Advertisement

ಮಕ್ಕಳನ್ನು ಶಾಲೆಗೆ ದಾಖಲಿಸಲು ಜಾಗೃತಿ ಜಾಥಾ

12:09 PM May 29, 2019 | Team Udayavani |

ಗುಡಿಬಂಡೆ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲೂಕಿನ ಅರ್ಹ ಮಕ್ಕಳನ್ನು ಶಾಲೆಗೆ ದಾಖಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ನಡೆಸಲಾಯಿತು.

Advertisement

ಪಟ್ಟಣದ ಅಂಬೇಡ್ಕರ್‌ ನಗರದಿಂದ ಹೊಸ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವರೆಗೂ ಜಾಗೃತಿ ಜಾಥಾ ನಡೆಸಲಾಯಿತು.

ಮಕ್ಕಳಿಗೆ ಆಸ್ತಿ ಮಾಡಬೇಡಿ: ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಂ.ಜಯರಾಮರೆಡ್ಡಿ, ಶೈಕ್ಷಣಿಕ ಪ್ರಗತಿಯಿಂದ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಪ್ರತಿಯೊಬ್ಬ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಉತ್ತಮ ಶಿಕ್ಷಣ ನೀಡಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕು ಸಾಗಿಸುತ್ತಾರೆ ಎಂದರು.

ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ನೌಕರರ ಸಂಘದ ಅಧ್ಯಕ್ಷ ಕೆ.ನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಬಡ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ, ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮಕ್ಕಳು ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯ ಬೇಕು ಎಂದು ತಿಳಿಸಿದರು.

ಮಕ್ಕಳನ್ನು ಶಾಲೆಗೆ ಕಳುಹಿಸಿ: ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ಸರ್ಕಾರಿ ಶಾಲೆಗಳೆ ಮೇಲುಗೈ ಸಾಧಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಮೂಲಕ ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡಬೇಕೆಂದು ಹೇಳಿದರು.

Advertisement

ಇಂಗ್ಲಿಷ್‌ ಮಾಧ್ಯಮ: ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿಯಿಂದ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣವನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಿದ್ದು, ಖಾಸಗಿ ಶಾಲೆಗಳಿಗಿಂತ ಉತ್ತಮ ಬೋಧಕ ವರ್ಗವಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಬೇಕು ಎಂದು ತಿಳಿಸಿದರು.

ಜಾಥಾದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಉಪಾಧ್ಯಕ್ಷ ಶ್ರೀರಾಮಪ್ಪ, ಕಾರ್ಯದರ್ಶಿ ಇ.ಎನ್‌.ಶ್ರೀರಾಮರೆಡ್ಡಿ, ನೌಕರರ ಸಂಘದ ಕಾರ್ಯದರ್ಶಿ ಮುನಿಕೃಷ್ಣ, ನಿರ್ದೇಶಕ ಕೃಷ್ಣಪ್ಪ, ಸಿಆರ್‌ಪಿಗಳಾದ ನಾಗಲಿಂಗಪ್ಪ, ಜಗದೀಶ್‌, ನಾಗೇಂದ್ರ ಪ್ರಸಾದ್‌, ಬಿಆರ್‌ಪಿಗಳಾದ ನಾಗೇಂದ್ರ, ಶೈಲಾಜ ಸೇರಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಹಾಗೂ ಮಕ್ಕಳು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next