Advertisement

ಬಿಡಿಎ ಮನೆಗಳಿಗೆ ಆಕರ್ಷಕ ರಿಯಾಯಿತಿ

12:14 PM Sep 08, 2018 | Team Udayavani |

ಬೆಂಗಳೂರು: ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕೊಮ್ಮಘಟ್ಟ, ಕಣ್ಮಿಣಿಕೆ ವಸತಿ ಸಮುಚ್ಚಯಗಳಲ್ಲಿನ ಫ್ಲ್ಯಾಟ್‌ಗಳ ಮಾರಾಟಕ್ಕೆ ಗ್ರಾಹಕರನ್ನು ಸೆಳೆಯುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಒಂದು ಫ್ಲ್ಯಾಟ್‌ ಖರೀದಿಗೆ ಶೇ.5 ಹಾಗೂ ಏಕಕಾಲಕ್ಕೆ 10 ಫ್ಲ್ಯಾಟ್‌ ಖರೀದಿಗೆ ಶೇ.10ರಷ್ಟು ರಿಯಾಯ್ತಿ ನೀಡಲು ಮುಂದಾಗಿದೆ.

Advertisement

ಬಿಡಿಎ ಕಚೇರಿಯಲ್ಲಿ ಶುಕ್ರವಾರ ಪ್ರಾಧಿಕಾರದ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಮೈಸೂರು ರಸ್ತೆ ಭಾಗದಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿನ ಫ್ಲ್ಯಾಟ್‌ ಖರೀದಿಸುವ ಸಾರ್ವಜನಿಕರಿಗೆ ಶೇ.5ರಷ್ಟು ರಿಯಾಯ್ತಿ ನೀಡಲು ನಿರ್ಧರಿಸಲಾಗಿದೆ.

ಹಾಗೆಯೇ ಒಮ್ಮೆಲೆ 10ಕ್ಕೂ ಹೆಚ್ಚು ಫ್ಲ್ಯಾಟ್‌ ಖರೀದಿಗೆ ಶೇ.10ರಷ್ಟು ರಿಯಾಯಿತಿ ನೀಡಲು ತೀಮಾನಿಸಲಾಗಿದೆ ಎಂದು ತಿಳಿಸಿದರು. ಬಿಡಿಎ ಈಗಾಗಲೇ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿನ ಫ್ಲ್ಯಾಟ್‌ಗಳ ಮಾರಾಟ ಪ್ರಕ್ರಿಯೆ ಪೂರ್ಣಗೊಂಡರೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಆ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯಲ್ಲಿ ರಿಯಾಯ್ತಿ ನೀಡುವ ತೀರ್ಮಾನವನ್ನು ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ: ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 17 ಗ್ರಾಮಗಳಲ್ಲಿ 3564 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಸಾರ್ವಜನಿಕರಿಗೆ ನಿವೇಶನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್‌ ಮೂರು ತಿಂಗಳೊಳಗೆ ಭೂಸ್ವಾಧೀನಕ್ಕೆ ನೋಟಿಫೈ ಆದೇಶ ಹೊರಡಿಸುವಂತೆ ಸೂಚಿಸಿತ್ತು. ಅದರಂತೆ ನಿವೇಶನ ಹಂಚಿಕೆ ಸಂಬಂಧ ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಿ, ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುವುದು ಎಂದು ವಿವರಿಸಿದರು.

ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೂ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಸುಮಾರು 65 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ವೆಚ್ಚವಾಗುವ ಅಂದಾಜುಯಿದ್ದು, “ಜೈಕಾ’ ಸಂಸ್ಥೆ ಸಹಯೋಗದಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಪರಮೇಶ್ವರ್‌ ಸ್ಪಷ್ಪಪಡಿಸಿದರು.

Advertisement

ಇನ್ನೋವೇಟಿವ್‌ ಸಿಟಿ ನಿರ್ಮಾಣ: ಹಳೇ ಮದ್ರಾಸ್‌ ರಸ್ತೆಯ ಕೋನದಾಸಪುರದ ಬಳಿ 165 ಎಕರೆ ಪ್ರದೇಶದಲ್ಲಿ ಇನ್ನೋವೇಟಿವ್‌ ಸಿಟಿ ನಿರ್ಮಾಣಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಪ್ರಸ್ತಾವ ಹಿಂದಿನ ಸರ್ಕಾರದಲ್ಲೇ ರೂಪುಗೊಂಡಿತ್ತು. ಇದೀಗ ಬಿಡಿಎ ವತಿಯಿದ ಯೋಜನೆ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿದ್ದು, ಶೀಘ್ರವಾಗಿ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಖಾಸಗಿ ಕಂಪನಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಅಂದಾಜು ವೆಚ್ಚದ ನಿಖರ ಮಾಹಿತಿ ಗೊತ್ತಾಗಲಿದೆ ಎಂದರು.

ಬನಶಂಕರಿ 6ನೇ ಹಂತದಲ್ಲಿ ಬಿಡಿಎ ವತಿಯಿಂದ 6 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ತುಮಕೂರು ರಸ್ತೆ ದಾಸನಪುರದಲ್ಲಿ ಬಿಡಿಎ ನಿರ್ಮಿಸಿರುವ ವಿಲ್ಲಾಗಳಿಗೆ ಗ್ರಾಹಕರಿಂದ ಭಾರೀ ಬೇಡಿಕೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಹೊಸ ವಿಲ್ಲಾ ಸಮೂಹಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸೆ.25ಕ್ಕೆ ನಿವೇಶನ ಹಂಚಿಕೆ: ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ 5 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಸೆ.25 ರಂದು ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಈ ರಿಯಾಯಿತಿಯು ಕೇವಲ ಕೊಮ್ಮಘಟ್ಟ, ಕಣ್ಮಿಣಿಕೆ ವಸತಿ ಸಮುತ್ಛಯಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಎರಡೂ ಪಾರ್ಟ್‌ಮೆಂಟ್‌ಗಳಲ್ಲಿ, 2 ಬೆಡ್‌ರೂಮ್‌ಗಳ 1400 ಫ್ಲ್ಯಾಟ್‌ಗಳಿವೆ.
-ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next