ಅಹಮದಾಬಾದ್: ಜಾತಿ ಮಧ್ಯೆ ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಪಡೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇವರನ್ನು ಬೇರುಮಟ್ಟದಲ್ಲಿ ನಿಷ್ಕ್ರಿಯ ಗೊಳಿಸ ಬೇಕಿದೆ. ಅಷ್ಟೇ ಅಲ್ಲ, ಧರ್ಮ ದ್ವೇಷ ಬಿತ್ತುವವರು ಮತ್ತು ಸಮುದಾಯಗಳ ಮಧ್ಯದ ವಿಶ್ವಾಸವನ್ನು ಕೆಡಿಸುವವರ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಮೋದಿ ಹೇಳಿದ್ದಾರೆ.
ಗುಜರಾತ್‌ನಲ್ಲಿ ನಡೆದ ಡಿಜಿಪಿ, ಐಜಿಪಿ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಕಿವಿಮಾತನ್ನು ಪೊಲೀಸರಿಗೆ ಹೇಳಿದ್ದಾರೆ.
ದೇಶದ ಸಮಗ್ರತೆಗಾಗಿ ಪೊಲೀಸರು ಶ್ರಮಿಸಬೇಕು ಎಂದ ಅವರು ಉಗ್ರರನ್ನು ಸದೆಬಡಿಯುವದಲ್ಲಿ ಮತ್ತು ಉಗ್ರರನ್ನು ಕೆಲವೇ ಪ್ರದೇಶಗಳಿಗೆ ಸೀಮಿತಗೊಳಿಸುವಲ್ಲಿ ಪೊಲೀಸರ ಶ್ರಮವನ್ನು ಅವರು ಶ್ಲಾಘಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾದ ಪೊಲೀಸರ ಬಗ್ಗೆ ಇಡೀ ದೇಶದ ಜನರಿಗೆ ಹೆಮ್ಮೆಯಿದೆ. ವಿಪರೀತ ಸನ್ನಿವೇಶದಲ್ಲಿ ಪೊಲೀಸರು ಕೆಲಸ ಮಾಡಬೇಕಾಗುತ್ತದೆ. ಆದರೆ ಅವರಿಗೆ ಅಗತ್ಯ ಗೌರವ ಬಹಳಷ್ಟು ಬಾರಿ ಸಿಗುವುದಿಲ್ಲ. ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಪೊಲೀಸರನ್ನು ಗುರುತಿಸುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶ್ರಮಿಸಬೇಕು ಎಂದೂ ಅವರು ಈ ವೇಳೆ ಕರೆ ನೀಡಿದ್ದಾರೆ.