಿದೆ.

Advertisement

ನಿವೃತ್ತ ನ್ಯಾ| ಎಫ್.ಎಂ. ಖಲೀಫ‌ುಲ್ಲಾ ಈ ಸಮಿತಿಯ ನೇತೃತ್ವ ವಹಿಸಿದ್ದು, ಅಧ್ಯಾತ್ಮ ಗುರು ಶ್ರೀ ರವಿಶಂಕರ್‌ ಮತ್ತು ಹಿರಿಯ ವಕೀಲ ಶ್ರೀರಾಮ್‌ ಪಂಚು ಅವರನ್ನು ಸದಸ್ಯರನ್ನಾಗಿ ಸುಪ್ರೀಂ ಕೋರ್ಟ್‌ ನೇಮಿಸಿದೆ. ಇನ್ನಷ್ಟು ಸದಸ್ಯರನ್ನು ಸಮಿತಿಗೆ ನೇಮಿಸಿಕೊಳ್ಳಲು ಅವಕಾಶವಿದ್ದು, ಅಗತ್ಯವಿದ್ದರೆ ಹೆಚ್ಚಿನ ಕಾನೂನು ನೆರವನ್ನೂ ಪಡೆಯಬಹುದು. ಪ್ರಕರಣದಲ್ಲಿ ಎಲ್ಲ ಭಾಗಿದಾರರಿಗೂ ಮಧ್ಯಸ್ಥಿಕೆದಾರರನ್ನು ಹೆಸರಿಸುವಂತೆ ಕೋರ್ಟ್‌ ಸೂಚಿಸಿದೆ.

ಫೈಜಾಬಾದ್‌ನಲ್ಲಿ ಸಂಧಾನ ಪ್ರಕ್ರಿಯೆ
ಮುಖ್ಯ ನ್ಯಾ| ರಂಜನ್‌ ಗೊಗೊಯ್‌, ನ್ಯಾಯಮೂರ್ತಿಗಳಾದ ಎಸ್‌.ಎ. ಬೊಬ್ದೆ , ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಮತ್ತು ಎಸ್‌.ಎ. ನಜೀರ್‌ ಅವರನ್ನೊಳಗೊಂಡ ಸಂವಿಧಾನ ಪೀಠ ಈ ಆದೇಶ ನೀಡಿದ್ದು, ನಾಲ್ಕು ವಾರಗಳಲ್ಲಿ ಸಮಿತಿ ಪ್ರಗತಿ ವರದಿಯನ್ನು ಸಲ್ಲಿಸಬೇಕಿದೆ. ಉತ್ತರ ಪ್ರದೇಶದ ಫೈಜಾಬಾದ್‌ ನ್ಯಾಯಾಲಯದಲ್ಲಿ ರಾಜಿ ಸಂಧಾನ ನಡೆಯ ಲಿದೆ. ಈ ರಾಜಿ ಸಂಧಾನ ಸಂಪೂರ್ಣ ಗೌಪ್ಯ ವಾಗಿರಲಿದೆ. ಮುದ್ರಣ ಮಾಧ್ಯಮ ಅಥವಾ ಎಲೆಕ್ಟ್ರಾನಿಕ್‌ ಸಹಿತ ಯಾವುದೇ ಮಾಧ್ಯಮವೂ ಇದರ ವರದಿ ಮಾಡುವಂತಿಲ್ಲ ಎಂದು ಕೋರ್ಟ್‌ ಸೂಚಿಸಿದೆ.

ಒವೈಸಿ ಆಕ್ಷೇಪ
ಶ್ರೀ ರವಿಶಂಕರ್‌ ಅವರನ್ನು ಸಂಧಾನ ಸಮಿತಿಗೆ ಆಯ್ಕೆ ಮಾಡಿದ್ದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಆಕ್ಷೇಪಿಸಿದ್ದಾರೆ. ಈ ಹಿಂದೆ ಮುಸ್ಲಿಮರ ವಿರುದ್ಧ  ಶ್ರೀ ರವಿಶಂಕರ್‌ಹೇಳಿಕೆ ನೀಡಿದ್ದರು. ಸಮಿತಿಯಲ್ಲಿ ನಿಷ್ಪಕ್ಷ ವ್ಯಕ್ತಿಗಳು ಇರಬೇಕು. ಭಾರತವು ಸಿರಿಯಾ ಆಗುತ್ತಿದೆ ಎಂದು ಅವರು ಹಿಂದೆ ಹೇಳಿಕೆ ನೀಡಿದ್ದರು. ಇಂಥ ಮನಃಸ್ಥಿತಿಯನ್ನು ದೂರವಿಟ್ಟು ಅವರು ಸಂಧಾನ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಒವೈಸಿ ಹೇಳಿದ್ದಾರೆ. ಆದರೆ ರಾಜಿ ಸಂಧಾನ ಕುರಿತ ಕೋರ್ಟ್‌ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ.

