Advertisement

ಅಯೋಧ್ಯೆಯಲ್ಲಿ ಭೂಮಿಪೂಜೆ; ಕರಾವಳಿಯಲ್ಲಿ ಭಕ್ತಿಭಾವದ ಸಂಭ್ರಮ

07:37 AM Aug 06, 2020 | mahesh |

ಮಂಗಳೂರು/ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನಡೆಯುತ್ತಿದ್ದಂತೆ ಕರಾವಳಿಯಾದ್ಯಂತ ಭಕ್ತ ಜನರು ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು. ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಹಿಂದೂ ಸಂಘಟನೆಗಳ ಕಚೇರಿ, ಬಿಜೆಪಿ ಕಾರ್ಯಾಲಯ ಹಾಗೂ ಮನೆಗಳಲ್ಲಿ ರಾಮನಾಮ ಜಪ, ತಪ, ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

Advertisement

ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ಇಲಾಖೆಯ ಮತ್ತು ಖಾಸಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಬೆಳಗ್ಗಿನಿಂದ ರಾತ್ರಿಯವರೆಗೆ ನಡೆಯಿತು. ಭಜನಾ ಸಂಕೀರ್ತನೆಯೂ ನೆರವೇರಿತು. ಮನೆಗಳಲ್ಲಿ ದೀಪ ಬೆಳಗಿ ದೀಪೋತ್ಸವ ಆಚರಿಸಲಾಯಿತು. ರಾಮಜನ್ಮಭೂಮಿಗೆ ಹೋರಾಟ ಮಾಡಿದ ಕರಸೇವಕರನ್ನು ಗೌರವಿಸುವ ಹಾಗೂ ಮಡಿದ ಕರಸೇವಕರಿಗೆ ಶ್ರದ್ಧಾಂಜಲಿ ಸಮರ್ಪಣೆ ಜರಗಿತು. ದೃಶ್ಯ ಮಾಧ್ಯಮಗಳ ಮೂಲಕ ಮನೆಗಳಲ್ಲಿ ಜನರು ನೇರಪ್ರಸಾರ ವೀಕ್ಷಿಸಿ ಸಂಭ್ರಮಪಟ್ಟರು.

ಮಂಗಳೂರು-ಸಂಭ್ರಮ
ಮಂಗಳೂರಿನಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿವಿಧ ಕಡೆ ಬಲೂನ್‌ಗಳನ್ನು ಹಾರಿಸಿ, ಸಿಹಿತಿಂಡಿ ಹಂಚಿ ಸಂಭ್ರಮಪಟ್ಟರು. ಕದ್ರಿಯ ವಿಹಿಂಪ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಮೇಯರ್‌ ದಿವಾಕರ ಪಾಂಡೇಶ್ವರ ಮುಂತಾದವರು ಭಾಗವಹಿಸಿದರು. ಕರಸೇವಕರನ್ನು ಗೌರವಿಸಲಾಯಿತು.

ಬಿಗು ಭದ್ರತೆ
ಭೂಮಿಪೂಜೆ ಹಿನ್ನೆಲೆಯಲ್ಲಿ ದ.ಕ., ಉಡುಪಿ ಜಿಲ್ಲೆಯಾದ್ಯಂತ ಪೊಲೀಸ್‌ ಬಂದೋಬಸ್ತು ಬಿಗಿಗೊಳಿಸಲಾಗಿತ್ತು. ಮದ್ಯ ಮಾರಾಟವನ್ನು ನಿಷೇಧಿಸ ಲಾಗಿತ್ತು. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿ ಮತ್ತು ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಪೇಜಾವರ ಶ್ರೀಗಳಿಂದ ಲಕ್ಷ ತುಳಸಿ ಅರ್ಚನೆ
ಅಯೋಧ್ಯೆಯಲ್ಲಿ ಭೂಮಿಪೂಜೆ ನೆರವೇರಿದ ಸಂದರ್ಭ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸದಸ್ಯ ರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಾಸ್ಯಮೂರ್ತಿ ರಾಮದೇವರಿಗೆ ಲಕ್ಷ ತುಳಸೀ ಅರ್ಚನೆ ಮಾಡಿದರು. ಕಾರ್ಯಕ್ರಮದ ನಿರ್ವಿಘ್ನತಾ ಸಿದ್ಧಿ, ಎಲ್ಲ ದೋಷ ನಿವಾರಣೆಯಾಗಿ ಅತೀ ಶೀಘ್ರ ಸುಸೂತ್ರವಾಗಿ ಭವ್ಯ ಮಂದಿರ ನಿರ್ಮಾಣವಾಗಿ ಸಮಸ್ತ ಲೋಕಕ್ಕೆ ಸೀತಾರಾಮದೇವರ ಪೂರ್ಣ ಕೃಪೆ ಪ್ರಾಪ್ತಿಯಾಗುವಂತೆ ಪ್ರಾರ್ಥಿಸಿ ಚಾತುರ್ಮಾಸ್ಯ ನಿಮಿತ್ತ ಅಯೋಧ್ಯೆಗೆ ತೆರಳದೆ ನೀಲಾವರ ಗೋಶಾಲೆಯ ಆವರಣದ ಶಾಖಾ ಮಠದಲ್ಲಿ ನವಗ್ರಹ ಯಾಗ, ಬಳಿತ್ಥಾ ಸೂಕ್ತ ಹೋಮ, ರಾಮತಾರಕ ಮಂತ್ರ ಯಾಗವನ್ನು ವೈದಿಕರ ಮೂಲಕ ನೆರವೇರಿಸಿದರು. ಶ್ರೀರಾಮ ಜನ್ಮಭೂಮಿ ಆಂದೋ ಲನಕ್ಕೆ ಅವಿರತ ಶ್ರಮಿಸಿದ ಗುರು ಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರವನ್ನಿಟ್ಟು ತುಲಸೀ ಅರ್ಪಿಸಿ ಗುರುಗಳಿಗೂ ಮಂಗಳಾರತಿ ಬೆಳಗಿ ಗೌರವ ಅರ್ಪಿಸಿದರು.

Advertisement

ಉಡುಪಿ: ವಿಶೇಷ ಪೂಜೆ
ಉಡುಪಿ ಶ್ರೀಕೃಷ್ಣ ಮಠ ಸಹಿತ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಸಂಭ್ರಮಾಚರಣೆ ನಡೆಯಿತು. ಪರ್ಯಾಯ ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಅಪರಾಹ್ನ 12.15ಕ್ಕೆ ಕೃಷ್ಣಮಠದ ಗೋಶಾಲೆಯ ಗೋವೊಂದು ಜನ್ಮನೀಡಿದ ಗಂಡು ಕರುವಿಗೆ “ರಾಮ’ ಎಂಬ ಹೆಸರನ್ನು ಇಡಲಾಯಿತು. ವಿಹಿಂಪ, ಬಜರಂಗದಳದ ಕಾರ್ಯ ಕರ್ತರು ಬಜರಂಗ ದಳದ ರಾಜ್ಯ ಸಂಚಾ ಲಕ ಸುನೀಲ್‌ ಕೆ.ಆರ್‌. ನೇತೃತ್ವದಲ್ಲಿ ಶ್ರೀಕೃಷ್ಣ ಮಠ, ಕನಕನ ಕಿಂಡಿ ಎದುರು, ರಥ ಬೀದಿಯಲ್ಲಿ ಭಜನೆಗಳನ್ನು ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next