ಬಾಗಲಕೋಟೆ: ಬಾಲ ಕಾರ್ಮಿಕತೆಯು ಒಂದು ಅನಿಷ್ಟ ಪದ್ಧತಿಯಾಗಿದ್ದು, ಇದರ ನಿರ್ಮೂಲನೆಗೆ ಪರಿಣಾಮಕಾರಿಯಾದ ಜಾಗೃತಿಯಾಗಬೇಕಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್. ದೇಶಪಾಂಡೆ ಹೇಳಿದರು.
ಜಿಪಂ ಸಭಾಭವನಲ್ಲಿ ರವಿವಾರ ಜಿಲ್ಲಾಡಳಿತ, ಜಿಪಂ ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರಲ್ಲಿ ಬಾಲಕಾರ್ಮಿಕತೆಯು ಒಂದು ಅಪರಾಧ ಎಂಬುದು ಅರಿವು ಇರುವದಿಲ್ಲ. ಬಾಲ ಕಾರ್ಮಿಕತೆಯು ಮಕ್ಕಳ ಬಾಲ್ಯಾವಸ್ಥೆಯನ್ನು ಕಸಿದುಕೊಳ್ಳುವಂತಹದ್ದು, ಬಾಲ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ತರುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹೇಮಾ ಪತ್ಸಾಪುರ ಮಾತನಾಡಿ, ಹೆತ್ತ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ತಂದೆ-ತಾಯಿಗಳ ಪಾತ್ರವೂ ಮಹತ್ವದ್ದಾಗಿದ್ದು, ಪಾಲಕರು ತಮ್ಮ ಬಡತನದ ಸಮಸ್ಯೆಗೆ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಿದರೆ, ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಾರೆ. ಇದರಿಂದ ಮಕ್ಕಳ ಭವಿಷ್ಯಕ್ಕೆ ಸಮಸ್ಯೆ ಉಂಟಾಗುತ್ತದೆ. ಸಮಾಜದ ಎಲ್ಲ ವರ್ಗದ ಜನರು ಮಕ್ಕಳ ಭವಿಷ್ಯವನ್ನು ಹಸನಾಗಿಸಲು ಸಹಕಾರ ನೀಡಿದಲ್ಲಿ ಬಾಲ ಕಾರ್ಮಿಕ ಪದ್ಧತಿ ತೊಲಗಿಸಲು ಸಾಧ್ಯವಾಗುತ್ತದೆ ಎಂದರು.
ಜಿಪಂ. ಸಿಇಒ ಟಿ. ಭೂಬಾಲನ್ ಮಾತನಾಡಿ, ಬಾಲ ಕಾರ್ಮಿಕ ಪದ್ದತಿ ವಿರೋ ಧಿ ದಿನ ಅನ್ನುವುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ದಿನವೂ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನವನ್ನಾಗಿ ಮಾಡಬೇಕು. ಮಕ್ಕಳಿಗೆ ಕಡ್ಡಾಯವಾದ ಶಿಕ್ಷಣ ನೀಡಿದ್ದಲ್ಲಿ ಮಕ್ಕಳು ಬಾಲ ಕಾರ್ಮಿಕರಾಗುವುದು ತಪ್ಪುತ್ತದೆ. ಪಾಲಕರಿಗೆ ಬಡತನವಿದ್ದಲ್ಲಿ ಸರಕಾರದ ಸವಲತ್ತುಗಳನ್ನು ಪಡೆದು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡಬೇಕು. ಎಲ್ಲರೂ ಕೈ ಜೋಡಿಸಿ ಬಾಲ ಕಾರ್ಮಿಕ ಪದ್ದತಿಯನ್ನು ತಪ್ಪಿಸಲು ಪಣ ತೊಡೋಣ ಎಂದು ಹೇಳಿದರು.
ಈ ವೇಳೆ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನ 2022 ರ ಪ್ರತಿಜ್ಞಾ ವಿಧಿ ಬೋಧಿಸಿದರು. ಕೆರೂರಿನ ಬನಶಂಕರಿ ಕಲಾ ತಂಡದವರು ಬಾಲ ಕಾರ್ಮಿಕ ಪದ್ದತಿಯ ದುಷ್ಪಪರಿಣಾಮಗಳ ಕುರಿತು ಜನಪದವನ್ನು ಪ್ರಸ್ತುತಪಡಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ತೇಜಶ್ವಿನಿ ಹಿರೇಮಠ ಅವರು ಬಾಲ್ಯಾವಸ್ಥೆ ಮತ್ತು ಕಿಶೋರಾವ್ಯವಸ್ಥೆ ಕಾರ್ಮಿಕ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ಜಿಲ್ಲಾ ಕಾರ್ಮಿಕ ಯೋಜನಾ ಸಂಸ್ಥೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಬಾದಾಮಿ ತಾಲೂಕು ಕಾರ್ಮಿಕ ನಿರೀಕ್ಷಕ ರಾಜಶೇಖರ ಕುರಡಿಕರ ಉಪಸ್ಥಿತರಿದ್ದರು.