ಯಲ್ಲಾಪುರ: ರೈತರ ಭತ್ತದ ಗದ್ದೆ ಮತ್ತು ತೋಟಗಳಲ್ಲಿ ಬಹುಪಾಲು ಫಸಲು ಆನೆ, ಮಂಗ ಹಾಗೂ ಹಂದಿಗಳ ಕಾಟಕ್ಕೆ ತುತ್ತಾಗಿ ಅಪಾರ ನಷ್ಟವುಂಟಾಗುತ್ತಿದೆ. ಇಷ್ಟೊಂದು ಹಾನಿ ಅನುಭವಿಸುತಿದ್ದರೂ ಅನ್ನದಾತನ ಬಗ್ಗೆ ಮಾತನಾಡುವವರ ಗಂಟಲಲ್ಲಿ ಬೊಂತೆ ಸಿಕ್ಕಿಕೊಂಡಿದೆ. ಅವ್ಯಹತವಾಗಿ ನಗರವ್ಯಾಪ್ತಿಯ ರಾಮಾಪುರ ಮತ್ತು ಕಣ್ಣಿಗೇರಿ ಭಾಗಗಳಲ್ಲಿ ನಡೆಯುತ್ತಿರುವ ಅರಣ್ಯನಾಶ, ಹೊಸ ಅತಿಕ್ರಮಣವನ್ನೇ ತಡೆಯಲಾಗದ ನಿಸ್ಸಾಹಾಯಕ ಅರಣ್ಯ ಇಲಾಖೆ ಬಳಿ ರೈತರು ಬೆಳೆಹಾನಿಯ ಬಗ್ಗೆ ದೂರಿ ಪ್ರಯೋಜನವೇ ಇಲ್ಲವಾಗುತ್ತಿದೆ. ಪಟ್ಟಣದಂಚಿನ ಪ್ರದೇಶವಾದ ಸಬಗೇರಿ (ಜಡ್ಡಿ), ಹುತ್ಕಂಡ ಹಾಗೂ ತಾಲೂಕಿನ ಕಳಚೆ, ಮಾಗೋಡ ಮುಂತಾದ ಗ್ರಾಮೀಣ ಪ್ರದೇಶದ ಭತ್ತ, ಅಡಕೆ ಕಾಡು ಪ್ರಾಣಿಗಳ ಹಾವಳಿಯಿಂದ ಬಹುಪಾಲು ಬೆಳೆ ನಾಶವಾಗುತ್ತಿರುವುದು ಅನ್ನದಾತನ
ನಿದ್ದೆಗೆಡಿಸಿದೆ. ಮೊನ್ನೆಯ ಅಕಾಲಿಕ ಮಳೆಯಿಂದ ಭತ್ತ ನಾಶವಾಗೊದ್ದಕ್ಕೆ ರೈತರು ಆತಂಕಪಡಬೇಕಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅನ್ನದಾತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಹಗಲು ವಿವಿಧ ಜಾತಿಯ (ಕೆಂಪು, ಕರಿ ಮೂತಿ)ಯ ಮಂಗಳು ಭತ್ತದ ತೆನೆ ತಿಂದು ರೈತರಿಗೆ ನಷ್ಟವನ್ನುಂಟು ಮಾಡುತ್ತಿವೆ ಹಾಗೂ ಅಡಕೆ, ಎಳೆಯ ತೆಂಗಿನ ಕಾಯಿಯನ್ನು ತಿಂದು ಬೀಸಾಡುತ್ತವೆ. ರಾತ್ರಿಯಾದ ನಂತರ ಆನೆ ಹಿಂಡು, ಕಾಡು ಹಾಗೂ ನಾಡ ಹಂದಿಗಳಿಂದ ಗದ್ದೆ ಹಾಗೂ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ಇದರಿಂದ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆ ರಕ್ಷಿಸಿಕೊಳ್ಳುವುದು ರೈತರ ಪಾಲಿಗೆ ಸವಾಲಾಗಿ ಪರಿಣಮಿಸಿದೆ.
ಈ ಬಗ್ಗೆ ಪಪಂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ವ್ಯಾಪ್ತಿಯ ಸಬಗೇರಿ ಗ್ರಾಮಸ್ಥರು ಪತ್ರದ ಮೂಲಕ ಆಗ್ರಹಿಸಿದ್ದರು. ಹಂದಿಗಳಿಂದ ಪಟ್ಟಣದ ಸ್ವತ್ಛತೆಯನ್ನು ಹಾಳು ಮಾಡುತ್ತಿವೆ. ಪ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಂದಿ ಸಾಕಾಣಿಕೆದಾರರಿಂದ ಹಣ ಪಡೆದು ಬೇಕಾಬಿಟ್ಟಿಯಾಗಿ ಪಟ್ಟಣದಲ್ಲಿ ಹಂದಿಗಳನ್ನು ಬಿಡುವಂತೆ ಅನುಮೋದಿಸಿದ್ದಾರೆ. ಹಂದಿಗಳ ನಿರ್ಮೂಲನೆ ಮಾಡುತ್ತೇವೆ ಎಂದು ಎರಡು ಬಾರಿ ಹಣ ಖರ್ಚು ಹಾಕಿದ್ದಾರೆ. ಆದರೆ ಹಂದಿಗಳ ನಿರ್ಮೂಲನೆ ಆಗಲಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜಡ್ಡಿಯ ರೈತ ಕಿಸಾನ್ ಸಂಘದ ಸದಸ್ಯ ಗಜಾನನ ಭಟ್ಟ ದೂರಿದ್ದಾರೆ.
ನರಸಿಂಹ ಸಾತೊಡ್ಡಿ.