ಸಮಿತಿಯ ಸದಸ್ಯರಿವರು  
ಎಫ್.ಎಂ. ಖಲೀಫ‌ುಲ್ಲಾ
2016ರ ಜು.22ರಂದು ಸುಪ್ರೀಂಕೋರ್ಟ್‌ನಿಂದ ನಿವೃತ್ತರಾದ ಖಲೀಫ‌ುಲ್ಲಾ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಸಿಜೆ ಆಗಿ ಗಮನ ಸೆಳೆದಿದ್ದರು. ಜಮ್ಮು ಕಾಶ್ಮೀರದ ಜನರಲ್ಲಿ ನ್ಯಾಯಾಂಗದ ಬಗ್ಗೆ ವಿಶ್ವಾಸ ಮೂಡಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಅಲ್ಲದೆ, 2012ರಲ್ಲಿ ಇವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಜೋತಿಷವನ್ನು ವೈಜ್ಞಾನಿಕ ಕೋರ್ಸ್‌ ರೂಪದಲ್ಲಿ ಬೋಧಿಸಲು ಅವಕಾಶ ನೀಡಿದ ಮಹತ್ವದ ತೀರ್ಪು ಇವರ ವೃತ್ತಿ ಜೀವನದಲ್ಲಿ ಗಮನಾರ್ಹವಾದದ್ದು. ಬಿಸಿಸಿಐ ಪ್ರಕರಣದಲ್ಲಿ ಇವರು ನೀಡಿದ ಮಹತ್ವದ ಸಲಹೆಗಳು ಪ್ರಕರಣವನ್ನು ಪರಿಹರಿಸಲು ನೆರವಾಗಿದೆ.

Advertisement

ಶ್ರೀ ಶ್ರೀ ರವಿಶಂಕರ್‌
ಬೆಂಗಳೂರಿನಲ್ಲಿ ಆರ್ಟ್‌ ಆಫ್ ಲಿವಿಂಗ್‌ ಎಂಬ ವಿಶಿಷ್ಟ ಕಲ್ಪನೆಯಲ್ಲಿ ಅಧ್ಯಾತ್ಮವನ್ನು ಜನರಿಗೆ ತಲುಪಿಸಿದ ಶ್ರೀ ಶ್ರೀ ರವಿಶಂಕರ್‌ ವಿಶ್ವದ ಹಲವೆಡೆ ಎದ್ದ ವಿವಾದಗಳಲ್ಲಿ ಸಂಧಾನಕಾರರಾಗಿ ಕೆಲಸ ಮಾಡಿದ್ದಾರೆ. ಇಸ್ರೇಲ್‌ ಸೇರಿದಂತೆ ಹಲವು ಸಂಘರ್ಷಗಳಲ್ಲಿ ಇವರು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ಹಿಂದೆಯೂ ಅಯೋಧ್ಯೆ ವಿಚಾರದಲ್ಲಿ ಸಂಧಾನಕ್ಕೆ ಪ್ರಯತ್ನಿಸಿದ್ದರು.

ಶ್ರೀರಾಮ್‌ ಪಂಚು
ಇವರು ಚೆನ್ನೈ ಮೂಲದ ಹಿರಿಯ ವಕೀಲರು. ಅದಕ್ಕಿಂತ ಹೆಚ್ಚಾಗಿ, ಅಂತಾರಾಷ್ಟ್ರೀಯ ರಾಜಿ ಸಂಧಾನದ ಪರಿಣಿತರು ಎಂದೇ ಇವರನ್ನು ಗುರುತಿಸಲಾಗುತ್ತದೆ. ಇವರು ಮೀಡಿಯೇಶನ್‌ ಚೇಂಬರ್ಸ್‌ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದು, ಭಾರತದ ನ್ಯಾಯಾಂಗದಲ್ಲಿ ರಾಜಿ ಸಂಧಾನವು ಈಗ ಒಂದು ಪ್ರಮುಖ ಭಾಗವಾಗಿರಲು ಇವರ ಶ್ರಮ ಅತ್ಯಂತ ಗಮನಾರ್ಹವಾಗಿದೆ. 2005ರಲ್ಲಿ ಇವರು ಮೊದಲು ಕೋರ್ಟ್‌ ಅನುಮೋದಿತ ಮಧ್ಯಸ್ಥಿಕೆ ಕೇಂದ್ರವನ್ನು ತೆರೆದಿದ್ದರು.

