Advertisement

ಕೃಷಿ ಯಂತ್ರ ಸಂಶೋಧಕನಿಗೆ ಪ್ರಶಸ್ತಿ ಗರಿ

11:27 AM Nov 01, 2021 | Team Udayavani |

ದೇವನಹಳ್ಳಿ: 12 ವಿಧದ ಬೇಸಾಯ ಕ್ರಮಗಳನ್ನು ಒಂದೇ ಯಂತ್ರದಿಂದ ಕೈಗೊಳ್ಳಬಹುದಾದ ಪವರ್‌ ಇಂಟರ್‌ ಕಲ್ಟಿವೇಟರ್‌ ಯಂತ್ರವನ್ನು ಆವಿಷ್ಕಾರಗೊಳಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕೆರೆಕೋಡಿ ಕೃಷಿ ಅನುಭವ, ಯಂತ್ರದ ಸಂಶೋಧಕ ಡಾ.ಸಿ.ನಾಗರಾಜ್‌ಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Advertisement

ನೆಲಮಂಗಲದ ನಿವೃತ್ತ ಉಪಾಧ್ಯಯ ಲೇಟ್‌ ಚಿಕ್ಕಗಂಗಪ್ಪ ಪುತ್ರ ಡಾ.ಸಿ.ನಾಗರಾಜ್‌ ಅವರು ಡಿಪ್ಲೊ ಮಾ ಇನ್‌ ಮೆಕ್ಯಾನಿಕ್‌ ಪದವಿ ವ್ಯಾಸಂಗ ಮಾಡಿದ್ದಾರೆ. ಕೃಷಿಯಲ್ಲಿ ಅನುಭವ ಮತ್ತು ಕೃಷಿಯಂತ್ರೀಕರಣದ ಸಂಶೋಧನೆ ಹಾಗೂ ತಯಾರಿಕೆಯಲ್ಲಿ 35 ವರ್ಷಗಳ ಜ್ಞಾನ ಸಂಪಾದಿಸಿದ್ದಾರೆ. ಪ್ರಶಸ್ತಿಗಳು ಎಕ್ಷಲೆನ್ಸ್‌ ಅವಾರ್ಡ್‌ (2011) ರೋಟರಿ ಸಂಸ್ಥೆ ನೆಲಮಂಗಲ, ಡಾಕ್ಟರೇಟ್‌ ಪ್ರಶಸ್ತಿ (2017), ಉಜ್ವಲ ಉದ್ಯಮಿ ಪ್ರಶಸ್ತಿ (2018), ಮಣ್ಣಿನಮಗ ಪ್ರಶಸ್ತಿ (2018), ಸಾಲುಮರದ ತಿಮ್ಮಕ್ಕ ಗೌರವ ಸನ್ಮಾನ (2018), ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಇನ್‌ ಮಿಷನ್‌ ಅವಾರ್ಡ್‌ (2019), ಕನ್ನಡ ಸಾಹಿತ್ಯ ಪರಿಷತ್ತಿನ ಜೀವಮಾನ ಸಾಧನೆ ಸನ್ಮಾನ (2019) ಹಾಗೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕಲ್ಟಿವೇಟರ್‌ ಯಂತ್ರದ ಉಪಯೋಗ: ಬೇಸಾಯ ಕ್ರಮದಲ್ಲಿ ರೈತರಿಗೆ ಎದುರಾಗುವ ಹಲವು ತೊಂದರೆಗಳನ್ನು ಅಧ್ಯಯನ ನಡೆಸಿ ರೈತರು ಅಂತರ ಬೇಸಾಯವನ್ನು ಸುಲಭ ರೀತಿಯಲ್ಲಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಪವರ್‌ ಇಂಟರ್‌ ಕಲ್ಟಿವೇಟರ್‌ ಎಂಬ ಕೃಷಿ ಯಂತ್ರವನ್ನು ಭಾರತದಲ್ಲಿ ಪ್ರಥಮ ಭಾರಿ ಅವಿಷ್ಕಾರ ಮಾಡಿ ಅಭಿವೃದ್ಧಿಪಡಿಸಿದೆ. ಇದು ಸ್ವದೇಶಿಯಾಗಿದ್ದು, ಚೀನಾ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ ಎಂದು ಪ್ರಶಸ್ತಿ ವಿಜೇತ ಡಾ.ಸಿ.ನಾಗರಾಜ್‌ ಹೇಳಿದರು.

