Advertisement

‘ಮಧ್ಯವರ್ತಿ ತಡೆಗೆ ಸಕಾಲ ಬಳಸಿಕೊಳ್ಳಿ’

02:28 PM Oct 21, 2018 | |

ಪುತ್ತೂರು: ನಾಗರಿಕರ ಹಕ್ಕನ್ನು ತೆರೆದಿಟ್ಟ ಯೋಜನೆ ಸಕಾಲ. ಮಧ್ಯ ವರ್ತಿಗಳ ಸಹಾಯ ಇಲ್ಲದೆ ನೇರವಾಗಿ ತಮ್ಮ ಸೌಲಭ್ಯಗಳನ್ನು ಪಡೆದು ಕೊಳ್ಳಲು ಇದರಿಂದ ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇವೆ ನೀಡಬೇಕು ಎಂದು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು. ಶನಿವಾರ ಪುತ್ತೂರು ಮಿನಿ ವಿಧಾನ ಸೌಧದಲ್ಲಿ ನಡೆದ ಸಕಾಲ ಯೋಜನೆ ಕುರಿತು ಸಿಬಂದಿ ಹಾಗೂ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ನಿಗದಿತ ಸಮಯದೊಳಗೆ ಸೇವೆ ಒದಗಿಸಿ ಕೊಡಬೇಕು ಎನ್ನುವುದು ಸಕಾಲ ಯೋಜನೆಯ ಧ್ಯೇಯ. ಒಂದು ಅರ್ಜಿ 21 ದಿನದೊಳಗೆ ವಿಲೇ ಆಗಬೇಕು ಎಂದಿದ್ದರೆ, ಆ ದಿನದೊಳಗೆ ಅರ್ಜಿ ಸಲ್ಲಿಸಿದ ವ್ಯಕ್ತಿ ಬಂದು ಪಡೆದುಕೊಳ್ಳಬೇಕು. ಒಂದು ವೇಳೆ ತಿರಸ್ಕೃತವಾದರೆ, ಅದಕ್ಕೆ ಹಿಂಬರಹ  ನೀಡಬೇಕು. ಇದರ ಬಗ್ಗೆ ಫಲಾನುಭವಿಗಳು ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ನಾಗರಿಕರು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಕಾಲ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ ಮದ್ಯವರ್ತಿಗಳನ್ನು ದೂರ ಮಾಡಬಹುದು ಎಂದರು.

ಸಕಾಲದಡಿ ಸುಮಾರು 73ರಷ್ಟು ಇಲಾಖೆಗಳು ಬರುತ್ತವೆ. ಕಂದಾಯ ಇಲಾಖೆಯ 55ರಷ್ಟು ಸೇವೆಗಳು ಇದರಲ್ಲಿ ದೊರಕುತ್ತವೆ. ಇದುವರೆಗೆ ಸಾಕಷ್ಟು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು. ಅಧಿಕಾರಿ, ಸಿಬಂದಿಗೆ ಎಲ್ಲವೂ ತಿಳಿದಿರಬೇಕು ಎಂಬ ನಿಯಮವೇನೂ ಇಲ್ಲ. ನಾವೇನೂ ಬ್ರಹ್ಮರಲ್ಲ. ತಿಳಿದಷ್ಟು ವಿಚಾರ ಬಳಸಿಕೊಂಡು ಸಾರ್ವಜನಿಕರಿಗೆ ಮಾಹಿತಿ, ಸೌಲಭ್ಯ ನೀಡಬೇಕು. ಗೊತ್ತಿಲ್ಲದೇ ಇದ್ದರೆ ಇತರರಿಂದ ಮಾಹಿತಿ ಪಡೆದು ಸೇವೆ ನೀಡಿ. ವ್ಯವಸ್ಥೆಯಲ್ಲಿರುವ ಲೋಪಗಳನ್ನು ನಿವಾರಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಹಾಯಕ ಆಯುಕ್ತರು ಕರೆ ನೀಡಿದರು.

