Advertisement

ಆತ್ಮವಿಶ್ವಾಸ ಹೆಚ್ಚಿಸಿದ ಸಾಧನೆ: ಉನಾದ್ಕತ್‌

09:43 AM Apr 29, 2019 | keerthan |

ಜೈಪುರ: ಇಂದಿನ ಸಾಧನೆಯಿಂದ ತನ್ನ ಆತ್ಮವಿಶ್ವಾಸ ಹೆಚ್ಚಿದೆ ಎಂಬುದಾಗಿ ರಾಜಸ್ಥಾನ್‌ ತಂಡದ ಎಡಗೈ ವೇಗಿ ಜೈದೇವ್‌ ಉನಾದ್ಕತ್‌ ಹೇಳಿದ್ದಾರೆ. ಶನಿವಾರ ರಾತ್ರಿ ಹೈದರಾಬಾದ್‌ ಎದುರಿನ ಗೆಲುವಿನಲ್ಲಿ 26ಕ್ಕೆ 2 ವಿಕೆಟ್‌ ಕಿತ್ತ ಉನಾದ್ಕತ್‌,  2 ಕ್ಯಾಚ್‌ ಕೂಡ ಪಡೆದಿದ್ದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

Advertisement

“ಪವರ್‌ ಪ್ಲೇ ಅವಧಿಯಲ್ಲಿ ಹೈದರಾಬಾದ್‌ ಚೆನ್ನಾಗಿಯೇ ಬ್ಯಾಟಿಂಗ್‌ ಮಾಡಿತ್ತು. ಆದರೆ ಇದು ಮುಗಿದ ಬಳಿಕ ನಿಯಂತ್ರಣ ಸಾಧಿಸುವ ವಿಶ್ವಾಸವಿತ್ತು. ಇದು ನಿಜವಾಯಿತು’ ಎಂದರು.

ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 8 ವಿಕೆಟಿಗೆ 160 ರನ್‌ ಹೊಡೆದರೆ, ರಾಜಸ್ಥಾನ್‌ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 161 ರನ್‌ ಹೊಡೆದು ತನ್ನ 5ನೇ ಗೆಲುವು ಸಾಧಿಸಿತು. ಅಕಸ್ಮಾತ್‌ ಸೋತದ್ದಿದ್ದರೆ ರಾಜಸ್ಥಾನ್‌ ಕೂಟದಿಂದ ಹೊರಬೀಳುತ್ತಿತ್ತು.

ಲಿಯಮ್‌ ಲಿವಿಂಗ್‌ಸ್ಟೋನ್‌ 26 ಎಸೆತಗಳಿಂದ 44 ರನ್‌ ಬಾರಿಸಿ ರಾಜಸ್ಥಾನಕ್ಕೆ ಪ್ರಚಂಡ ಆರಂಭ ಒದಗಿಸಿದರು (4 ಬೌಂಡರಿ, 3 ಸಿಕ್ಸರ್‌). ರಹಾನೆ 34 ಎಸೆತ ಎದುರಿಸಿ 39 ರನ್‌ ಹೊಡೆದರೆ, ಸ್ಯಾಮ್ಸನ್‌ 32 ಎಸೆತಗಳಿಂದ ಅಜೇಯ 48 ರನ್‌ ಬಾರಿಸಿದರು (4 ಬೌಂಡರಿ, 1 ಸಿಕ್ಸರ್‌). ಕಪ್ತಾನ ಸ್ಮಿತ್‌ ಗಳಿಕೆ 22 ರನ್‌ (16 ಎಸೆತ, 3 ಬೌಂಡರಿ).

ಖಾತೆ ತೆರೆದ ಟರ್ನರ್‌
ರಾಜಸ್ಥಾನ್‌ ಸರದಿಯ ವಿಶೇಷವೆಂದರೆ, ಸತತ 3 ಸೊನ್ನೆಗಳ ಬಳಿಕ ಆ್ಯಶrನ್‌ ಟರ್ನರ್‌ ರನ್‌ ಖಾತೆ ತೆರೆದದ್ದು! 7 ಎಸೆತ ಎದುರಿಸಿದ ಟರ್ನರ್‌ 3 ರನ್‌ ಮಾಡಿ ಸ್ಯಾಮ್ಸನ್‌ ಜತೆ ಔಟಾಗದೆ ಉಳಿದರು.

