ಕೋಲಾರ: ಜೀತ ಪದ್ಧತಿ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್ ಪದ್ಧತಿಗಳು ಕಾನೂನುಬಾಹಿರ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವಾ ಗಿದೆ. ಪ್ರತಿ ವ್ಯಕ್ತಿಯು ಗೌರವಯುತವಾದ ಕೆಲಸ ಮಾಡಿ ಬದುಕಲು ಸಂವಿಧಾನ ಅವಕಾಶ ಕಲ್ಪಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ತಿಳಿಸಿದರು.
ನಗರದ ಶ್ರೀ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಮ್ಯಾನುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ ವಸತಿ ಜಾಗೃತಿ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಂಡ, ಶಿಕ್ಷೆ: ಜೀತದಾಳು ಪದ್ಧತಿ ಹಾಗೂ ಮಾನ್ಯುಯಲ್ ಸ್ಕ್ಯಾವೆಂಜರ್ ಪದ್ಧತಿಗಳನ್ನು ನಿರ್ಮೂಲನೆ ಮಾಡಲು 1993 ರಲ್ಲಿ ಕಾನೂನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ಮಾಡಿಕೊಂಡರೆ 1 ವರ್ಷ ಜೈಲು ಮತ್ತು 50 ಸಾವಿರ ದಂಡ ಅಥವಾ ಎರಡನ್ನು ವಿಧಿಸಬಹುದಾಗಿದೆ. ಎರಡನೇ ಬಾರಿ ಉಲ್ಲಂಘನೆ ಮಾಡಿದರೆ 2 ವರ್ಷ ಜೈಲು ಮತ್ತು 1 ಲಕ್ಷ ದಂಡ ಅಥವಾ ಎರಡನ್ನು ವಿಧಿ ಸಬಹುದಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಎನ್.ಎಂ.ನಾಗರಾಜ್ ಮಾತನಾಡಿ, ಸಮಾಜದ ಕಟ್ಟ ಕಡೆಯ ಅಂಚಿನಲ್ಲಿರುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವತ್ಛತೆ ಕಾರ್ಯ ಜೀವನಕ್ಕೆ ಅನಿವಾರ್ಯವಾಗಿದೆ. ಇದರಿಂದ ಸರ್ಕಾರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ ಎಂದರು.
110 ಎಕರೆ ಮಿಸಲು: ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, 2012-13 ರಲ್ಲಿ 148 ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳಿಗೆ ತಲಾ 40 ಸಾವಿರ ರೂ.ಗಳನ್ನು ನೀಡಲಾಗಿದೆ. ಜಿಲ್ಲೆಯದ್ಯಾಂತ ಪ್ರಸ್ತುತ 411 ಮ್ಯಾನ್ಯು ಯಲ್ ಸ್ಕ್ಯಾವೆಂಜರ್‌ಗಳಿದ್ದು, ಇವರಿಗೆ ಜಾಗೃತಿ ಶಿಬಿರ ನಡೆಸಲಾಗುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ಗಳಲ್ಲಿ 10 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶ ದಲ್ಲಿ ವಸತಿ ಇಲ್ಲದವರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅಂಬೇಡ್ಕರ್‌ಅಭಿವೃದ್ಧಿ ನಿಗಮ, ದೇವರಾಜ್ ಅರಸು ಅಭಿವೃದ್ಧಿ ನಿಗಮದ ಯೋಜನೆಯಡಿ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಜಿಲ್ಲೆಯಲ್ಲಿ 110 ಎಕರೆ ಪ್ರದೇಶ ಮೀಸಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜಣ್ಣ ಮಾತನಾಡಿದರು.ಲೀಡ್ ಬ್ಯಾಂಕ್ ಮ್ಯಾನೇಜರ್‌ರಾದ ಪಿಚ್ಚಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದೇಶಕ ರಾದ ಬಾಲಾಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.