ಮಾಹಿತಿ ಫಲಕ ಹಾಕಿ
ಅಶೋಕ್‌ ಅಡಮಾಲೆ ಮಾತನಾಡಿ, ಸಕಾಲ ಯೋಜನೆಯ ಸದುಪಯೋಗ ಇನ್ನೂ ಹೆಚ್ಚಾಗಬೇಕು. ಇದಕ್ಕಾಗಿ ಶಾಲೆ- ಕಾಲೇಜುಗಳಲ್ಲಿ ಮಾಹಿತಿ ಹಾಕುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸಹಾಯಕ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಸಂದೀಪ್‌ ಲೋಬೋ ಮಾತನಾಡಿ, ನಗರಸಭೆಯಲ್ಲಿ ಸಕಾಲ ಯೋಜನೆಯ ಬಗ್ಗೆ ಮಾಹಿತಿ ಫಲಕವೇ ಇಲ್ಲ.

ಸಕಾಲಕ್ಕೆ ಡಿಸಿ ಸುಪ್ರೀಂ 
ಸಕಾಲ ಯೋಜನೆಯಡಿ ಜಿಲ್ಲಾಧಿಕಾರಿ ಉನ್ನತ ಸ್ಥಾನದಲ್ಲಿರುತ್ತಾರೆ. ಇಲ್ಲಿ ನಡೆಯುವ ಯಾವುದೇ ಪ್ರಕ್ರಿಯೆಗಳನ್ನು ಇಟ್ಟುಕೊಂಡು ನ್ಯಾಯಾಲಯಕ್ಕೆ ಹೋಗಲು ನಾಗರಿಕರಿಗೆ ಅಥವಾ ಅಧಿಕಾರಿಗಳಿಗೆ ಸಾಧ್ಯವಿಲ್ಲ. ಸಮಸ್ಯೆ ಎದುರಾದರೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಒಂದು ವೇಳೆ ಸೌಲಭ್ಯ ನೀಡುವುದು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬಂದಿಗೆ ದಂಡ ವಿಧಿಸಲಾಗುತ್ತದೆ. ನೇರವಾಗಿ ಇದು ಅವರ ವೇತನದಿಂದಲೇ ಕಡಿತ ಮಾಡಲಾಗುತ್ತದೆ. 20 ರೂ.ನಿಂದ 500 ರೂ.ವರೆಗೂ ದಂಡ ವಿಧಿಸಲು ಅವಕಾಶ ಇದೆ. ತಪ್ಪು ಮರುಕಳಿಸುತ್ತಾ ಸಾಗಿದರೆ ಶಿಸ್ತು ಕ್ರಮ ಕೈಗೊಳ್ಳಲು ಇಲ್ಲಿ ಅವಕಾಶ ನೀಡಲಾಗಿದೆ ಎಂದು ಸಹಾಯಕ ಆಯುಕ್ತರು ವಿವರಿಸಿದರು.

Advertisement

ನಡವಳಿಕೆ ಸರಿ ಇರಲಿ
ಅಧಿಕಾರಿ ಅಥವಾ ಸಿಬಂದಿ ಮೇಲೆ ನಾಗರಿಕರು ನಂಬಿಕೆ ಇಟ್ಟು ಕಚೇರಿಗೆ ಬರುತ್ತಾರೆ. ಒಮ್ಮೆ ಅಧಿಕಾರಿಯನ್ನು ನೆಚ್ಚಿಕೊಂಡರೆ, ಮತ್ತೆ ಯಾವುದೇ ಕಾರಣಕ್ಕೂ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಹೊಂದುವುದಿಲ್ಲ. ಒಂದೆರಡು ಮಂದಿ ಕೆಟ್ಟದಾಗಿ ಮಾತ ನಾಡುವ ಜನರಿರಬಹುದು. ಇಲಾಖೆಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಜತೆ ಉತ್ತಮ ನಡವಳಿಕೆ ತೋರಿ ಸಕಾಲ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next