ಕೋಲಾರ: ರಾಷ್ಟ್ರೀಯ ಪೋಷಣೆ ವಾರ ಆಚರಣೆ ಪ್ರಯುಕ್ತ ನಗರದ ದೇವರಾಜ ಅರಸು ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ಪೋಷಣೆ ಮತ್ತು ಆಹಾರ ನಿಯಮಗಳ ವಿಭಾಗದಿಂದ ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ವೈದ್ಯಕೀಯ ಪೋಷಣೆ ಮತ್ತು ಆಹಾರ ನಿಯಮಗಳ ವಿಭಾಗ, ಪ್ರತಿವರ್ಷದಂತೆಯೇ ಸಾರ್ವಜನಿಕರಿಗೆ ಆಹಾರ, ಆರೋಗ್ಯ ಮತ್ತು ಪರಿಸರ ಸಂಬಂಧ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಅಂತೆಯೇ ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಾಥಾದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳು ಹಾಗೂ ಇದಕ್ಕೆ ಪರ್ಯಾಯವಾಗಿ ಬಳಸಬಹುದಾದ ಸುರಕ್ಷಿತ ಸಾಧನಗಳ ಬಗ್ಗೆ ಘೋಷಣೆಗಳನ್ನು ಕೂಗುವುದರ ಜತೆಗೆ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆಯ ಚೀಲಗಳನ್ನು ವಿತರಣೆ ಮಾಡಿದರು. ಸೆ.4ರಿಂದ 7ರವರೆಗೆ ಆಹಾರ ನಿಯಮಗಳ ಶಿಕ್ಷಣ ಕಾರ್ಯಕ್ರಮವನ್ನು ಅಂತರಗಂಗೆಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ಕೊತ್ತಮಂಗಲದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವುದಾಗಿ ಇದೇ ವೇಳೆ ವಿಭಾಗದ ಮುಖ್ಯಸ್ಥರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕುಲಪತಿ ಡಾ.ಎಸ್.ಕುಮಾರ್, ದೇವರಾಜ ಅರಸ್ ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಡಾ.ಎ.ವಿ.ಎಂ.ಕುಟ್ಟಿ, ವೈದ್ಯಕೀಯ ವಿಭಾಗದ ಉಪ ಕುಲಪತಿ ಡಾ.ಸಿ.ಕೆ.ರಂಜನ್, ವೈದ್ಯಕೀಯ ಅಧೀಕ್ಷಕ ಡಾ.ವಿ.ಲಕ್ಷ್ಮಯ್ಯ, ವೈದ್ಯಕೀಯ ಪೋಷಣೆ ಮತ್ತು ಆಹಾರ ನಿಯಮಗಳ ವಿಭಾಗದ ಮುಖ್ಯಸ್ಥೆ ಡಾ.ಮಾಧವಿರೆಡ್ಡಿ, ಸಿಬ್ಬಂದಿ ಡಾ.ಅನೀಸ್ ಫಾತಿಮಾ ತಬಸ್ಸುಮ್, ಡಾ.ಶಿವಕುಮಾರ್, ಎನ್.ಅಂಜಲಿ, ನಗರಸಭೆ ಮಾಜಿ ಸದಸ್ಯ ವೆಂಕಟೇಶ್‌ಪತಿ, ಆರೋಗ್ಯ ನಿರೀಕ್ಷಕಿ ಮರಿಯಾ ಉಪಸ್ಥಿತರಿದ್ದರು.