ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವ್ಯಾಪಕ ಜನಜಾಗೃತಿ ಮೂಡಿಸುವ ಬಗ್ಗೆ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಎಲ್ಲಾ ಮೋರ್ಚಾಗಳ ವಿಶೇಷ ಸಭೆ ನಡೆದಿದ್ದು, ಯಾವ ರೀತಿ ಅಭಿಯಾನ ಮುನ್ನಡೆಸ ಬೇಕೆಂಬ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರೊಬ್ಬರಿಗೂ ತೊಂದರೆಯಾಗಲ್ಲ. ಆದರೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಜನರಿಗೆ ಸುಳ್ಳು ಮಾಹಿತಿ ನೀಡಿ, ದಾರಿ ತಪ್ಪಿಸುತ್ತಿವೆ ಎಂದು ಹೇಳಿದರು.
ರಾಜಕೀಯ ಲಾಭಕ್ಕಾಗಿ ಕೆಲ ಪಕ್ಷಗಳು ಹಿಂಸಾಚಾರ ಪ್ರಚೋದಿಸುತ್ತಿವೆ. ಈ ಅಂಶಗಳನ್ನು ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಮನೆ-ಮನೆಗೆ ತೆರಳಿ ಜನರಿಗೆ ಮನದಟ್ಟು ಮಾಡಬೇಕೆಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ಪ್ರಮುಖ ಅಂಶ ಮತ್ತು ಪ್ರತಿಪಕ್ಷ, ಇತರೆ ಶಕ್ತಿಗಳ ಷಡ್ಯಂತ್ರ, ಪಿತೂರಿ ಬಗ್ಗೆ ಜಾಗೃತಿ ಮೂಡಿಸಲು ಜ.1ರಿಂದ ಆಂದೋಲನ ನಡೆಯಲಿದೆ.
ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಪ್ರಚಾರ ನಡೆಸಬೇಕು. ಮಹಿಳಾ ಮೋರ್ಚಾ ಭಾರತ ಮಾತೆಗೆ ಪೂಜೆ ಸಲ್ಲಿಸಿ ಕಾಯ್ದೆ ಬಗ್ಗೆ ಜನತೆಗೆ ವಿವರಿಸಬೇಕು ಎಂದು ಮಾಹಿತಿ ನೀಡಿದರು. ಮಂಡಲ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು. ಡಿ.5ರಂದು ಎಲ್ಲಾ ಕಡೆ ಮಹಾ ಸಂಪರ್ಕ ಅಭಿಯಾನ ನಡೆಸಬೇಕು. ಜತೆಗೆ ಸಹಿ ಸಂಗ್ರಹ ಅಭಿಯಾನ, ಸಾರ್ವಜನಿಕ ಸಭೆ, ಮೆರವಣಿಗೆ ನಡೆಸಬೇಕು.
ಕಿಸಾನ್ ಮೋರ್ಚಾದವರು ಎತ್ತಿನ ಬಂಡಿ ಮೆರವಣಿಗೆ, ರೈತಮೋರ್ಚಾ ವಾಕಥಾನ್, ಮಾನವ ಸರಪಳಿ ಮತ್ತು ಪಂಜಿನ ಮೆರವಣಿಗೆ ನಡೆಸಿ ಜನರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಅಭಿಯಾನದ ಸಂಚಾಲಕರಾದ ಮಹೇಶ್ ಟೆಂಗಿನಕಾಯಿ, ಪಿ.ರಾಜೀವ್, ರಾಜ್ಯ ಕಾರ್ಯದರ್ಶಿ ಭಾರತಿ ಮಗಮ್, ಡಿ.ಎಸ್.ವೀರಯ್ಯ, ಅಬ್ದುಲ್ ಅಜೀಮ್ ಇದ್ದರು.