ಮಹದೇವಪುರ: ಸ್ಕಿಜೋಫ್ರೆನಿಯಾ (ತೀವ್ರ ಮಾನಸಿಕ ಸಮಸ್ಯೆ) ಕಾಯಿಲೆ ಬಗ್ಗೆ ಎಚ್ಚರವಹಿಸಿ, ಸೂಕ್ತ ಸಮಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಿದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಉಪ ನಿದೇರ್ಶಕಿ ಡಾ.ರಜಿನಿ ಹೇಳಿದರು.
ವಿಶ್ವ ಸ್ಕಿಜೋಫ್ರೆನಿಯಾ ದಿನಾಚರಣೆ ಅಂಗವಾಗಿ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಬಿದರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಸ್ಕಿಜೋಫ್ರೆನಿಯಾ ಲಕ್ಷಣಗಳು ಕಂಡುಬಂದ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಎಂದರು.
ವ್ಯಕ್ತಿ ಪದೇ ಪದೆ ತೀವ್ರ ಸ್ವರೂಪದ ಸಂಕಷ್ಟಗಳಿಗೆ ಸಿಲುಕಿದಾಗ, ಅನುವಂಶಿಕವಾಗಿ ಹಾಗೂ ಮೆದುಳಿನ ಮೇಲೆ ಉಂಟಾಗುವ ಅತಿಯಾದ ಒತ್ತಡ ಸ್ಕಿಜೋಫ್ರೆನಿಯಾಗೆ ಕಾರಣವಾಗುತ್ತದೆ. ಈ ಮಾನಸಿಕ ಸಮಸ್ಯೆಯಿಂದ ಬಳಲುವ ವ್ಯಕ್ತಿಯ ಭಾವನೆಗಳಲ್ಲಿ ಏರುಪೇರಾಗುತ್ತವೆ. ರೋಗಿಗಳು ಅನಗತ್ಯವಾಗಿ ವಿಪರೀತ ಕೋಪ, ದುಃಖ, ಸಂತೋಷ ಪ್ರಕಟಿಸುತ್ತಾರೆ. ವಿನಾಕಾರಣ ನಗುತ್ತಾರೆ, ಇದ್ದಕ್ಕಿದ್ದಂತೆ ಅಳುತ್ತಾರೆ.
ಕೆಲವೊಮ್ಮೆ ಯಾವುದೇ ಭಾವನೆ ತೋರಿಸದೇ ನಿರ್ಲಿಪ್ತರಾಗಿರುತ್ತಾರೆ. ಹಗ್ಗವನ್ನು ಕಂಡು ಹಾವೆಂದು ಆತಂಕಪಡುತ್ತಾರೆ. ನೆರಳನ್ನು ಕಂಡು ಭೂತ, ಕಳ್ಳ ಎಂದು ಕೂಗುತ್ತಾರೆ. ಇದ್ದಕ್ಕಿದ್ದಂತೆ ಉದ್ರೇಕಗೊಳ್ಳುವುದು, ಸುತ್ತ ಇರುವ ಜನರನ್ನು ಅನುಮಾನದಿಂದ ನೋಡುವುದು ಇತ್ಯಾದಿ ಲಕ್ಷಣಗಳು ರೋಗಿಗಳಲ್ಲಿ ಕಂಡುಬರುತ್ತವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮಾಧಿಕಾರಿ, ಡಾ.ನದೀಮ್ ಅಹಮದ್, ಡಾ.ಕೆ.ಎಸ್.ಪ್ರಕಾಶ್, ತಾಲೂಕು ಆರೋಗ್ಯಧಿಕಾರಿ ಡಾ.ಚಂದ್ರಶೇಖರ್, ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸೋಮಶೇಖರ್, ಡಾ.ರಾಜೇಶ್ವರಿ ಮತ್ತಿತರರು ಹಾಜರಿದ್ದರು.