ಚಾಮರಾಜನಗರ: ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನ ಹಾಗೂ ಮೂಲಭೂತ ಕರ್ತವ್ಯಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಸಂವಿಧಾನ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಹೇಳಿದರು.
ತಾಲೂಕಿನ ಸಂತೇಮರಹಳ್ಳಿ ಜೆ.ಎಸ್.ಎಸ್. ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ಸಂವಿಧಾನ ಜಾಗೃತಿ ಅಭಿಯಾನ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರಲ್ಲಿ ಕಾನೂನು ಅರಿವು ಮೂಡಿಸಿ: ನಮ್ಮಲ್ಲಿ ಬಹಳಷ್ಟು ಜನರಿಗೆ ಕಾನೂನಿನ ಜ್ಞಾನ, ಅರಿವು ಇಲ್ಲದಿರುವುದರಿಂದ ದೌರ್ಜನ್ಯಗಳು, ಅಪರಾಧಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಲು ಪ್ರತಿ ಮನೆ ಮನೆಗೆ ಸಂವಿಧಾನ ಜಾಗೃತಿ ಅಭಿಯಾನದ ಮೂಲಕ ಜನರಲ್ಲಿ ಕಾನೂನು ಅರಿವನ್ನು ಮೂಡಿಸಲಾಗುತ್ತಿದೆ. ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಮತ್ತು ಸಂವಿಧಾನದ ಆದರ್ಶಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ರಾಷ್ಟ್ರ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮೂಲಭೂತ ಕರ್ತವ್ಯ ಪಾಲಿಸಿ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ನಮ್ಮ ದೇಶದ ಸಂವಿಧಾನ ಎಲ್ಲಾ ಧರ್ಮಗಳಿಗಿಂತ ಮಿಗಿಲಾದುದ್ದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕೇಳುವ ನಾವು ಹಾಗೆಯೇ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು ಎಂದರು.
ಸಂವಿಧಾನದ ಅಡಿಯಲ್ಲಿ ಹಲವಾರು ಕಾನೂನುಗಳಿದ್ದು, ವಿದ್ಯಾರ್ಥಿದೆಸೆಯಿಂದಲೇ ಈ ಬಗ್ಗೆ ತಿಳಿದುಕೊಂಡರೆ ಭವಿಷ್ಯದಲ್ಲಿ ಅನೇಕ ಸಂದರ್ಭಗಳಲ್ಲಿ ಇದರಿಂದ ಪ್ರಯೋಜನ ದೊರಕುತ್ತದೆ. ಜೀವನದ ಅನೇಕ ವೇಳೆ ಕಾನೂನು ಸಂಬಂಧಿ ತೊಡಕುಗಳು ಎದುರಾಗುತ್ತವೆ. ಇದನ್ನು ಎದುರಿಸಲು ಸಂವಿಧಾನದ ಬಗ್ಗೆ ತಿಳಿಯಬೇಕು ಎಂದು ಹೇಳಿದರು.
ಮಕ್ಕಳ ರಕ್ಷಣೆಗೆ ಹಲವು ಕಾಯ್ದೆ ಜಾರಿ: ಸಾಧನ ಸಂಸ್ಥೆ ನಿರ್ದೇಶಕ ಟಿ.ಜೆ. ಸುರೇಶ್ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಹಲವು ಕಾಯ್ದೆಗಳು ಜಾರಿಯಲ್ಲಿವೆ. ಜಿಲ್ಲಾ ಮಟ್ಟದಲ್ಲಿ ಮಕ್ಕಳ ರಕ್ಷಣೆಗಾಗಿಯೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ ಮತ್ತು ಮಕ್ಕಳ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ದೇಶದ ಆಸ್ತಿ, ಮಕ್ಕಳಿಗೆ ಜೀವಿಸಲು ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ಎ.ರಮೇಶ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಪ್ರತಿಯೊಬ್ಬರು ಸಹ ಓದಬೇಕು. ಅದರಿಂದ ಸಮಾಜದಲ್ಲಿ ಸಾಮರಸ್ಯ ಜೀವನ ನಡೆಸಬಹುದು ಎಂದರು. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆರ್. ವೆಂಕಟೇಶ್ ಮತ್ತು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜು ಹರವೆ ಮೋಟಾರು ವಾಹನ ಕಾಯ್ದೆ ಬಗ್ಗೆ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.