Advertisement

ಮನೆ ಮನೆಗೆ ಹೋಗಿ ಕಾಯ್ದೆ ಮನವರಿಕೆ

10:28 AM Dec 29, 2019 | Team Udayavani |

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಿಗೆ ಸತ್ಯಾಸತ್ಯತೆತಿಳಿಸಿಕೊಡುವ ಗುರುತರ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ತಿಳಿಸಿದರು.

Advertisement

ಮಂತ್ರಾ ರೆಸಿಡೆನ್ಸಿಯಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ-2019 ವಿಭಾಗ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪೌರತ್ವ ಕಾಯ್ದೆ ತಿದ್ದುಪಡಿ ದೇಶದ 130 ಕೋಟಿ ಜನರಿಗೆ ಸಂಬಂಧವೇ ಇಲ್ಲ. ಆದರೂ ಕಾಂಗ್ರೆಸ್‌ನವರು ಮುಸಲ್ಮಾನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಜನರಿಗೆ ಕಾಯ್ದೆ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅದಕ್ಕೂ ಮುನ್ನ ಕಾರ್ಯಕರ್ತರು ಕಾಯ್ದೆ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳುವುದು ಸೂಕ್ತ ಎಂದರು.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದಲ್ಲಿ ದಯನೀಯ ಸ್ಥಿತಿಯಲ್ಲಿರುವ, ಭಾರತಕ್ಕೆ ಬರಲು ಇಚ್ಛಿಸುವ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ಒದಗಿಸುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು. ದೇಶದ ಜನರ ಒಳಿತಿಗೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಆರ್‌ಪಿ) ಅವಶ್ಯಕವಾಗಿದೆ. ಜನಗಣತಿಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಜನರಿಗೆ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ತಿಳಿಸಿಕೊಡುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ನುಡಿದರು.

ಕಾಂಗ್ರೆಸ್‌ ಹಚ್ಚಿದ ಬೆಂಕಿ ಆರಿಸಬೇಕಿದೆ: ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ಕಾಂಗ್ರೆಸ್‌ನ ಖೊಟ್ಟಿ ಜಾತ್ಯತೀತತೆ ಖಂಡಿಸಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದಿದ್ದೇನೆ. ಜಾತ್ಯತೀತತೆ ಹೆಸರಿನಲ್ಲಿ ಕಾಂಗ್ರೆಸ್‌ ಢೋಂಗಿತನ ಮಾಡುತ್ತಿದೆ. ಕಾಂಗ್ರೆಸ್‌ ಹಿಂದೂ ಹಾಗೂ ಮುಸಲ್ಮಾನ ಧರ್ಮಗಳನ್ನು ಒಡೆಯುವುದಷ್ಟೇ ಅಲ್ಲ, ಹಿಂದೂ ಧರ್ಮದಲ್ಲಿನ ಜಾತಿಗಳನ್ನು ಒಡೆಯಲು ಯತ್ನಿಸಿತು. ಜಾತಿ, ಧರ್ಮ ಒಡೆಯವುದರಲ್ಲಿ ಸಿದ್ದರಾಮಯ್ಯ ನಿಷ್ಣಾತರು. ಅವರು ವೀರಶೈವ ಹಾಗೂ ಲಿಂಗಾಯತರನ್ನು ಒಡೆಯಲು ಯತ್ನಿಸಿದ್ದಕ್ಕೆ ಜನರು ಅವರಿಗೆ ತಕ್ಕ ಪಾಠ ಕಲಿಸಿದರು ಎಂದರು.  ನುಸುಳುಕೋರರ ಮೇಲೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದನ್ನು ಎಲ್ಲ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳ ಮೂಲಕ ಬಿಜೆಪಿ ದಾಪುಗಾಲಿಡುತ್ತಿದ್ದು, ಇದರಿಂದ ಆತಂಕಕ್ಕೊಳಗಾದ ಕಾಂಗ್ರೆಸ್‌ ಮುಸಲ್ಮಾನರಲ್ಲಿ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಹಚ್ಚಿದ ಬೆಂಕಿಯನ್ನು ನಾವೆಲ್ಲರೂ ಸೇರಿ ಆರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಶಾಸಕರಾದ ರಾಮಣ್ಣ ಲಮಾಣಿ, ಅರುಣಕುಮಾರ ಪೂಜಾರಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ಯು.ಬಿ. ಬಣಕಾರ, ನಾರಾಯಣ ಜರತಾರಘರ, ಜಯತೀರ್ಥ ಕಟ್ಟಿ, ನಾಗೇಶ ಕಲಬುರ್ಗಿ, ವೀರಣ್ಣ ಜಡಿ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next