ಲಕ್ನೋ : ರಾಮ ಮಂದಿರ – ಬಾಬರಿ ಮಸೀದಿ ಕೇಸಿನಲ್ಲಿ ಸುಪ್ರೀಂ ಕೋರ್ಟ್‌ನ ಕಣ್ಗಾವಲಲ್ಲಿ ಕೋರ್ಟ್ ಹೊರಗಿನ ಇತ್ಯರ್ಥಕ್ಕೆ ತಾನು ಸಿದ್ಧ ಎಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಹೇಳಿದೆ.
“ರಾಮ ಮಂದಿ ಕೇಸಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಡಿ ಕೋರ್ಟ್ ಹೊರಗಿನ ಇತ್ಯರ್ಥಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಅಖೀಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿಯ ಮೌಲಾನಾ ಖಲೀದ್ ರಶೀದ್ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಮೊದಲು ಇನ್ನೋರ್ವ ಮೌಲ್ವಿ ಮೌಲಾನಾ ಸುಹೇಬ್ ಕಾಸ್ಮಿ ಅವರು ಕೂಡ ರಾಮ ಮಂದಿರ – ಬಾಬರಿ ಮಸೀದಿ ವಿವಾದವನ್ನು ಕೋರ್ಟ್ ಹೊರಗೆ ಇತ್ಯರ್ಥ ಪಡಿಸಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದರು.
ರಾಮಜನ್ಮ ಭೂಮಿಯಂತಹ ಭಾವನಾತ್ಮಕ ಹಾಗೂ ಸೂಕ್ಷ್ಮ ಪ್ರಕರಣದಲ್ಲಿ ಎರಡೂ ಕಡೆಯವರ ಅಭಿಪ್ರಾಯಗಳನ್ನು ಗಮನಕ್ಕೆ ತೆಗೆದುಕೊಂಡು ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ಕೋರ್ಟಿನಲ್ಲಿ ಹೇಳಿದ್ದರು. ವಿವಾದವನ್ನು ರಾಜಿಯಲ್ಲಿ ಇತ್ಯರ್ಥ ಮಾಡುವಾಗ ಯಾರಾದರೊಬ್ಬರು ಸೋಲಲೇಬೇಕಾಗುತ್ತದೆ ಎಂದವರು ಹೇಳಿದ್ದರು.
ಬಹು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ರಾಮಜನ್ಮಭೂಮಿ – ಬಾಬರಿ ಮಸೀದಿ ವಿವಾದವು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾಗಿರುವುದರಿಂದ ಎರಡೂ ಕಡೆಯವರು ಮಾತುಕತೆ ಮೂಲಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ನಿನ್ನೆ ಮಂಗಳವಾರ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸ್ವಾಗತಿಸಿದ್ದವು.