ಮಾಗಡಿ: ಕಾಲೇಜು ವಿದ್ಯಾರ್ಥಿಗಳು ಟೀವಿ, ಮೊಬೈಲ್, ಇಂಟರ್‌ನೆಟ್, ಫೇಸ್‌ಬುಕ್, ಪ್ರೇಮ, ಪ್ರೀತಿ, ಪ್ರಣಯದಂತ ಚಾಟಿಂಗ್‌ಗಳಿಂದ ದೂರ ಉಳಿದು, ಸತತವಾಗಿ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಸಮಾಜಮುಖೀಯಾಗಬೇಕು ಎಂದು ಶಿವಗಂಗೆ ವೀರ ಸಿಂಹಾಸನ ಸಂಸ್ಥಾನ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕ್ರೀಡೆ, ಎನ್‌ಎಸ್‌ಎಸ್ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕ್ರಿಯಾಶೀಲತೆ ಇಟ್ಟುಕೊಂಡಿರಿ: ಕಾಲೇಜು ಸುಮ್ಮನೆ ಕಾಲ ಕಳೆಯುವ ಚಾವಡಿಯಲ್ಲ, ತಮ್ಮ ಜ್ಞಾನ ವೃದ್ಧಿಸಿಕೊಳ್ಳುವ ಜ್ಞಾನ ದೇಗುಲ. ದೇಹ ಮತ್ತು ಮನಸ್ಸುಗಳನ್ನು ಯಾವಾಗಲೂ ಕ್ರಿಯಾಶೀಲತೆಯಿಂದ ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಡಾ.ಆರ್.ಕೆ.ರಮೇಶ್‌ಬಾಬು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪ್ರಾಂಶುಪಾಲ ಎಚ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಕಾಲೇಜು ಅಭಿವೃದ್ಧಿ, ಮುಂದಿನ ದಿನಗಳಲ್ಲಿ ಪಿಎಚ್‌ಡಿ ಸಂಶೋಧನಾ ಕೇಂದ್ರ ತೆರೆಯಲಾಗುವುದು ಹಾಗೂ ವಿದ್ಯಾರ್ಥಿಗಳಲ್ಲಿ ಪೋ›ತ್ಸಾಹ ತುಂಬುವುದನ್ನು ಕುರಿತು ಮಾತನಾಡಿದರು.
ಲೋಕಾರ್ಪಣೆ: ಇದೇ ವೇಳೆ 2017 -18ನೇ ಸಾಲಿನ ಮಾಗಡಿ ದೀವಿಗೆ ವಾರ್ಷಿಕ ಸಂಚಿಕೆಯನ್ನು ಶ್ರೀಗಳರು ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು. ಪ್ರಥಮ ಬಿಕಾಂ ವಿದ್ಯಾರ್ಥಿಗಳು 11,222 ರೂ ಸ್ವಯಂ ಪ್ರೇರಿತರಾಗಿ ಸಂಗ್ರಹಿಸಿ ಪ್ರಾಂಶುಪಾಲರಿಗೆ ನೀಡಿದರು.
ಪ್ರಾಧ್ಯಾಪಕರಾದ ಪಿ.ನಂಜುಂಡ, ತಿಮ್ಮಹನುಮಯ್ಯ, ಎಸ್.ಮಂಜುನಾಥ್, ಚಿದಾನಂದಸ್ವಾಮಿ, ಜಗದೀಶ್ ನಡುವಿನ ಮಠ, ಶ್ರೀಧರ್, ಗುರುಮೂರ್ತಿ, ಚಂದ್ರಕಲಾ, ಚಲುವರಾಜು ಇತರರು ಮಾತನಾಡಿದರು. ಸುಷ್ಮಾ, ಚಂದ್ರಪ್ರಭಾ, ಜಿ.ಎಸ್. ವೀಣಾ, ಎಸ್. ವೀಣಾ, ಗ್ರಂಥಪಾಲಕಿ ರೂಪಶ್ರೀ ಇತರರು ಇದ್ದರು.