Advertisement

ಜೈಪುರದಲ್ಲಿ ಕೊನೆಯ ಪಂದ್ಯ
ಇದು ತವರಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಆಡಿದ ಪ್ರಸಕ್ತ ಋತುವಿನ ಕೊನೆಯ ಪಂದ್ಯವಾಗಿತ್ತು. ಗೆಲುವಿನೊಂದಿಗೆ ತವರು ಪಂದ್ಯಕ್ಕೆ ವಿದಾಯ ಹೇಳಿದ್ದಕ್ಕೆ ನಾಯಕ ಸ್ಟೀವನ್‌ ಸ್ಮಿತ್‌ ಸಂತಸ ವ್ಯಕ್ತಪಡಿಸಿದರು.

ಪ್ಲೇ ಆಫ್ ವಿಶ್ವಾಸ
“ಇದು ತವರಲ್ಲಿ ನಮ್ಮ ಕೊನೆಯ ಪಂದ್ಯವಾಗಿತ್ತು. ಇದನ್ನು ಗೆಲುವಿನೊಂದಿಗೆ ಮುಗಿಸಿದ್ದಕ್ಕೆ ಖುಷಿಯಾಗಿದೆ. ಕಳೆದ ಕೆಲವು ಪಂದ್ಯಗಳಲ್ಲಿ ನಮಗೆ ಅದೃಷ್ಟ ಕೈಹಿಡಿಯುತ್ತಿದೆ. ನಾವೂ ಈಗ ಪ್ಲೇ ಆಫ್ ರೇಸ್‌ನಲ್ಲಿದ್ದೇವೆ. ಮುಂದಿನ ಬೆಂಗಳೂರು ಮತ್ತು ಡೆಲ್ಲಿ ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ. ಹುಡುಗರು ಇಲ್ಲಿ ಉತ್ತಮ ನಿರ್ವಹಣೆ ನೀಡುವ ವಿಶ್ವಾಸವಿದೆ’ ಎಂಬುದಾಗಿ ಸ್ಮಿತ್‌ ಹೇಳಿದರು. “ಲಿವಿಂಗ್‌ಸ್ಟೋನ್‌ ಯಾವುದೇ ಒತ್ತಡವಿಲ್ಲದೆ ಬ್ಯಾಟ್‌ ಬೀಸಿದರು. ಸ್ಯಾಮ್ಸನ್‌ ಅಮೋಘ ರೀತಿಯಲ್ಲಿ ಗೆಲುವಿನ ಮುಕ್ತಾಯ ಕೊಡಿಸಿದರು’ ಎಂಬುದಾಗಿ ಸ್ಮಿತ್‌ ಪ್ರಶಂಸಿಸಿದರು.
ಸಂಕ್ಷಿಪ್ತ ಸ್ಕೋರ್‌
ಹೈದರಾಬಾದ್‌-8 ವಿಕೆಟಿಗೆ 160. ರಾಜಸ್ಥಾನ್‌-19.1 ಓವರ್‌ಗಳಲ್ಲಿ 3 ವಿಕೆಟಿಗೆ 161 (ರಹಾನೆ 39, ಲಿವಿಂಗ್‌ಸ್ಟೋನ್‌ 44, ಸ್ಯಾಮ್ಸನ್‌ ಔಟಾಗದೆ 48, ಸ್ಮಿತ್‌ 22, ಶಕಿಬ್‌ 26ಕ್ಕೆ 1, ರಶೀದ್‌ 30ಕ್ಕೆ 1, ಖಲೀಲ್‌ 33ಕ್ಕೆ 1). ಪಂದ್ಯಶ್ರೇಷ್ಠ: ಜೈದೇವ್‌ ಉನಾದ್ಕತ್‌.