ಕೋರ್ಟ್‌ ಹೇಳಿದ್ದೇನು?
70 ವರ್ಷಗಳ ಹಳೆಯ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದಕ್ಕೆ ರಾಜಿ ಸಂಧಾನದ ಪರಿಹಾರವು ಆದ್ಯತೆ ಯದ್ದಾಗಿದೆ. ಇದು ಕೇವಲ ಒಂದು ಸಣ್ಣ ಭೂಮಿಯ ತುಂಡಿನ ವಿವಾದವಲ್ಲ. ಬದಲಿಗೆ ಇದರಲ್ಲಿ ಲಕ್ಷಾಂತರ ಜನರ ನಂಬಿಕೆ ಗಳು, ಹೃದಯ ಮತ್ತು ಮನಸ್ಸು ಗಳಿವೆ ಎಂದು ಕೋರ್ಟ್‌ ಹೇಳಿದೆ. ಈ ಹಿಂದೆ ಏನಾಗಿತ್ತು ಎಂಬುದು ನಮಗೆ ಗೊತ್ತಿದೆ. ಆದರೆ ವಿಫ‌ಲ ವಾಗುತ್ತದೆ ಎಂಬ ಕಾರಣಕ್ಕೆ ನಾವು ಸಂಧಾನ ನಡೆಸದೇ ಇರಲು ಸಾಧ್ಯ ವಿಲ್ಲ. ಹಿಂದೆ ಬಾಬರ್‌ ಏನು ಮಾಡಿ ದ್ದಾನೆ ಎಂಬುದು ನಮಗೆ ಬೇಕಿಲ್ಲ. ಅಲ್ಲದೆ ಆಗ ಯಾವ ರಾಜನಿದ್ದ ಎಂಬುದೂ ನಮಗೆ ಅನಗತ್ಯ. ಈ ಹಿಂದೆ ನಡೆದಿದ್ದನ್ನು ನಾವು ನಿರಾಕರಿಸಿ ಹಿಂದೆ ಇದ್ದಂತೆಯೇ ಇರಲಿ ಎಂದು ಹೇಳಲಾಗದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಆಕ್ಷೇಪ – ಸಮ್ಮತಿ
ಸುಪ್ರೀಂ ಕೋರ್ಟ್‌ನ ಈ ನಿರ್ಧಾರಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿಂದೆಯೂ ಮೂರ್‍ನಾಲ್ಕು ಬಾರಿ ರಾಜಿ ಸಂಧಾನಕ್ಕೆ ಯತ್ನಿಸಲಾಗಿದೆ. ಆದರೆ ಪರಿಹಾರ ಕೈಗೊಳ್ಳಲು ವಿಫ‌ಲವಾಗಿದೆ ಎಂದು ಸಂಘಟನೆ ಗಳು ಆಕ್ಷೇಪಿಸಿವೆ. ಆದರೆ ಈ ವಿವಾದದ ಭಾಗ ವಾಗಿರುವ ನಿರ್ಮೋಹಿ ಅಖಾಡ ಸಂಧಾನಕ್ಕೆ ಸಮ್ಮತಿ ನೀಡಿದೆ. ಅಲ್ಲದೆ, ಮುಸ್ಲಿಂ ಸಂಘಟನೆ ಗಳು ಕೂಡ ಸಂಧಾನಕ್ಕೆ ಒಪ್ಪಿವೆ. ಇದೇ ವೇಳೆ ಹಲವು ರಾಜಕೀಯ ಮುಖಂಡರೂ ಸಮ್ಮತಿ ವ್ಯಕ್ತ ಪಡಿಸಿ ದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಸಹಿತ ಹಲವರು ಈ ಕ್ರಮವನ್ನು  ಸ್ವಾಗತಿಸಿದ್ದಾರೆ. 

ಹಿಂದೆಯೂ ನಡೆದಿತ್ತು ಸಂಧಾನ
1990ರಲ್ಲಿ ಮೊದಲ ಬಾರಿಗೆ ವಿಎಚ್‌ಪಿ ಮತ್ತು ಬಾಬ್ರಿ ಮಸೀದಿ ಕ್ರಿಯಾ ಸಮಿತಿ ನಡೆಸಿದ ಸಂಧಾನ ಕೊನೆಯ ಹಂತದಲ್ಲಿ ಮುರಿದುಬಿದ್ದಿತ್ತು.
ಎರಡನೆಯ ಮತ್ತು ಅತ್ಯಂತ ಗಮನಾರ್ಹ ಸಂಧಾನವನ್ನು 2003ರಲ್ಲಿ ಕಂಚಿ ಶಂಕರಾಚಾರ್ಯರು ನಡೆಸಿದ್ದರು. ಆದರೆ ಜು.1ರಂದು ಅವರು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಬರೆದ ಪತ್ರದಿಂದಾಗಿ ಮುರಿದು ಬಿದ್ದಿತ್ತು.
ಸಿಜೆಐ ಜೆ.ಎಸ್‌. ಖೇಹರ್‌ ಮತ್ತು ಇನ್ನೋರ್ವ ನ್ಯಾಯಾಧೀಶರು ಸಂಧಾನ ನಡೆಸಲು ಸಿದ್ಧವಿದ್ದೇವೆ ಎಂದು 2017ರಲ್ಲಿ ಹೇಳಿದ್ದರಾದರೂ ಅದು ಕೈಗೂಡಲಿಲ್ಲ. ಅದೇ ವರ್ಷ ಶ್ರೀ ರವಿಶಂಕರ್‌ ಮತ್ತು ಶಿಯಾ ವಕ್ಫ್  ಬೋರ್ಡ್‌ ಅಧ್ಯಕ್ಷ ವಸೀಮ್‌ ರಿಜ್ವಿ ಸಂಧಾನ ನಡೆಸಿದ್ದರೂ ನಿರ್ಧಾರ ಕೈಗೊಳ್ಳಲಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next