Advertisement

ಅರಿವು, ಆಚಾರ ಒಂದಾದರೆ ಜಾತಿಯೆಂಬ ಭೂತ ದೂರ

12:08 AM Aug 03, 2019 | Sriram |

ಉಡುಪಿ: ಇಂದಿನ ಮನುಕುಲ ಜಾತಿ, ಧರ್ಮ, ಆಚಾರ, ಅಸ್ಪೃಶ್ಯತೆ, ಮೌಡ್ಯಗಳೆಂಬ ಹತ್ತು ಹಲವು ರೋಗಗಳಿಂದ ಬಳಲುತ್ತಿದೆ. ಅವುಗಳಿಂದ ಮುಕ್ತಿ ಪಡೆದು ಆರೋಗ್ಯಯುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ “ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಪಾದರು ತಿಳಿಸಿದ್ದಾರೆ.

Advertisement

ಸಾಣೆಹಳ್ಳಿ ಸಹಮತ ವೇದಿಕೆ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಹಾಗೂ ಉಡುಪಿ ಬಸವ ಸಮಿತಿ ಸಹಯೋಗದಲ್ಲಿ ಶುಕ್ರವಾರ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಿದ್ದ “ಮತ್ತೆ ಕಲ್ಯಾಣ’ ಹಾಗೂ ಉಡುಪಿ ಬಸವ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿ ಕಲ್ಯಾಣ-ಲೋಕ ಕಲ್ಯಾಣ
ಒಬ್ಬ ವ್ಯಕ್ತಿಯ ಕಲ್ಯಾಣಕ್ಕಿಂತ ಲೋಕ ಕಲ್ಯಾಣ ಮುಖ್ಯವೆಂಬುವುದನ್ನು ಶರಣ ಧರ್ಮ ತಿಳಿಸುತ್ತದೆ. ವಚನವೆಂಬುದು ಸಾಹಿತ್ಯವಲ್ಲ ಇದು ಒಂದು ಅದ್ಭುತವಾದ ಧರ್ಮವಾಗಿದೆ. ಅವುಗಳಲ್ಲಿ ಇಂದಿನ ಬದುಕಿಗೆ ಬೇಕಾದ ಎಲ್ಲ ಅಂಶಗಳಿವೆ. ಧರ್ಮದ ಬಗೆಗಿನ ಪರಿಕಲ್ಪನೆಗಳು ಛಿದ್ರಗೊಂಡಿವೆ. ಯಾವುದು ಧರ್ಮವಲ್ಲವೋ ಅದನ್ನು ಧರ್ಮವೆಂದು ಹೇಳಲಾಗುತ್ತಿದೆ ಎಂದು ಕಾಂತಾವರ ಅಲ್ಲಮಪ್ರಭು ಪೀಠದ ನಿರ್ದೇಶಕ ಡಾ| ನಾ. ಮೊಗಸಾಲೆ ತಿಳಿಸಿದರು.

ಬಾಲಕಿಯರ ಪ.ಪೂ. ಕಾಲೇಜು ಶಿಕ್ಷಕ ನಾಗರಾಜ ಜೆ.ಎಂ. ಹಾಗೂ ಕಡೂರು ಮಾಜಿ ಶಾಸಕ ವೈ.ಎಸ್‌. ವಿ. ದತ್ತ ಅವರು ವಿಶೇಷ ಉಪನ್ಯಾಸ ನೀಡಿದರು.

ನಾವೆಲ್ಲರೂ ಒಂದಾಗುವುದು ಯಾವಾಗ?
ನಾವು ಕುಡಿಯುವ ನೀರಿಗೆ, ಉಸಿರಾಡುವ ಗಾಳಿಗೆ, ನಡೆದಾಡುವ ನೆಲಕ್ಕಿಲ್ಲದ ಜಾತಿ, ಅಸ್ಪೃಶ್ಯತೆ ಮನುಕುಲಕ್ಕೆ ಯಾಕೆ ಬಂತು? ಹೇಗೆ ಬಂತು?. ನಡೆ -ನುಡಿ ಸಿದ್ಧಾಂತವಾದಾಗ ಮಾತ್ರ ಜಾತಿಯೆಂಬ ಭೂತ ಮನುಕುಲದಿಂದ ದೂರ ಹೋಗುತ್ತದೆ. ಆ ಮೂಲಕ ನಾವೆಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ನೆಲೆಗೊಳ್ಳುತ್ತದೆ. ಎಲ್ಲರ ಹುಟ್ಟು ಒಂದೇ ರೀತಿಯಿದೆ. ಮನುಷ್ಯ ನೀತಿಯಿಂದ ನಡೆದುಕೊಂಡರೆ ಶ್ರೇಷ್ಠ, ದುರಾಚಾರದಿಂದ ನಡೆದುಕೊಂಡರೆ ಆ ವ್ಯಕ್ತಿ ಕನಿಷ್ಠ. ಭಗವಂತನ ಹೆಸರಿನಲ್ಲಿ ಗುಡಿ ಸುತ್ತುವುದು, ನೀರಿನಲ್ಲಿ ಮುಳುಗುವ ಆಚರಣೆಗಳು ಮೌಡ್ಯದ ಸಂಕೇತ. ಬತ್ತಿ ಹೋಗುವ ನದಿ, ಬಾಡಿ ಹೋಗುವ ಮರವನ್ನು ನಂಬುವವರು ನಿಜವಾದ ದೇವರು ನಂಬಲು ಸಾಧ್ಯವೇ ಎಂಬುದನ್ನು ಶರಣರು 12ನೇ ಶತಮಾನದಲ್ಲಿ ಪ್ರಶ್ನಿಸಿದ್ದಾರೆ ಎಂದು ಸಾಣೆಹಳ್ಳಿ ಸ್ವಾಮೀಜಿ ಹೇಳಿದರು.

Advertisement

ಮನುಷ್ಯರಿಗೆ ಬುದ್ಧಿ
ನೀಡಿದ ಭಗವಂತ
ಮೌಡ್ಯಗಳು ಎಲ್ಲೆಡೆ ಪ್ರಸಾರವಾಗುತ್ತಿವೆ. ದೃಶ್ಯ ಮಾಧ್ಯಮಗಳು ಇವುಗಳನ್ನು ಪ್ರಸಾರ ಮಾಡುವಲ್ಲಿ ಸ್ಪರ್ಧೆಗೆ ನಿಂತಿವೆ. ಭಗವಂತ ಮನುಷ್ಯರಿಗೆ ಬುದ್ಧಿಯನ್ನು ನೀಡಿದ್ದಾನೆ. ಅದನ್ನು ಸದ್ಬಳಕೆ ಮಾಡಿಕೊಂಡರೆ ನಾವು ಯಾವ ಮೌಡ್ಯಗಳಿಗೆ ಬಲಿಯಾಗ ಬೇಕಾಗಿಲ್ಲ ಎಂದು ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next