ರಾಜಸ್ಥಾನ್‌ ಜಯ; ,ಚೆನ್ನೈಪ್ಲೇ ಆಫ್ಗೆ
ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ 12ನೇ ಐಪಿಎಲ್‌ನಲ್ಲಿ ಪ್ಲೇ ಆಫ್ ಸುತ್ತು ಪ್ರವೇಶಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಕಾರಣವಾದದ್ದು, ಶನಿವಾರ ರಾತ್ರಿ ಹೈದರಾಬಾದ್‌ ವಿರುದ್ಧ ರಾಜಸ್ಥಾನ್‌ ಸಾಧಿಸಿದ ಗೆಲುವು. 12 ಪಂದ್ಯಗಳಲ್ಲಿ ಎಂಟನ್ನು ಗೆದ್ದು 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದ ಚೆನ್ನೈತಂಡದ ಪ್ಲೇ ಆಫ್ ಖಚಿತವಾಗಿತ್ತು. ಆದರೆ ಇದು ಅಧಿಕೃತವಾಗಿರಲಿಲ್ಲ. ಹೈದರಾಬಾದ್‌ ಸೋಲಿನೊಂದಿಗೆ ಚೆನ್ನೈ ಹಾದಿ ಸುಗಮಗೊಂಡಿತು. ಆದರೆ ಚೆನ್ನೈ ಯಾವ ಸ್ಥಾನದೊಂದಿಗೆ ಮುಂದಿನ ಸುತ್ತು ತಲುಪುತ್ತದೆ ಎಂಬುದು ಇನ್ನಷ್ಟೇ ಅಂತಿಮವಾಗಬೇಕು. ಡೆಲ್ಲಿ ದ್ವಿತೀಯ ತಂಡವಾಗಿ ಮುಂದಿನ ಸುತ್ತಿಗೇರಿದೆ. ಮುಂಬೈ ಕೂಡ ಪ್ಲೇ ಆಫ್ಗೆ ಹತ್ತಿರದಲ್ಲಿದೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಹೈದರಾಬಾದ್‌ ವಿರುದ್ಧದ ಸತತ 4 ಪಂದ್ಯಗಳ ಸೋಲಿನ ಆಟಕ್ಕೆ ರಾಜಸ್ಥಾನ್‌ ತೆರೆ ಎಳೆಯಿತು. ಹೈದರಾಬಾದ್‌ ವಿರುದ್ಧ ರಾಜಸ್ಥಾನ್‌ ಕೊನೆಯ ಜಯ ದಾಖಲಿಸಿದ್ದು 2015ರ ವಿಶಾಖಪಟ್ಟಣ ಪಂದ್ಯದಲ್ಲಿ. ಅಂತರ 6 ವಿಕೆಟ್‌.
* ಡೇವಿಡ್‌ ವಾರ್ನರ್‌ ಈ ಐಪಿಎಲ್‌ನಲ್ಲಿ 600 ರನ್‌ ಗಳಿಸಿದ ಮೊದಲ ಆಟಗಾರನೆನಿಸಿದರು. ವಾರ್ನರ್‌ ಐಪಿಎಲ್‌ ಋತುವೊಂದರಲ್ಲಿ 600 ರನ್‌ ಪೇರಿಸಿದ 3ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಅವರು 2016 ಮತ್ತು 2017ರಲ್ಲೂ ಈ ಸಾಧನೆ ಮಾಡಿದ್ದರು.
* ವಾರ್ನರ್‌ 3 ಐಪಿಎಲ್‌ಗ‌ಳಲ್ಲಿ 600 ರನ್‌ ಪೇರಿಸಿದ ಕೇವಲ 2ನೇ ಆಟಗಾರ. ಕ್ರಿಸ್‌ ಗೇಲ್‌ ಮೊದಲಿಗ. ಅವರು 2011, 2012 ಮತ್ತು 2013ರಲ್ಲಿ ಈ ಸಾಧನೆಗೈದು ಹ್ಯಾಟ್ರಿಕ್‌ ದಾಖಲಿಸಿದ್ದರು.
