Advertisement

ಗುಡಿ, ಚರ್ಚು, ಮಸೀದಿಗಳಲ್ಲೂ ಸಂಚಾರ ನಿಯಮ ಪಾಲನೆ ಜಾಗೃತಿ

01:15 AM Sep 16, 2019 | Lakshmi GovindaRaju |

ಬೆಂಗಳೂರು: “ಸಂಚಾರ ನಿಯಮ ಪಾಲಿಸಿ, ಹಣ ಉಳಿಸಿ’ ಎಂಬ ಘೋಷ ವಾಕ್ಯದೊಂದಿಗೆ ಸಾಮಾಜಿಕ ಜಾಲತಾಣ, ಜಾಹಿರಾತು ಫ‌ಲಕಗಳ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುತ್ತಿದ್ದ ಸಂಚಾರ ಪೊಲೀಸರು, ಇದೀಗ ಧಾರ್ಮಿಕ ಕೇಂದ್ರ ಹಾಗೂ ಧರ್ಮ ಗುರುಗಳ ಮೊರೆ ಹೋಗಿದ್ದಾರೆ.

Advertisement

ಉತ್ತರ ವಿಭಾಗದ ಸಂಚಾರ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಕರಪತ್ರ, ಮೌಖೀಕ ಹಾಗೂ ಧರ್ಮಗುರುಗಳ ಮೂಲಕ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಅಲ್ಲದೆ, ಜನಸಂದಣಿ ಇರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಕೈಮುಗಿದು ಸಂಚಾರ ನಿಯಮ ಪಾಲನೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಮೂರು ದಿನಗಳಿಂದ ಜಾಗೃತಿ ಕಾರ್ಯಕ್ರಮ ಆರಂಭಿಸಿರುವ ಪೊಲೀಸರು, ಶುಕ್ರವಾರ ಯಲಹಂಕ, ಹೆಬ್ಟಾಳ, ಚಿಕ್ಕಜಾಲ, ದೇವನಹಳ್ಳಿ, ಆರ್‌.ಟಿ.ನಗರ ಸೇರಿ ಎಲ್ಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿರುವ ಮಸೀದಿಗಳಿಗೆ ಭೇಟಿ ನೀಡಿ, ಕರಪತ್ರ ವಿತರಣೆ ಮಾಡಿ, ಮೌಲ್ವಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಹಾಗೆಯೇ ಶನಿವಾರ ದೇವಾಲಯಗಳಿಗೆ ತೆರಳಿ ಮನವಿ ಮಾಡಲಾಗಿದೆ.

ಭಾನುವಾರ ಚರ್ಚ್‌ಗಳಿಗೆ ತೆರಳಿ, ಫಾದರ್‌ಗಳ ಮೂಲಗಳ ಸಂಚಾರ ನಿಯಮ ಪಾಲಿಸುವಂತೆ ಸಂದೇಶ ರವಾನಿಸಿದ್ದಾರೆ. ಜತೆಗೆ ಪಾರ್ಕಿಂಗ್‌ ಸ್ಥಳಗಳು, ಬಸ್‌ ನಿಲ್ದಾಣ ಇತರೆಡೆಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಉತ್ತರ ವಿಭಾಗದ ಸಂಚಾರ ಡಿಸಿಪಿ ಸಾ.ರಾ.ಫಾತೀಮಾ, ಎಷ್ಟೇ ಜಾಗೃತಿ ಮೂಡಿಸಿದರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಅಧಿಕವಾಗಿವೆ. ಹೀಗಾಗಿ ಸಾರ್ವಜನಿಕರಿಗೆ ಇನ್ನಷ್ಟು ಜಾಗೃತಿ ಮೂಡಿಸಲು ದೇವಾಲಯಗಳು, ಚರ್ಚ್‌, ಮಸೀದಿ ಹಾಗೂ ಹೆಚ್ಚು ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಪಶ್ಚಿಮ ಮತ್ತು ಪೂರ್ವ ವಿಭಾಗಗಳಲ್ಲಿಯೂ ಈ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.

Advertisement

34 ಲಕ್ಷ ರೂ. ಸಂಗ್ರಹ: ಸಂಚಾರ ನಿಯಮ ಉಲ್ಲಂಘನೆ ಕುರಿತು ನಗರ ಸಂಚಾರ ಪೊಲೀಸರ ಕಾರ್ಯಾಚರಣೆಯ ಬಿಸಿ ವಾಹನ ಸವಾರರಿಗೆ ತುಸು ಜೋರಾಗಿಯೇ ತಟ್ಟುತ್ತಿದೆ. ಸೆ.14ರ ಬೆಳಗ್ಗೆ 10 ಗಂಟೆಯಿಂದ ಸೆ.15ರ ಬೆಳಗ್ಗೆ 10 ಗಂಟೆವರೆಗಿನ (24 ಗಂಟೆಗಳಲ್ಲಿ) ಕಾರ್ಯಾಚರಣೆಯಲ್ಲಿ ಬರೋಬ್ಬರಿ 34,72,500 ರೂ. ದಂಡ ಸಂಗ್ರಹವಾಗಿದೆ.

ಈ ಮೂಲಕ 12 ದಿನಗಳಲ್ಲಿ ಎರಡೂವರೆ ಕೋಟಿಗೂ ಅಧಿಕ ದಂಡ ಮೊತ್ತ ಸಂಗ್ರಹವಾದಂತಾಗಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳು ಹಾಗೂ ನೇರವಾಗಿ ಪರಿಷ್ಕೃತ ದಂಡದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಮಧ್ಯೆ ದಿನದಿಂದ ದಿನಕ್ಕೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.

11 ದಿನಗಳಿಗೆ ಹೊಲಿಸಿದರೆ ಕಳೆದ 24 ಗಂಟೆಗಳಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಸಂಬಂಧ 427 ಪ್ರಕರಣಗಳನ್ನು ದಾಖಲಿಸಲಾಗಿದೆ. ವಾರಾಂತ್ಯವಾದ್ದರಿಂದ ಈ ಪ್ರಕರಣಗಳು ಅಧಿಕವಾಗಿದೆ. ಆದರೂ ವಾಹನ ಸವಾರರು ಸಂಚಾರ ನಿಯಮ ಪಾಲನೆ ಮಾಡುವುದು ಪ್ರತಿಯೊಬ್ಬರಿಗೂ ಒಳಿತು ಎಂದು ಸಂಚಾರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next