ದಾವಣಗೆರೆ: ಚೈಲ್ಡ್‌ಲೈನ್, ಡಾನ್‌ಬಾಸ್ಕೋ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈಲ್ಡ್‌ಲೈನ್ ಫೌಂಡೇಷನ್ ಆಫ್ ಇಂಡಿಯಾ ಸಂಸ್ಥೆ, ರೈಲ್ವೆ ಇಲಾಖೆ ಸಹಯೋಗದಲ್ಲಿ ಸೋಮವಾರ ರೈಲ್ವೆ ನಿಲ್ದಾಣದಲ್ಲಿ ನೈಲ್ ಪಾಲಿಶ್ ಮಾದರಿ ಬೆರಳಿಗೆ ಶಾಯಿ ಹಚ್ಚುವ ಮೂಲಕ ವಿಶ್ವ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರತಿಬಂಧಕ (ತಡೆ) ದಿನ ಆಚರಿಸಲಾಯಿತು.
ಬೆರಳಿಗೆ ಶಾಯಿ ಹಚ್ಚುವ ಸಂದರ್ಭದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಶೋಷಣೆ, ಅಂತಹ ಸಂದರ್ಭದಲ್ಲಿ ಮಕ್ಕಳು ಅನುಸರಿಸಬೇಕಾದ ರಕ್ಷಣಾ ಕ್ರಮ, ಮಕ್ಕಳು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ-1098ಕ್ಕೆ ಕರೆ ಮಾಡುವುದು, ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು… ಇತ್ಯಾದಿ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಮಕ್ಕಳ ಸಹಾಯವಾಣಿ ಕೊಲ್ಯಾಬ್ ಸಂಯೋಜಕ ಟಿ.ಎಂ. ಕೊಟ್ರೇಶ್ ತಿಳಿಸಿದರು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ ನಡೆಯುತ್ತಲೇ ಇದೆ. ಅಂತಹ ಪ್ರಯತ್ನ ನಡೆದಂತಹ ಸಂದರ್ಭದಲ್ಲಿ ಮಕ್ಕಳು ಜೋರಾಗಿ ಕಿರುಚಿಕೊಳ್ಳುವುದು, ಸಾಧ್ಯವಾದಷ್ಟೂ ತಪ್ಪಿಸಿಕೊಂಡು ಓಡಿ ಹೋಗುವುದು, ಪರಿಚಿತರು, ಪೊಲೀಸರಿಗೆ ಮಾಹಿತಿ ನೀಡುವಂತಹ ವಿಚಾರಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಕಳೆದ ಅಕ್ಟೋಬರ್‌ನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 3, ಮಕ್ಕಳ ಸಹಾಯವಾಣಿ ಮೂಲಕ 1 ಒಳಗೊಂಡಂತೆ 4 ಫೋಕ್ಸೋ ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.
ಎಂಸಿಬಿ (ಮಿಸ್ಸಿಂಗ್ ಚೈಲ್ಡ್ ಬ್ಯೂರೋ) ಸಂಯೋಜಕ ಮಂಜುನಾಥ್ ಮಾತನಾಡಿ, ಅಕ್ಟೋಬರ್‌ನಲ್ಲಿ 5 ಮಕ್ಕಳು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. ಕಳೆದ 6 ತಿಂಗಳಲ್ಲಿ 48 ಮಕ್ಕಳು ಕಾಣೆಯಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 28 ಮಕ್ಕಳನ್ನ ಪತ್ತೆ ಹಚ್ಚಲಾಗಿದೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ದಾವಣಗೆರೆಯ ಜಾಲಿನಗರದ 1ನೇ ಮುಖ್ಯ ರಸ್ತೆ 3 ನೇ ಕ್ರಾಸ್ ನಿವಾಸಿ ಮಣಿಕಂಠ ಎಂಬ ಬಾಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ರೈಲ್ವೆ ಸುರಕ್ಷತಾ ಪಡೆ ಅಧಿಕಾರಿಗಳು ಆ ಬಾಲಕನನ್ನು ಹುಬ್ಬಳ್ಳಿಯ ಬಾಲ ಮಂದಿರದಲ್ಲಿ ಇರಿಸಿದ್ದಾರೆ.
ಬಾಲಕನ ಪೋಷಕರು ಮಂಗಳವಾರ ಎಂಸಿಬಿ ಮುಂದೆ ಹಾಜರಾಗಿ ಮಗನನ್ನು ಕರೆದುಕೊಂಡು ಬರುವರು. ತಂದೆ-ತಾಯಿಯಿಂದ ತಪ್ಪಿಸಿಕೊಂಡು ಬಂದಿದ್ದ 18 ಮಕ್ಕಳಲ್ಲಿ 6 ಮಕ್ಕಳ ತಂದೆ-ತಾಯಿ ಪತ್ತೆ ಹಚ್ಚಿ, ಆ ಮಕ್ಕಳನ್ನ ಮನೆಗೆ ಕಳಿಸಿಕೊಡಲಾಗಿದೆ ಎಂದು ತಿಳಿಸಿದರು. ರೈಲ್ವೆ ಸುರಕ್ಷತಾ ದಳದ ಎ. ಶಾಜಿ ಮ್ಯಾಥುಸ್, ಮಕ್ಕಳ ಸಹಾಯವಾಣಿ ಕೊಲ್ಯಾಬ್‌ನ ಡಿ. ರವಿ, ಟಿ.ಎ. ಅರ್ಷದ್ ಅಲಿ, ಸಿ. ಜ್ಯೋತಿ, ವಿ.ಆರ್. ಪ್ರಶಾಂತ್, ಡಿ. ಮಂಜುನಾಥ್, ನಾಗರಾಜ್ ಇತರರು ಇದ್ದರು.