ಕಾಸರಗೋಡು: ಮದ್ಯ ಮತ್ತು ಮಾದಕ ಪದಾರ್ಥ ಬಳಕೆ ಪರಿಣಾಮ ಹಾದಿ ತಪ್ಪುತ್ತಿರುವ ಯುವಜನತೆ ಮತ್ತು ಕುಟುಂಬಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಕನಲೆರಿಯುಂ ಬಾಲ್ಯಂ (ಬೆಂಕಿಯಲ್ಲಿ ಸುಡುವ ಬಾಲ್ಯ)’ ಎಂಬ ಕಿರುಚಿತ್ರವೊಂದು ಸಿದ್ಧವಾಗಿದೆ.
ಕಿನಾನೂರು-ಕರಿಂದಳಂ ಗ್ರಾ. ಪಂ. ವತಿಯಿಂದ ರಾಜ್ಯ ಅಬಕಾರಿ, ಆರೋಗ್ಯ, ಶಿಕ್ಷಣ ಇಲಾಖೆಗಳ ಸಹಕಾರದೊಂದಿಗೆ ಈ ಚಿತ್ರ ನಿರ್ಮಾಣ ನಡೆದಿದೆ. ವಿಜ್ಯೋರ್ ಫಿಲಂಸ್ ಲಾಂಛನದಡಿ ನಿರ್ಮಿಸಿದ ಚಿತ್ರಕ್ಕೆ ಅಜಿ ಕುಟ್ಟಮತ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ, ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ‘ವಿಷಕಾಟ್ (ವಿಷಗಾಳಿ)’ ಎಂಬ ಸಿನೆಮಾ ಈಗಾಗಲೇ ಜನಪ್ರಿಯವಾಗಿದೆ. ಅಬಕಾರಿ ಇಲಾಖೆ ಜಾರಿಗೊಳಿಸುವ ‘ವಿಮುಕ್ತಿ’ ಯೋಜನೆಯ ಅಂಗವಾಗಿ ಈ ಕಿರುಚಿತ್ರ ಸಿದ್ಧಗೊಂಡಿದೆ.
ಮಾದಕ ಪದಾರ್ಥಗಳ ಬಳಕೆ ವಿರುದ್ಧ ಸಾಧಾರಣ ಗತಿಯಲ್ಲಿ ನಡೆಸುವ ಜಾಗೃತಿ ತರಗತಿ ಇತ್ಯಾದಿಗಳಿಗಿಂತ ಭಿನ್ನವಾಗಿ ಹೆಚ್ಚುವರಿ ಪರಿಣಾಮ ನೀಡಲಿದೆ ಎಂಬ ಕಾರಣಕ್ಕಾಗಿ ಕಿರುಚಿತ್ರ ನಿರ್ಮಿಸುವ ಯೋಜನೆ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ಹಮ್ಮಿಕೊಂಡಿದೆ. ಇದಕ್ಕೆ ವಿವಿಧ ಇಲಾಖೆಗಳ ಬೆಂಬಲವೂ ಲಭಿಸಿದಾಗ ನಿರೀಕ್ಷೆಗೂ ಮೀರಿ ತ್ವರಿತ ಗತಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಗಿತ್ತು ಎಂದು ಚಿತ್ರ ನಿರ್ದೇಶಕ ಅಜಿ ಕುಟ್ಟಮತ್ ತಿಳಿಸಿದರು.
ಕಳೆದ ನವೆಂಬರ್ ತಿಂಗಳಲ್ಲಿ ಚಾಯೋತ್ ಶಾಲೆಯಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್ ಚಿತ್ರೀಕರಣಕ್ಕೆ ಸ್ವಿಚ್ ಆನ್ ನಡೆಸಿ ಚಾಲನೆ ನೀಡಿದ್ದರು.
ರಾಜ್ಯಾದ್ಯಂತ ಶಿಕ್ಷಣಾಲಯಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.
ಕಾಸರಗೋಡು, ಪರಪ್ಪ, ನೀಲೇಶ್ವರ, ಶಿವಮೊಗ್ಗ, ವಳಪಟ್ಟಣ ಮೊದಲಾದ ಪ್ರದೇಶಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆದಿದ್ದು, 90ಕ್ಕೂ ಅಧಿಕ ಮಂದಿ ಅಭಿನಯಿಸಿದ್ದಾರೆ. ಒಂದೂವರೆ ಗಂಟೆ ಅವಧಿಯ ಈ ಕಿರುಚಿತ್ರ ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಗೊಳ್ಳಲಿದೆ.