* ವಾರ್ನರ್‌ 32 ಎಸೆತಗಳಿಂದ 37 ರನ್‌ ಹೊಡೆದರು. ಆದರೆ ಇದರಲ್ಲಿ ಒಂದೂ ಬೌಂಡರಿ/ಸಿಕ್ಸರ್‌ ಇರಲಿಲ್ಲ. ಇದು ಅತ್ಯಧಿಕ ಎಸೆತ ಎದುರಿಸಿಯೂ ಬೌಂಡರಿ ಹೊಡೆಯದವರ ಐಪಿಎಲ್‌ ಆಟಗಾರರ ಯಾದಿಯಲ್ಲಿ ಕಾಣಸಿಗುವ 4ನೇ ನಿದರ್ಶನ. ಸ್ಟೀವ್‌ ಸ್ಮಿತ್‌ 2017 ಮತ್ತು 2014ರ ಋತುವಿನಲ್ಲಿ 39 ಹಾಗೂ 33 ಎಸೆತಗಳನ್ನು ಎದುರಿಸಿದ ಸಂದರ್ಭಗಳಲ್ಲಿ ಒಂದೂ ಬೌಂಡರಿ ಹೊಡೆದಿರಲಿಲ್ಲ. 2012ರಲ್ಲಿ ರಾಸ್‌ ಟಯ್ಲರ್‌ 35 ಎಸೆತ ಎದುರಿಸಿದ ಸಂದರ್ಭದಲ್ಲೂ ಬೌಂಡರಿ ಬಾರಿಸಿರಲಿಲ್ಲ.
* ವಾರ್ನರ್‌ ಒಂದೂ ಬೌಂಡರಿ/ಸಿಕ್ಸರ್‌ ಹೊಡೆಯದೆ ಐಪಿಎಲ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಬರೆದರು (37). ಹಿಂದಿನ ದಾಖಲೆ ಸ್ಟೀವನ್‌ ಸ್ಮಿತ್‌ ಹೆಸರಲ್ಲಿತ್ತು. 2014ರ ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಸ್ಮಿತ್‌ 34 ರನ್‌ ಮಾಡಿದ್ದರು.
* ಜೈದೇವ್‌ ಉನಾದ್ಕತ್‌ 5ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದು ಐಪಿಎಲ್‌ನಲ್ಲಿ ಭಾರತೀಯ ಪೇಸ್‌ ಬೌಲರ್‌ಗಳ ಜಂಟಿ 3ನೇ ದಾಖಲೆ. ಭುವನೇಶ್ವರ್‌ ಕುಮಾರ್‌ ಕೂಡ 5 ಸಲ ಈ ಗೌರವ ಒಲಿಸಿಕೊಂಡಿದ್ದಾರೆ. ಉಮೇಶ್‌ ಯಾದವ್‌ (8 ಸಲ), ಆಶಿಷ್‌ ನೆಹ್ರಾ (6 ಸಲ) ಮೊದಲೆರಡು ಸ್ಥಾನದಲ್ಲಿದ್ದಾರೆ.
* ಮನೀಷ್‌ ಪಾಂಡೆ ಮೊದಲ ಸಲ ಐಪಿಎಲ್‌ನ ಸತತ 2 ಪಂದ್ಯಗಳಲ್ಲಿ 50 ಪ್ಲಸ್‌ ರನ್‌ ಹೊಡೆದರು. ಈ ಪಂದ್ಯದಲ್ಲಿ ಅವರು 27 ಎಸೆತಗಳಿಂದ ಅರ್ಧ ಶತಕ ದಾಖಲಿಸಿದರು. ಇದು ಪಾಂಡೆ ಅವರ 3ನೇ ಅತೀ ವೇಗದ ಫಿಫ್ಟಿ. ಚೆನ್ನೈ ವಿರುದ್ಧದ ಹಿಂದಿನ ಪಂದ್ಯದಲ್ಲಿ 25 ಎಸೆತಗಳಿಂದ ಅರ್ಧ ಶತಕ ಹೊಡೆದದ್ದು ಅತೀ ವೇಗದ ಸಾಧನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next