ಸುರತ್ಕಲ್: ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿ, ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ಉಸ್ತುವಾರಿ ವೈದ್ಯರು ಹಾಗೂ ಹೊಸದಾಗಿ ನೇಮಕಗೊಂಡ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ವೈದ್ಯರು ಶಿಸ್ತುಬದ್ಧವಾಗಿ ಆಸ್ಪತ್ರೆಗೆ ಬರಬೇಕು. ಯಾವುದೇ ಕಾರ ಣಕ್ಕೂ ಮರಣೋತ್ತರ ಪರೀಕ್ಷೆಗೆ ಬಾರದೆ ಸಬೂಬು ಹೇಳುವಂತಿಲ್ಲ. ಸಾರ್ವಜನಿಕರಿಗೆ ಹತ್ತಿರದಲ್ಲಿ ಆಸ್ಪತ್ರೆ ಇದ್ದರೂ ದೂರಕ್ಕೆ ಯಾಕೆ ಕಳುಹಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಿದ್ದಿಕೊಳ್ಳಲು ಅವಕಾಶ ನೀಡುತ್ತೇನೆ. ಇಲ್ಲದಿದ್ದಲ್ಲಿ ಗುಲ್ಬರ್ಗಾಕ್ಕೆ ವರ್ಗಾವಣೆಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭ ನ್ಯಾಯಮೂರ್ತಿಗಳು ಡಯಾಬಿಟಿಸ್ ಪರೀಕ್ಷೆ ನಡೆಸಿದರು.
ಹಲವೆಡೆ ವೈದ್ಯರ ಕೊರತೆ
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನ್ಯಾಯಮೂರ್ತಿಗಳು, ಸಾರ್ವಜನಿಕರೋರ್ವರು ನೀಡಿದ ದೂರಿನ ಮೇರೆಗೆ ರಾಜ್ಯದ ಎಲ್ಲ ಆಸ್ಪತ್ರೆಗಳ ಪರಿಶೀಲನೆಗೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದೇನೆ. ಎಲ್ಲೆಡೆ ಉತ್ತಮ ವ್ಯವಸ್ಥೆಯಿದೆ. ಉಡುಪಿ, ದ.ಕ. ಸಹಿತ ಹಲವೆಡೆ ವೈದ್ಯರ ಕೊರತೆ ಕಾಡು ತ್ತಿದೆ. ನೇಮಕಕ್ಕೆ ಸರಕಾರ ಕ್ರಮ ಕೈಗೊಂಡಿದೆ. ಸರಕಾರಿ ಆಸ್ಪತ್ರೆಯ ಬಗ್ಗೆ ತಪ್ಪು ಸಂದೇಶ ರವಾನೆ ಯಾಗಬಾರದು. ವೈದ್ಯರೂ ಉತ್ತಮ ಸೇವೆಯನ್ನು ಬಡ ರೋಗಿಗಳಿಗೆ ನೀಡ ಬೇಕು ಎಂದರು.
ವೈದ್ಯರ ಕೊರತೆ ಎದುರಾದರೆ ಜನಪ್ರತಿನಿಧಿಗಳ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು. ಲೋಕಾಯುಕ್ತ ಎಸ್.ಪಿ. ಭಾಸ್ಕರ್ ಒಕ್ಕಲಿಗ, ಡಿವೈಎಸ್‌ಪಿ ವಿಜಯ ಪ್ರಸಾದ್, ಡಿವೈಎಸ್‌ಪಿ ಕಲಾವತಿ, ಎಸ್.ಐ. ಭಾರತಿ, ಸುರತ್ಕಲ್ ಸಿ.ಐ. ಚಂದ್ರಪ್ಪ, ಸಿಬಂದಿ ಸುರೇಂದ್ರ, ವೈದ್ಯರಾದ ಡಾ| ದಿನೇಶ್, ಡಾ| ರಂಜನ್ ಉಪಸ್ಥಿತರಿದ್ದರು.
ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿ
ವೈದ್ಯರ ಸೇವೆ ಇತರ ಸೇವೆಗಿಂತ ಭಿನ್ನ. ಸೇವಾ ಮನೋಭಾವ ಮುಖ್ಯ. ಮುಂದಿನ ದಿನಗಳಲ್ಲಿ ಉತ್ತಮ ಸೇವೆಯನ್ನು ನಿರೀಕ್ಷಿಸುತ್ತೇನೆ. ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ಸೇವೆ ನೀಡಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ನೋಡಿಕೊಳ್ಳಿ. ದ್ವೇಷಿಸುವಂತೆ ಮಾಡಿಕೊಳ್ಳಬೇಡಿ ಎಂದು ಲೋಕಾಯುಕ್ತ ನ್ಯಾ| ಮೂ| ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.