ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಎಂಟು ಕಾಲುಗಳುಳ್ಳ ಕರುವಿಗೆ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿದ್ದು, ಈ ಸುದ್ದಿ ಸ್ಥಳೀಯರು ಮತ್ತು ನೆಟ್ಟಿಗರ ಗಮನಸೆಳೆದಿರುವುದಾಗಿ ವರದಿ ತಿಳಿಸಿದೆ.
ಸಾದರ್ ತೆಹ್ಸಿಲ್ ಗ್ರಾಮದ ಮೋದ್ರಾ ಕರ್ಮ್ ಚೌರಾಹದಲ್ಲಿನ ರೈತನ ಮನೆಯಲ್ಲಿ ಎಮ್ಮೆಯೊಂದು ಎಂಟು ಕಾಲುಗಳುಳ್ಳ ಕರುವಿಗೆ ಜನ್ಮ ನೀಡಿದೆ. ಈ ಸುದ್ದಿ ತಿಳಿದು ಅಕ್ಕ-ಪಕ್ಕದ ಗ್ರಾಮಸ್ಥರು, ನೆರೆಹೊರೆಯವರು ಕುತೂಹಲದಿಂದ ವೀಕ್ಷಿಸಲು ರೈತನ ಮನೆಗೆ ಆಗಮಿಸುತ್ತಿರುವುದಾಗಿ ವರದಿ ವಿವರಿಸಿದೆ.
ಕರು ಒಂದು ದೇಹ, ಒಂದು ತಲೆ ಹಾಗೂ ಎಂಟು ಕಾಲುಗಳನ್ನು ಹೊಂದಿದ್ದು, ಗ್ರಾಮಸ್ಥರಿಗೆ ಅಚ್ಚರಿ ಹುಟ್ಟಿಸಿದೆ. ಕೆಲವು ಸ್ಥಳೀಯರು ಇದೊಂದು ಪವಾಡ ಎಂದು ಕರೆಯುತ್ತಿದ್ದಾರೆ. ಕೆಲವರು ಇದೊಂದು ಪ್ರಕೃತಿಯ ಮುನಿಸಿನ ಪ್ರತೀಕ ಎಂದು ದೂರುತ್ತಿರುವುದಾಗಿ ವರದಿ ತಿಳಿಸಿದೆ.
ಎಂಟು ಕಾಲುಗಳುಳ್ಳ ಕರುವಿನ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಶುವೈದ್ಯಾಧಿಕಾರಿ ಡಾ.ರಾಮ್ ಕಿಶೋರ್ ಯಾದವ್ ಅವರ ಮೇಲುಸ್ತುವಾರಿಯಲ್ಲಿ ಕರು ಜನಿಸಿತ್ತು. ಕರುವಿನ ಅಸಹಜ ಅಂಗಗಳಿಂದಾಗಿ ಗಂಡೋ, ಹೆಣ್ಣೋ ಎಂಬುದನ್ನು ನಿರ್ಧರಿಸುವುದು ಕಷ್ಟ ಎಂದು ಯಾದವ್ ತಿಳಿಸಿದ್ದಾರೆ.
ತಜ್ಞರು ಕರುವಿನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕರು ಇಂತಹ ಅಸಹಜ ಸ್ಥಿತಿಯಲ್ಲಿ ಜನಿಸಿದರೆ ಆರೋಗ್ಯ ಸಮಸ್ಯೆ ಕಾಡಲಿದೆ. ಅಲ್ಲದೇ ಇಂತಹ ಕರುಗಳು ಬದುಕುವುದು ತುಂಬಾ ಕಷ್ಟ ಎಂದು ತಿಳಿಸಿದ್ದಾರೆ.