ಇದನ್ನೂ ಓದಿ;- ಕೇಂದ್ರದ 7 ವರ್ಷದ ನೀತಿ ಖಂಡಿಸಿ ಪ್ರತಿಭಟನೆ

ಯಂತ್ರದ ಉಪಯೋಗ: ಕೃಷಿ ಕಾರ್ಮಿಕರನ್ನು ಮತ್ತು ಎತ್ತುಗಳನ್ನು ಅವಲಂಬಿಸದೆ ಹೆಚ್ಚಿನ ಭೂಮಿಯನ್ನು ಬೇಸಾಯಕ್ಕಾಗಿ ಉಪಯೋಗಿಸಿ ತಕ್ಕ ಸಮಯದಲ್ಲಿ ಕಳೆಯನ್ನು ನಾಶಪಡಿಸುವುದಲ್ಲದೆ, ಮಣ್ಣನ್ನು ಏರಾಕುವ ಕ್ರಮವನ್ನು ಮಾಡಬಹುದಾಗಿದೆ. ಯಂತ್ರಕ್ಕೆ ಹೆಚ್ಚುವರಿ ಉಪಕರಣ ಅಳವಡಿಸಿಕೊಂಡು ಬಿತ್ತನೆ, ಉಳುಮೆ, ಸಾಲು ಮಾಡುವುದು, ಬೆಳೆ ಕಟಾವು, ಸ್ಪ್ರೇ, ಕೃಷಿ ಹೊಂಡದಿಂದ ನೀರೆತ್ತುವಿಕೆ, ಇತ್ಯಾದಿ ಕೆಲಸಗಳನ್ನು ಮಾಡಿಕೊಳ್ಳಬಹುದು.

Advertisement

ಯಂತ್ರಕ್ಕೆ 500 ಕೇಜಿ ಸಾಮರ್ಥ್ಯದ ಟ್ರ್ಯಾಲಿಯನ್ನು ಅಳವಡಿಸಿಕೊಂಡು ಬೆಳೆದ ಬೆಳೆಯನ್ನು ತೋಟದಿಂದ ಮನೆಗೆ ಒಯ್ಯಬಹುದು ಹೇಳುತ್ತಾರೆ. ಸಮಯ, ವೆಚ್ಚ ಗಣನೀಯ ಕಡಿಮೆ: ಈ ಯಂತ್ರವನ್ನು ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯಡಿ ಅವಿಷ್ಕರಿಸಲಾಗಿದೆ. ಏಕಕಾಲದಲ್ಲಿ ನಾನಾ ಕೆಲಸಕ್ಕೆ ಬಳಕೆ ಆಗುವುದರಿಂದ ಸಮಯ ಹಾಗೂ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು. ಡೀಸೆಲ್‌ ಸಹಾಯದಿಂದ ಓಡುವ ಯಂತ್ರವು ಎರಡು ಗಂಟೆಯಲ್ಲಿ ಒಂದು ಎಕರೆ ಜಮೀನನ್ನು ಸ್ವತ್ಛಗೊಳಿಸಬಹುದು. ದಿನಕ್ಕೆ ಮೂರ್‍ನಾಲ್ಕು ಎಕರೆ ಭೂಮಿಯಲ್ಲಿ ಅಂತರ ಬೇಸಾಯ ಕೈಗೊಳ್ಳಬಹುದು ಎನ್ನುತ್ತಾರೆ.

ಯಂತ್ರ ಆವಿಷ್ಕರಿಸಿರುವ ಡಾ.ಸಿ.ನಾಗರಾಜ್‌. ಯಂತ್ರವು 86 ಸಾವಿರ ರೂ. ಬೆಲೆಯಿದೆ. ಸರ್ಕಾರದಿಂದ ಸಬ್ಸಿಡಿ ಕೂಡ ಸಿಗಲಿದ್ದು, ಸಾಮಾನ್ಯ ವರ್ಗಕ್ಕೆ 53 ಸಾವಿರ ರೂ. ಹಾಗೂ ಎಸ್‌.ಸಿ., ಎಸ್‌.ಟಿ. ಗೆ 26ಸಾವಿರ ರೂ. ದರದಲ್ಲಿ ಯಂತ್ರ ಖರೀದಿಸಬಹುದು.

“ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಿರುವುದು ಸಂತಸ ತಂದಿದೆ. ಕೃಷಿ ಕ್ಷೇತ್ರದಲ್ಲಿ ರೈತರಿಗೆ ರೈತಸ್ನೇಹಿ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಮೇಕ್‌ ಇನ್‌ ಇಂಡಿಯಾ ಮಾದರಿಯಲ್ಲಿ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಆಗಬೇಕು.”  ಡಾ.ಸಿ.ನಾಗರಾಜ್‌, ಕೃಷಿ ಯಂತ್ರ ಸಂಶೋಧಕ.

-ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next