Advertisement

ಮಕ್ಕಳ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ

10:31 AM Jul 15, 2019 | Team Udayavani |

ಹಾವೇರಿ: ದಿನನಿತ್ಯ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಿವೆ. 18ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯ ಘೋರ ಅಪರಾಧವಾಗಿದೆ. ಈ ಕುರಿತಂತೆ ಸಮಾಜದಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ ಹೇಳಿದರು.

Advertisement

ನಗರದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಬಾಲ ಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣೆಯ ರಾಷ್ಟ್ರೀಯ ಯೋಜನೆ, ಪೋಕ್ಸೋ ಕಾಯ್ದೆ ಕುರಿತ ಕಾನೂನು ಸಾಕ್ಷರತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮೇಲೆ ದೌರ್ಜನ್ಯ ಎಸಗುವುದು ಪೋಕ್ಸೋ ಕಾಯ್ದೆ ಅನ್ವಯ ಅಪರಾಧವಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ತಿಂಡಿ-ತಿನಿಸು ಹಾಗೂ ಬಹುಮಾನಗಳ ಆಮಿಷ ತೋರಿಸಿ ಸಲುಗೆಯಿಂದ ನಡೆದುಕೊಳ್ಳುತ್ತಾರೆ. ಮಕ್ಕಳಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ. ಹಾಗಾಗಿ ಮಕ್ಕಳು ಯಾರಾದರೂ ತಿನಿಸು ಕೊಟ್ಟರೆ ತಿನ್ನಬಾರದು. ಮಕ್ಕಳ ಅನುಮತಿ ಇಲ್ಲದೇ ದೇಹದ ಯಾವುದೇ ಭಾಗವನ್ನು ಸಹ ಮುಟ್ಟುವಂತಿಲ್ಲ. ಒಂದು ವೇಳೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಪಕ್ಷದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ್ಕೆ ತಿಳಿಸಿದರೆ ಸಂಬಂಧಪಟ್ಟ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು. ಪೋಕ್ಸೋ ಕಾಯ್ದೆಯಡಿ ಕನಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಕಾಯ್ದೆ ಬಗ್ಗೆ ನೀವು ತಿಳಿದುಕೊಂಡು ಇತರರಿಗೆ ತಿಳಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗಿ ಪರಿಚಿತರಿಂದಲೇ ನಡೆಯುತ್ತಿರುವುದು ದೂರುಗಳ ವಿಚಾರಣೆಯಲ್ಲಿ ಕಂಡುಬಂದಿದೆ. ಇಂತಹ ಪ್ರಕರಣಗಳನ್ನು ತಡೆಯಲು ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ. ಬಾಲಕಾರ್ಮಿಕ ಪದ್ಧತಿ, ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಹಕ್ಕುಗಳು, ಅಪಹರಣ ಇವು ಪೋಕ್ಸೊ ಕಾಯ್ದೆಯಡಿ ಬರುತ್ತವೆ ಎಂದು ಹೇಳಿದರು.

ಪ್ರತಿಯೊಬ್ಬ ಪಾಲಕರು ತಮ್ಮ ಜೊತೆಗೆ ಮನೆಯಲ್ಲಿ ಅಂಬ್ಯುಲನ್ಸ್‌, ಕಂಟ್ರೋಲ್ ರೂಂ, ಅಗ್ನಿಶ್ಯಾಮಕ ಠಾಣೆ ಇತರೆ ಅವಶ್ಯಕ ದೂರವಾಣಿ ಸಂಖ್ಯೆಗಳನ್ನು ಬರೆದಿಟ್ಟುಕೊಳ್ಳಿ. ಶಿಕ್ಷಕರು ಪೊಲೀಸ್‌ ಇಲಾಖೆಯ ಅನುಮತಿ ಪಡೆದು ಮಕ್ಕಳೊಂದಿಗೆ ಪೊಲೀಸ್‌ ಠಾಣೆಗೆ ಭೇಟಿ ನೀಡಿದಲ್ಲಿ ಮಕ್ಕಳಿಗೆ ಧೈರ್ಯ ತುಂಬಬಹುದು. ಅಪರಾಧಗಳು ನಡೆದಾಗ ಹೆಣ್ಣು ಮಕ್ಕಳು ಧೈರ್ಯದಿಂದ ಮುಂದೆ ಬಂದು ದೂರು ನೀಡಬೇಕು ಎಂದು ಹೇಳಿದರು.

Advertisement

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಮಾತನಾಡಿದರು. ವಕೀಲರಾದ ಡಾ| ಎಸ್‌.ಕೆ.ಯಲ್ಲಟ್ಟಿ, ಮಕ್ಕಳ ಸಹಾಯವಾಣಿ ಕೇಂದ್ರದ ಜಿಲ್ಲಾ ಸಂಯೋಜಕ ವಿ.ಶಿವರಾಜ ಹಾಗೂ ನಗರ ಪೊಲೀಸ್‌ ಠಾಣೆ ಎ.ಎಸ್‌.ಐ. ನಂದಿ ಉಪನ್ಯಾಸ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಕೆ. ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪೊಲೀಸ್‌ ಅಧಿಕಾರಿ ಪವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಮಂಜುನಾಥ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಫ್‌.ಎಚ್.ಕೊರವರ ಇದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನೆ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next