Advertisement

ಪೊಲೀಸ್‌ ಲಾಠಿಚಾರ್ಜ್‌ ಖಂಡಿಸಿ ಎವೈಡಿವೈಒ ಪ್ರತಿಭಟನೆ

04:58 PM Sep 07, 2020 | Suhan S |

ವಿಜಯಪುರ: ಮಧ್ಯಪ್ರದೇಶ ರಾಜ್ಯದ ಬಿಜೆಪಿ ಸರ್ಕಾರ ಉದ್ಯೋಗಕ್ಕಾಗಿ ಹೋರಾಟ ನಡೆಸಿದ್ದ ಪ್ರತಿಭಟನಾ ನಿರತ ನಿರುದ್ಯೋಗಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಕ್ರಮ ಖಂಡಿಸಿ ಎವೈಡಿವೈಒ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಸಿದ್ದಲಿಂಗಬಾಗೇವಾಡಿ ಮಾತನಾಡಿ, ಕೋವಿಡ್‌ ಲಾಕ್‌ ಡೌನ್‌ ಸಂದರ್ಭದಲ್ಲಿ ದೇಶದಾದ್ಯಂತ 2.7 ಲಕ್ಷ ಕಾರ್ಖಾನೆಗಳು ಮುಚ್ಚಲ್ಪಟ್ಟಿದ್ದು 12 ಕೋಟಿ  ಉದ್ಯೋಗ ನಷ್ಟವಾಗಿವೆ. ಮತ್ತೂಂದೆಡೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಸ್‌ಎಸ್‌ಸಿ, ರೈಲ್ವೆ, ಶಿಕ್ಷಕರು ಮತ್ತು ಪೊಲೀಸ್‌ ನೇಮಕಾತಿ ಪರೀಕ್ಷೆಯ ಫಲಿತಾಂಶ ಘೋಷಿಸದೇ ವಿಳಂಬ ಮಾಡುತ್ತಿದೆ. ಆಡಳಿತ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಪ್ರಯತ್ನವಾಗಿ ಪ್ರತಿಭಟನೆಯಲ್ಲಿ ತೊಡಗಿದವರ ಮೇಲೆ ಮಧ್ಯಪ್ರದೇಶ ಸರ್ಕಾರ ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸಿದ್ದು ಖಂಡನೀಯ ಎಂದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವ್ಹಾಣ ಅವರಿಗೆ ಪ್ರತಿಭಟನಾಕಾರರು ಸಮಸ್ಯೆ ನಿವೇದಿಸಿಕೊಳ್ಳುವ ಮನವಿ ಪತ್ರ ಸಲ್ಲಿಸಲು ಮುಂದಾದ ಸಂದರ್ಭದಲ್ಲಿ ಅಹವಾಲು ಕೇಳುವ ಬದಲು, ಪೊಲೀಸರಿಂದ ಲಾಠಿಚಾರ್ಜ್‌ ಮಾಡಿಸಿದ್ದಾರೆ. ಘಟನೆಯಲ್ಲಿ ಅನೇಕ ಹೋರಾಟಗಾರರು ಗಾಯಗೊಂಡಿದ್ದು ಎಐಡಿವೈಒ ಮಧ್ಯಪ್ರದೇಶ ರಾಜ್ಯ ಕಾರ್ಯದರ್ಶಿ ಪ್ರಮೋದ್‌ ನಾಮದೇವ್‌ ಸೇರಿದಂತೆ ಸಂಘಟನೆಯ ನೂರಾರು ಕಾರ್ಯಕರ್ತರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಕೂಡಲೇ ಮಧ್ಯಪ್ರದೇಶ ಸರ್ಕಾರ ಬಂಧಿತರ ವಿರುದ್ಧದ ದೂರು ಹಿಂಪಡೆದು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪಾಂಡುರಂಗ ಉಪ್ಪಾರ, ಬಾಳು ಜೇವೂರ, ರವಿ ಹತ್ತಳ್ಳಿ, ಶರಣು ಶಹಾಪುರ, ಲಾಯಪ್ಪ ಸುಣಗಾರ, ಚನ್ನಮಲ್ಲಯ್ಯ ಮಠಪತಿ, ಎಸ್‌.ಡಿ. ಕುದರಿ, ಬಿ.ಎಸ್‌. ಹಿಪ್ಪರಗಿ, ಶಂಭುಲಿಂಗ, ಆರ್‌. ವೈ. ಡಾಂಗಿ, ಸಿ.ಎಂ. ಮಸ್ಕಿ, ಅಶೋಕ ಬೂದಿಹಾಳ, ಸುರೇಶ ಕವಡಿಮಟ್ಟಿ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next