Advertisement

ಸಾಮಾಜಿಕ ಕಳಕಳಿಯ ಜಾಗೃತಿ

03:20 PM Nov 12, 2017 | Team Udayavani |

ಉರ್ವ: ಸ್ವಚ್ಛ ಭಾರತದ ಮೂಲಕ ನವ ಭಾರತ ನಿರ್ಮಾಣ ಮಾಡುವ ಸಂದೇಶ. ಪರಿಸರ ರಕ್ಷಣೆಯ ಅಗತ್ಯದ ಉದ್ದೇಶ ಸಾರಿದ ಮಕ್ಕಳು… ವರದಕ್ಷಿಣೆ ವಿರುದ್ಧ ಜಾಗೃತಿ ಸಂದೇಶ.

Advertisement

ಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಶನಲ್‌ ಜಿಲ್ಲೆ 317 ಡಿಯ ವತಿಯಿಂದ ಲೇಡಿಹಿಲ್‌ನಲ್ಲಿರುವ ಉರ್ವ ಚರ್ಚ್‌ ಹಾಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಶೇಷ ಮಕ್ಕಳು ಪ್ರಸ್ತುತಪಡಿಸಿದ ಸಾಮಾಜಿಕ ಕಳಕಳಿಯ ಜಾಗೃತಿ ರೂಪಕದ ಝಲಕ್‌ಗಳಿವು.

ಸ್ವಚ್ಛ  ಭಾರತ ಯೋಜನೆಯಂತೆ ಸ್ವಚ್ಛತೆಯ ಸಂಕಲ್ಪ ಕೈಗೊಳ್ಳುವ ಮೂಲಕ ಗ್ರಾಮ, ದೇಶ ಮತ್ತು ಮನಸ್ಸುಗಳನ್ನು ಸ್ವಚ್ಛವಾಗಿಡೋಣ ಎಂಬ ಸಂದೇಶವನ್ನು ವಿಶೇಷ ಮಕ್ಕಳು ಜನಸಾಮಾನ್ಯರ ಮುಂದಿಟ್ಟರು. ವಿವಾಹದ ಬಳಿಕ ಹೆಣ್ಣಿಗೆ ಗಂಡನ ಮನೆಯಲ್ಲಿ ಆಗುವ ವರದಕ್ಷಿಣೆ ಕಿರುಕುಳವನ್ನು ರೂಪಕದ ಮೂಲಕ ಪ್ರಸ್ತುತಪಡಿಸಿದ ಮಕ್ಕಳು, ವರದಕ್ಷಿಣೆ ಪಡೆದುಕೊಳ್ಳದಂತೆ ಮತ್ತು ಅದರ ವಿರುದ್ಧ ಹೋರಾಡುವಂತೆ ಕರೆಕೊಟ್ಟರು. ಶಬ್ದ ಮಾಲಿನ್ಯದಿಂದ ಶಾಂತಿ ನಾಶ, ಜಲಮಾಲಿನ್ಯದಿಂದ ಆರೋಗ್ಯನಾಶ, ನೆಲ ಮಾಲಿನ್ಯದಿಂದ ಸಂಪತ್ತು ನಾಶ, ವಾಯು ಮಾಲಿನ್ಯದಿಂದ ಸರ್ವನಾಶ ಎಂಬ ಸಂದೇಶ ಹೊತ್ತ ಪರಿಸರ ಸಂರಕ್ಷಣೆಯ ಅಗತ್ಯ ಬಿಂಬಿಸುವ ರೂಪಕ ಪರಿಸರದ ಮೇಲೆ ಮಕ್ಕಳಿಗಿರುವ ಕಾಳಜಿಯನ್ನು ಪ್ರತಿಬಿಂಬಿಸುವಂತಿತ್ತು.

ಪ್ರತಿಭೆ ನಿರೂಪಿಸಲು ವೇದಿಕೆ
ಕಾರ್ಯಕ್ರಮ ಉದ್ಘಾಟಿಸಿದ ಮುಂಬಯಿಯ ಯುನೈಟೆಡ್‌ ರಬ್ಬರ್‌ ಇಂಡಸ್ಟ್ರೀಸ್‌ ಸಂಸ್ಥೆಯ ಅಧ್ಯಕ್ಷ ಪಾದೆ ಅಜಿತ್‌ ರೈ ಮಾತನಾಡಿ, ವಿಶೇಷ ಮಕ್ಕಳ ಪ್ರತಿಭೆಯನ್ನು ಹೊರ ತರುವುದಕ್ಕೆ ವೇದಿಕೆ ಒದಗಿಸಿದ ಲಯನ್ಸ್‌ ಕ್ಲಬ್‌ನ ಕ್ರಮ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿ, ಲಯನ್ಸ್‌ ಜಿಲ್ಲೆ 317ಡಿಯ ಜಿಲ್ಲಾ ಗವರ್ನರ್‌ ಎಚ್‌.ಆರ್‌. ಹರೀಶ್‌ ಮಾತನಾಡಿ, ವಿಶೇಷ ಮಕ್ಕಳಲ್ಲಿಯೂ ನಾನಾ ರೀತಿಯ ಪ್ರತಿಭೆಗಳಿವೆ. ಅವನ್ನು ಸಾದರಪಡಿಸಲು ಲಯನ್ಸ್‌ ಕ್ಲಬ್‌ ವೇದಿಕೆ ಒದಗಿಸಿಕೊಟ್ಟಿದೆ ಎಂದರು.

Advertisement

ಕಾರ್ಯಕ್ರಮ ಸಂಯೋಜಕರಾದ ವಿಶ್ವನಾಥ ಶೆಟ್ಟಿ, ಪ್ರಶಾಂತ್‌ ಪೈ ಜಿ., ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತ್‌ ಕುಮಾರ್‌ ಶೆಟ್ಟಿ, ನಮಿತಾ ಶೆಟ್ಟಿ, ಮೈಮುನಾ ಮೊಹಿದಿನ್‌ ಮತ್ತಿತರರು ಉಪಸ್ಥಿತರಿದ್ದರು.

ಮಧ್ವರಾಜ್‌ ವಂದಿಸಿದರು. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಡಿಕೇರಿ, ಹಾಸನ, ಕುಂದಾಪುರ ಮುಂತಾದೆಡೆಗಳಿಂದ ಸುಮಾರು 250ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next