ಹಳಿಯಾಳ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೋಷಲ್ ಇನ್ನೋವೇಟಿವ್ ಚಾಲೆಂಜ್ ಸ್ಪರ್ಧೆಯಲ್ಲಿ ಹಳಿಯಾಳ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಬಹುಪಯೋಗಿ ಸೋಲಾರ್ ಗೀಜರ್ ಶ್ರೇಷ್ಠ ಪ್ರಾಜೆಕ್ಟ್ ಪ್ರಶಸ್ತಿ ಪಡೆದುಕೊಂಡಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಜಪಾನಿನ ಕಿಯೋ ವಿಶ್ವವಿದ್ಯಾಲಯಗಳು ಜಂಟಿಯಾಗಿ ಸ್ಪರ್ಧೆ ಏರ್ಪಡಿಸಿತ್ತು.
ಈ ಉಪಕರಣದಿಂದ ಸೌರಶಕ್ತಿ ಉಪಯೋಗಿಸಿ ನೀರನ್ನು ಕಾಯಿಸುವುದರ ಜೊತೆಗೆ ಬೃಹತ್ ಕಟ್ಟಡಗಳಲ್ಲಿ ಹಗಲಿನ ಸಮಯದಲ್ಲಿ ಒಳಾಂಗಣ ಬೆಳಕಿನ ಸೌಲಭ್ಯವನ್ನೂ ಪಡೆಯಬಹುದು. ಈ ಪ್ರಾಜೆಕ್ಟ್ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ ದಿವಾಕರ್, ಆದರ್ಶ ಸರಪಾಲಿ, ಗೋವಿಂದ ಘವೇರಿ ಮತ್ತು ಈಶ್ವರಪ್ಪ ಬಾರಿಕೈ ಪ್ರೊ| ಶಂಕರ ಬಡಿಗೇರ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ್ದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ ಜಾಗೃತಿ ಮೂಡಿಸಿ
ವಿದ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ್, ಪ್ರಾಂಶುಪಾಲ ಡಾ| ವಿ.ಎ. ಕುಲಕರ್ಣಿ, ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ| ಕೆ.ಎಸ್. ಪೂಜಾರ್ ಅಭಿನಂದಿಸಿದ್ದಾರೆ.