ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2022-23, 2023-24 ಮತ್ತು 2024-25ನೇ ಸಾಲಿನ ಗೌರವ, ವಾರ್ಷಿಕ, ವಿವಿಧ ದತ್ತಿ, ಯುವ ಪ್ರಶಸ್ತಿ, ಹೊರನಾಡ ಕಲಾವಿದ ಪ್ರಶಸ್ತಿಗಳನ್ನು ಪ್ರಕಟಸಿದ್ದು ಒಟ್ಟು 93 ರಂಗ ಸಾಧಕರನ್ನು ಆಯ್ಕೆ ಮಾಡಿದೆ.
ಇದರಲ್ಲಿ ಮೂವರಿಗೆ ಜೀವಮಾನ ಸಾಧನೆ, 75 ವಾರ್ಷಿಕ ಮತ್ತು 15 ದತ್ತಿ ಪ್ರಶಸ್ತಿಗಳು ಸೇರಿವೆ. ವಿಶೇಷವೆಂದರೆ ಅಕಾಡೆಮಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾಕ ಕಲಾವಿದೆ ಚಾಂದಿನಿ ಅವರನ್ನು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಗುರುತಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2022-23ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದೆ ಮತ್ತು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, 2023-24ನೇ ಸಾಲಿನ ಗೌರವ ಪ್ರಶಸ್ತಿಗೆ ನಾಟಕಕಾರ ಪ್ರೊ| ಎಚ್.ಎಸ್. ಶಿವಪ್ರಕಾಶ್, 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ರಂಗ ಸಂಘಟಕ ಕೋಟಿಗಾನಹಳ್ಳಿ ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 50 ಸಾವಿರ ರೂ. ನಗದು ಮತ್ತು ಸನ್ಮಾನ ಒಳಗೊಂಡಿದೆ.
2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ರಂಗಭೂಮಿ ಕಲಾವಿದ ಅಚ್ಯುತ ಕುಮಾರ್, 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ರಂಗಕರ್ಮಿ ಬಿ. ಸುರೇಶ್, 2024-25ನೇ ಸಾಲಿನ ಪ್ರಶಸ್ತಿಗೆ ಪ್ರಕಾಶ್ ರೈ, ರಮೇಶ್ ಪಂಡಿತ್, ಡಾ| ಲಕ್ಷಿ$¾àಪತಿ ಕೋಲಾರ ಸೇರಿದಂತೆ ಹಲವು ಕಲಾವಿದರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಪುರಸ್ಕಾರ ಒಳಗೊಂಡಿದೆ. ವಿವಿಧ ದತ್ತಿ ಪ್ರಶಸ್ತಿಗಳು 10 ಸಾವಿರ ರೂ. ನಗದು ಮತ್ತು ಸಮ್ಮಾನವನ್ನು ಒಳಗೊಂಡಿದೆ. ಯುವ ಪ್ರಶಸ್ತಿಗೆ ಡಾ| ಬೇಲೂರು ರಘುನಂದನ್, ರಾಜಗುರು ಹೊಸಕೋಟೆ, ಅಪ್ಪಣ್ಣ ರಾಮದುರ್ಗ, ರಂಗಸ್ವಾಮಿ ಜಿ. ಅವರನ್ನು ಆಯ್ಕೆ ಮಾಡಲಾಗಿದೆ. ಹೊರನಾಡ ಕಲಾವಿದರ ಪ್ರಶಸ್ತಿಗೆ ಮುಂಬಯಿಯ ರಂಗ ನಿರ್ದೇಶಕಿ ಕನ್ನಡತಿ ನಂದಿತಾ ಯಾದವ್, ಪುದುಚೇರಿ ವಿಶ್ವವಿದ್ಯಾನಿಲಯದ ರಂಗತಜ್ಞೆ ಪ್ರಾಧ್ಯಾಪಕಿ ಡಾ| ಪವಿತ್ರಾ ಅವರನ್ನು ಆಯ್ಕೆ ಮಾಡಲಾಗಿದೆ.