ಹುಣಸೂರು: ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಭದ್ರತೆಗಾಗಿ ನಿಯೋಜನೆಗೊಳ್ಳುವ ಪೊಲೀಸ್ ಸಿಬ್ಬಂದಿ ರಾಜಕೀಯ ಹಾಗೂ ಜಾತಿ ಆಧರಿತ ವ್ಯಾಟ್ಸಾಪ್ ಗ್ರೂಪ್‌ಗ್ಳಿಂದ ದೂರವಿರಬೇಕು. ಲೈಕ್, ಶೇರ್ ಮಾಡುವ ಬಗ್ಗೆ ನಿಗಾ ಇಡಲಾಗುವುದೆಂದು ಎಂದು ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರಯ್ಯ ಎಚ್ಚರಿಸಿದರು.
ನಗರದಲ್ಲಿ ಹುಣಸೂರು ವೃತ್ತದ ಪೊಲೀಸರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಯೋಗದ ಸೂಚನೆಯಂತೆ ಕರ್ತವ್ಯ ನಿರ್ವಹಿಸಬೇಕು. ವ್ಯಾಟ್ಸಾಪ್ ಗ್ರೂಪ್ ರಚಿಸಿಕೊಂಡು ರಾಜಕೀಯ ನಾಯಕರ ಅಥವಾ ಒಂದು ಜನಾಂಗ, ಪಕ್ಷಗಳ ಪರ ಹೇಳಿಕೆ, ಪ್ರಜೋದಿಸುವಂತ ಸಂದೇಶಗಳನ್ನು ಲೈಕ್ ಮಾಡುವುದು-ಶೇರ್ ಮಾಡುವುದನ್ನು ನಿಷೇಧಿಸಲಾಗಿದೆ.
ಫೇಸ್‌ಬುಕ್, ವ್ಯಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಸಮಿತಿ ರಚಿಸಿದ್ದು, ಕಾನೂನು ಕ್ರಮ ಎದುರಿಸಬೇಕಾದೀತೆಂದು ಎಚ್ಚರಿಸಿದರು. ತಾಪಂ ಇಒ ಕೃಷ್ಣಕುಮಾರ್ ಮಾತನಾಡಿ, ಚುನಾವಣೆ ಘೋಷಣೆಯಾದಾಗಿನಿಂದ ಕಡೆತನಕ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿ ಘೋಷಣೆ ಅಥವಾ ಕೈಗೊಳ್ಳುವಂತಿಲ್ಲ. ಟೆಂಡರ್ ಪ್ರಕ್ರಿಯೆ ಆಗಿದ್ದಲ್ಲಿ ಮಾತ್ರ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ನಡೆಸಲು ಅವಕಾಶ ನೀಡಬಹುದು ಎಂದರು.
ಬೀಟ್ ಪೊಲೀಸರೇ ಹೊಣೆ: ವೃತ್ತ ನಿರೀಕ್ಷಕ ಶಿವಕುಮಾರ್ ಮಾತನಾಡಿ, ಸುಧಾರಿತ ಬೀಟ್‌ಗೆ ನಿಯೋಜನೆಗೊಂಡಿರುವ ಪೊಲೀಸರಲ್ಲಿ ತಮ್ಮ ವ್ಯಾಪ್ತಿಯ ಮತಗಟ್ಟೆಗಳು, ಸಮಾಜಘಾತುಕ ಶಕ್ತಿಗಳ ಬಗ್ಗೆ ಹಾಗೂ ಎಲ್ಲಾ ವಿಷಯಗಳ ಬಗ್ಗೆ ಪೂರ್ವ ಮಾಹಿತಿ ಪಡೆಯುತ್ತಿರಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ಅಪ್‌ಡೇಟ್ ಮಾಡುತ್ತಿರಬೇಕು ಎಂದರು.
ಕಾರ್ಯಾಗಾರದಲ್ಲಿ ಪ್ರೊಬೇಷನರಿ ಡಿವೈಎಸ್ಪಿ ವೆಂಕಟೇಶ್, ತಹಶೀಲ್ದಾರ್ ಬಸವರಾಜು, ಎಸ್‌ಐ.ಗಳಾದ ಮಹೇಶ್, ಶಿವಪ್ರಕಾಶ್ ಮಾತನಾಡಿದರು. ನಗರ, ಬಿಳಿಕೆರೆ, ಗ್ರಾಮಾಂತರ ಠಾಣೆಗಳ ಎಎಸ್‌ಐಗಳು ಸೇರಿದಂತೆ 120ಕ್ಕೂ ಹೆಚ್ಚು ಪೊಲೀಸರು ಭಾಗವಹಿಸಿದ್ದರು.
ಹಣ ಸಾಗಾಣಿಕೆ ಬಗ್ಗೆ ಕಟ್ಟೆಚ್ಚರ: ಚೆಕ್‌ಪೋಸ್ಟ್, ಫ್ಲೆಯಿಂಗ್ ಸ್ಕ್ವಾಡ್‌ನವರ ಜವಾಬ್ದಾರಿ ಹೆಚ್ಚಿದ್ದು, ಒಬ್ಬ ವ್ಯಕ್ತಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸುವಂತಿಲ್ಲ. 10 ಲಕ್ಷ ರೂ.ಗಿಂತ ಹೆಚ್ಚಿನ ಹಣ ಸಾಗಾಟದ ಮಾಹಿತಿ ಸಿಕ್ಕಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದಲೇ ತಪಾಸಣೆ ಮಾಡಿಸಬೇಕು. ಅನುಮತಿ ಇಲ್ಲದ ವಾಹನಗಳ ಮೇಲೆ ನಿಗಾ ಇಡಬೇಕು.
ಚುನಾವಣೆಗೂ 48 ಗಂಟೆಗೆ ಮುನ್ನಾ ಯಾವುದೇ ರಾಜಕೀಯ ಮುಖಂಡರ, ಮಂತ್ರಿಗಳ ಭಾವಚಿತ್ರವಿರುವ ಫ್ಲೆಕ್ಸ್, ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು. ಮತಗಟ್ಟೆ ಸುತ್ತ ನಿಗದಿತ ದೂರದಲ್ಲಿ ಮಾತ್ರ ಏಜೆಂಟರಿಗೆ ಅವಕಾಶ ಕಲ್ಪಿಸಬೇಕು. ಮತಗಟ್ಟೆಯೊಳಗೆ ಯಾವುದೇ ಪಕ್ಷಗಳ ಚಿಹ್ನೆ, ಮುಖಂಡರ ಭಾವಚಿತ್ರ ತೆಗೆದುಕೊಂಡು ಹೋಗುವಂತಿಲ್ಲ. ಈ ಬಗ್ಗೆಯೂ ಎಚ್ಚರವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರಯ್ಯ ಸೂಚಿಸಿದರು.