Advertisement

Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!

07:21 PM Jan 07, 2025 | Team Udayavani |

ಅಯೋಧ್ಯೆ: ವಿಶ್ವದೆಲ್ಲೆಡೆ ತಂತ್ರಜ್ಞಾನವು ಪ್ರತಿಕ್ಷಣ, ಪ್ರತಿದಿನ, ಎಷ್ಟು ತೀವ್ರಗತಿಯಲ್ಲಿ ಬದಲಾಗುತ್ತಿರುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆ.  ಅಯೋಧ್ಯೆಯ ರಾಮಮಂದಿರದಲ್ಲಿ ಖಾಸಗಿತನ ಮತ್ತು ಸುರಕ್ಷತೆ ದೃಷ್ಟಿಯಿಂದ ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳ ಮೇಲೆ ಕಟ್ಟುನಿಟ್ಟಾದ ನಿಷೇಧ ಜಾರಿಗೊಳಿಸಲಾಗಿದೆ. ಆದರೂ ಗುಜರಾತ್‌ನ ವಡೋದರಾದ ಯುವಕನೊಬ್ಬ ತನ್ನ ಕನ್ನಡಕದಲ್ಲಿ ರಹಸ್ಯ (ಹಿಡನ್) ಕ್ಯಾಮರಾ ಬಳಸಿ ರಾಮಮಂದಿರದ ಒಳಗಿನ ದೃಶ್ಯಗಳ ಚಿತ್ರೀಕರಿಸುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.

Advertisement

ಯುವಕನೊಬ್ಬ ತನ್ನ ಕನ್ನಡಕದಲ್ಲಿ ಎರಡು ಬದಿಯಲ್ಲಿ ಅಳವಡಿಸಲಾದ ಕ್ಯಾಮರಾ ಬಳಸಿ ಅಯೋಧ್ಯೆಯ ರಾಮಮಂದಿರದ ಚಿತ್ರಗಳ ತೆಗೆಯುತ್ತಿದ್ದನು. ಈ ವೇಳೆ  ಭದ್ರತಾ ಸಿಬ್ಬಂದಿ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಯುವಕ ಗುಜರಾತ್​ನ ವಡೋದರ ಮೂಲದ ಜಯ ಕುಮಾರ್ ಎಂದು ಪತ್ತೆ ಹಚ್ಚಲಾಗಿದೆ. ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಆತನನ್ನು ವಿಚಾರಣೆ ನಡೆಸುತ್ತಿವೆ. ರಾಮ ಮಂದಿರದ ಆವರಣದೊಳಗೆ ಮೊಬೈಲ್ ಕೊಂಡೊಯ್ಯುವುದು ಮತ್ತು ಛಾಯಾಚಿತ್ರ ತೆಗೆಯುವುದು ನಿಷೇಧವಿದ್ದರೂ ಆತ ಈ ರೀತಿ ಮಾಡಿರುವುದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕನ್ನಡಕದ ಮೌಲ್ಯ 50 ಸಾವಿರ ರೂಪಾಯಿ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಭದ್ರತಾ ವಿಭಾಗದ ಎಸ್‌ಪಿ ಬಲರಾಮಚಾರಿ ದುಬೆ ಮಾತನಾಡಿ ಭದ್ರತಾ ಸಿಬ್ಬಂದಿ ಮಾಹಿತಿ ಅನುಸಾರ ತಕ್ಷಣವೇ ಆತನ ಬಂಧಿಸಲಾಗಿದೆ. ಯುವಕನಿಗೆ ಕ್ರಿಮಿನಲ್‌ ಹಿನ್ನೆಲೆ ಇದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈತ ವಡೋದರ ವ್ಯಾಪಾರೋದ್ಯಮಿಯಾಗಿದ್ದು ಈತ ಧರಿಸಿದ ಕನ್ನಡಕದ ಮೌಲ್ಯ 50 ಸಾವಿರ ರೂ. ಎಂದು ಮಾಹಿತಿ ನೀಡಿದರು.

ಕಾನೂನು ಜಾರಿ ಮತ್ತು ಗುಪ್ತಚರ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ವಿಚಾರಣೆ ಪ್ರಾರಂಭಿಸಿದ್ದಾರೆ, ಜಯಕುಮಾರ್ ಅವರ ಉದ್ದೇಶಗಳು ಮತ್ತು ಕ್ಯಾಮೆರಾ ತಂದ ಹಿಂದಿನ ಕಾರಣ ತಿಳಿಯಲು ವಿಚಾರಣೆ ನಡೆಸುತ್ತಿದ್ದು,  ಈ ಘಟನೆಯು ಧಾರ್ಮಿಕ ಸ್ಥಳಗಳಲ್ಲಿ, ವಿಶೇಷವಾಗಿ ಅಯೋಧ್ಯೆಯ ರಾಮ ಮಂದಿರದಂತಹ ಮಹತ್ತರ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಳಗಳ ಭದ್ರತಾ ಕ್ರಮಕ್ಕೆ ಸವಾಲಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next