ಕೋಲಾರ: ಹಿಂದೂಗಳ ಆರಾಧ್ಯ ದೈವ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರಕ್ಕೆ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆದ ಹಿನ್ನೆಲೆಯಲ್ಲಿ ನಗರದ ದೇಗುಲಗಳಲ್ಲಿ ಹಿಂದೂಪರ ಸಂಘಟನೆಗಳಿಂದ ವಿಶೇಷ ಪೂಜೆ, ಹೋಮ, ಧರ್ಮರಕ್ಷಣೆ ಹೋರಾಟದಲ್ಲಿ ಪ್ರಾಣತೆತ್ತ ಕುಟುಂಬಗಳಿಗೆ ಸನ್ಮಾನ ನಡೆಯಿತು.
ನಗರದ ಎಲ್ಲಾ ದೇವಾಲಯಗಳಲ್ಲೂ ಬುಧವಾರ ವಿಶೇಷ ಪೂಜೆ ನಡೆಸಿದ್ದು, ದೇವಾಲಯ, ಹಲವು ಮನೆಗಳ ಮೇಲೆ ಕೇಸರಿ ಭಗವಧ್ವಜ ಹಾರಡಿತು. ಐದು ಶತಮಾನಗಳ ಹೋರಾಟಕ್ಕೆ ಸಿಕ್ಕ ಜಯವೆಂದು ಬಣ್ಣಿಸಿದ ಅನೇಕರು, ಸಂಜೆ ತಮ್ಮ ಮನೆಗಳ ಮುಂಭಾಗ ದೀಪ ಬೆಳಗಿ ಸಂಭ್ರಮಿಸಿದರೆ, ಹಿಂದೂಪರ ಸಂಘಟನೆಗಳ ಯುವಕರು ಭಗವಧ್ವಜ ಹಿಡಿದು ಜೈಕಾರ ಹಾಕಿದರು.
ಭಗವಧ್ವಜ ಹಾರಾಟ: ನಗರದ ಬಸ್‌ನಿಲ್ದಾಣದ ಸಮೀಪವಿರುವ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಜರಂಗದಳ ಕಾರ್ಯಕರ್ತರು ಹನುಮನಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಿದರು. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಹಿಂದೂಪರ ಹೋರಾಟಗಳಲ್ಲಿ ಪ್ರಾಣತೆತ್ತವರ ಕುಟುಂಬ ಸದಸ್ಯರನ್ನು ಈ ವೇಳೆ ಭಜರಂಗದಳದಿಂದ ಸನ್ಮಾನಿಸಲಾಯಿತು.ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಜರಂಗದಳ ಕಾರ್ಯಕರ್ತರು ಭಗವಧ್ವಜ ಹಿಡಿದು ಸಂಭ್ರಮಿಸಿದರಲ್ಲದೇ ಜೈಶ್ರೀರಾಮ್ ಘೋಷಣೆ ಮೊಳಗಿಸಲಾಯಿತು. ಈ ವೇಳೆ ಸಂಘಟನೆಯ ಬಾಲಾಜಿ, ಜಿಲ್ಲಾ ಸಂಚಾಲಕ ಬಾಬು, ಡಿ.ಆರ್.ನಾಗರಾಜ್, ವಿಜಯಕುಮಾರ್, ಅಪ್ಪಿ ಮತ್ತಿತರರಿದ್ದರು.
ಶ್ರೀರಾಮ ತಾರಕ ಹೋಮ: ನಗರದ ಕೆಇಬಿ ಗಣಪತಿ ದೇವಾಲಯದಲ್ಲಿ ವಿಶ್ವಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಡಾ.ಶಿವಣ್ಣ ದಂಪತಿಗಳ ನೇತೃತ್ವದಲ್ಲಿ ಶ್ರೀರಾಮ ನಾಮ ತಾರಕ ಹೋಮ, ವಿಶೇಷ ಪೂಜೆ, ವಿನಾಯಕನಿಗೆ ಅಭಿಷೇಕ ನಡೆಸುವ ಮೂಲಕ ಸಂಭ್ರಮಿಸಲಾಯಿತು. ಈ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ.ಶಂಕರ್‌ನಾಯಕ್, ಮಂಜುಳಾ ಭೀಮರಾವ್ ದಂಪತಿಗಳು, ಶಿಳ್ಳೆಂಗೆರೆ ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.
ರಾಮನ ಗುಡಿಯಲ್ಲೂ ವಿಶೇಷ ಪೂಜೆ: ನಗರದ ಬಸ್ ನಿಲ್ದಾಣ ಸಮೀಪದ ಶ್ರೀರಾಮ ದೇವರಗುಡಿ ಬೀದಿಯ ದೇವಾಲಯದಲ್ಲಿ ಬಿಜೆಪಿ ಮುಖಂಡ ಜಯಂತಿಲಾಲ್ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಲಡ್ಡು ವಿತರಣೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ರತ್ನಮ್ಮ, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡ ಜೈಶಂಕರ್, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ದಿಲೀಪ್, ಲಾಲ್ ಚಂದ್, ರಾಜೇಶ್‌ಕುಮಾರ್, ಜಿತೇಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.