ಹಾವೇರಿ: ಸಾಮಾಜಿಕ ಪರಿವರ್ತನಾ ಜನಾಂದೋಲನ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ವತಿಯಿಂದ ಶಾಲೆ ಬಿಟ್ಟ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಜನ ಜಾಗೃತಿ ಜಾಥಾ ಮತ್ತು ಬಹಿರಂಗ ಸಭೆ ತಾಲೂಕಿನ ದೇವಗಿರಿಯಲ್ಲಿ ನಡೆಯಿತು.
ದೇವಗಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಸಹಾಯವಾಣಿ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದರು. ನಂತರ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಎಂ.ಆರ್. ಜಾಲಗಾರ್ ಮಾತನಾಡಿ, ಮಕ್ಕಳ ಹಕ್ಕಗಳು ಎಲ್ಲ ಮಕ್ಕಳಿಗೆ ತಲುಪುತಿಲ್ಲ. ಅನೇಕ ಸಮಸ್ಯೆಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಸಾರ್ವಜನಿಕರು ತಮ್ಮ ಅಕ್ಕ ಪಕ್ಕ ಮಕ್ಕಳು ಶಾಲೆಯಿಂದ ಹೊರಗುಳಿದರೆ, ಶಾಲೆ ಮಧ್ಯದಲ್ಲಿ ಬಿಟ್ಟು ಬಾಲ್ಯವಿವಾಹವಾಗುತ್ತಿದ್ದರೆ 1098ಕ್ಕೆ ದೂರವಾಣಿ ಕರೆ ಮಾಡಿ ತಿಳಿಸಿದರೆ ನಾವು ಬಂದು ಅವರನ್ನು ರಕ್ಷಣೆ ಮಾಡುತ್ತೇವೆ ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ನಾವು ಆರೋಗ್ಯವಾಗಿ ಇರಬೇಕಾದರೆ ಎಲ್ಲರೂ ನಗಬೇಕು. ಮಕ್ಕಳು ಸಹ ಸದಾ ನಗುತ್ತಿರಬೇಕು ಎಂದರು. ಮಕ್ಕಳ ರಕ್ಷಣಾ ಅಧಿಕಾರಿ ಮಲ್ಲಿಕಾರ್ಜುನ ಮಠದ ಮಾತನಾಡಿ, ಸಮಾಜದಲ್ಲಿ ಬಾಲ್ಯವಿವಾಹ ಒಂದು ಪಿಡುಗಾಗಿದೆ. ಯಾರೂ ಬಾಲ್ಯವಿವಾಹ ಮಾಡಬಾರದು. ಅಂಥ ವಿವಾಹ ನಡೆಯುತ್ತಿರುವ ಮಾಹಿತಿ ನಿಮಗೆ ತಿಳಿದರೆ ಅದನ್ನು ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಮೂಲಕ ಮಕ್ಕಳ ರಕ್ಷಣೆಗೆ ಸಹಕರಿಸಿ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ, ಮಕ್ಕಳ ಬ್ಯಾಲ್ಯ ವಿವಾಹ ಕಾಯ್ದೆ -2006, ಬಾಲಕಾರ್ಮಿಕ ನಿರ್ಮೂಲನೆ ಕಾಯ್ದೆ, ಹೆಣ್ಣು ಭ್ರೂಣ ಹತ್ಯೆ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಬಗ್ಗೆ ತಿಳಿಸಿದರು.
ತಾಪಂ ಸದಸ್ಯ ಸತೀಶ ಸಂದಿಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯಾ ಚನ್ನವೀರಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸುನಿತಾ ಕೆ., ಪೌಢಶಾಲೆಯ ಶಿಕ್ಷಕ ರಮೇಶ ಎಂ. ಜಿ., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2ರ ಮುಖ್ಯ ಶಿಕ್ಷಕ ಎಸ್. ಈ. ಪಾಟೀಲ ಇನ್ನಿತರರು ಇದ್ದರು. ಬಿ.ಎಂ. ಮೆಡ್ಲೇರಿ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಪಿಜೆ ಜಿಲ್ಲಾ ಸಂಚಾಲಕಿ ಹಸೀನಾ ಹೆಡಿಯಾಲ್ ಪ್ರಾಸ್ತಾವಿಕ ಮಾತನಾಡಿದರು. ಜಿ.ಬಿ. ರಜಪುತ ವಂದಿಸಿದರು.