Advertisement

ವ್ಯಸನದ ಆಕರ್ಷಣೆಯಿಂದ ದೂರವಿರಿ: ಡಾ|ಹೆಗ್ಗಡೆ

08:49 AM Jul 03, 2018 | Harsha Rao |

ಬೆಳ್ತಂಗಡಿ: ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಗಳತ್ತ ಆಕರ್ಷಿತರಾಗದಂತೆ ಎಚ್ಚರಿಕೆಯಿಂದಿರುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ಆಕರ್ಷಣೆ ಎನ್ನುವುದು ಅಪಾಯವಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ವಯಸ್ಕರು ಕೂಡ ವ್ಯಸನದ ಆಕರ್ಷಣೆಯನ್ನು ದೂರ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಸೋಮವಾರ ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಾಯೋಜಕತ್ವದಲ್ಲಿ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ನಡೆದ ಮಾದಕ ವಸ್ತುಗಳ ತಡೆಗಟ್ಟುವಿಕೆಗಾಗಿ ಜಾಥಾ ಮತ್ತು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವನ ಬದುಕಿನಲ್ಲಿ ಹಗಲು-ರಾತ್ರಿಯಂತೆ ಸಂಸ್ಕೃತಿ ಮತ್ತು ವಿಕೃತಿಗಳು ಬರುತ್ತವೆ. ವಿಕೃತಿ ಎಂಬುದು ಮಾದಕ ವ್ಯಸನದಂತಹ ದುಶ್ಚಟಗಳನ್ನು ಬೆಳೆಸುತ್ತದೆ. ನಾವು ಧರ್ಮವನ್ನು ಪಾಲನೆ ಮಾಡಿದರೆ ಇಂತಹ ಚಟಗಳಿಂದ ದೂರವಿರಲು ಸಾಧ್ಯ. ಉತ್ತಮ ಸ್ನೇಹಿತರ ಸಂಪಾದನೆಯೂ ನಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸುತ್ತದೆ ಎಂದರು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ ಹಾಗೂ ನಾಡೋಜ ಸಾಲು ಮರದ ತಿಮ್ಮಕ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ 2018-19ನೇ ಸಾಲಿನ ರಾಜ್ಯವ್ಯಾಪಿ ಸ್ವಾಸ್ಥ  ಸಂಕಲ್ಪ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್‌ ಹೊನ್ನವಳ್ಳಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಂಯಮ ಮಂಡಳಿಯ ಕಾರ್ಯದರ್ಶಿ ಮೀನಾಕುಮಾರಿ ಕೈಪಿಡಿ ಬಿಡುಗಡೆಗೊಳಿಸಿದರು.

ಸಂಯಮ ಮಂಡಳಿಯ ನಿರ್ಗಮನ ಅಧ್ಯಕ್ಷ ಎಚ್‌.ಸಿ. ರುದ್ರಪ್ಪ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯ ದರ್ಶಿ ಡಾ| ಬಿ. ಯಶೋವರ್ಮ, ಜನ ಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್‌, ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಟಿ.ಎನ್‌. ಕೇಶವ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಕೆ. ಮಹಾವೀರ ಅಜ್ರಿ ಉಪಸ್ಥಿತರಿದ್ದರು.
ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯ ದರ್ಶಿ ವಿವೇಕ್‌ ವಿ. ಪಾçಸ್‌ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ| ಬಿ.ಎ. ಕುಮಾರ ಹೆಗ್ಡೆ ವಂದಿಸಿದರು. ಉಪನ್ಯಾಸಕ ಡಾ| ಶ್ರೀಧರ ಭಟ್‌ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು.

Advertisement

ತಿಮ್ಮಕ್ಕನಿಗೆ ವಿಶೇಷ ಗೌರವ
ಕಾರ್ಯಕ್ರಮದಲ್ಲಿ ಎಲ್ಲರಿಗೂ ಪುಷ್ಪಗುತ್ಛ ನೀಡುವಾಗ ಸಾಲುಮರದ ತಿಮ್ಮಕ್ಕನಿಗೆ ಪುಷ್ಪ ಗುತ್ಛ ನೀಡಲು ಡಾ| ಹೆಗ್ಗಡೆ ಅವರು ವಿದ್ಯಾರ್ಥಿನಿಯರನ್ನು ಕರೆಸಿ ಅವರ ಮೂಲಕ ಕೊಡಿಸಿದರು. ವಿದ್ಯಾರ್ಥಿನಿಯರು ತಿಮ್ಮಕ್ಕನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಡಾ| ಹೆಗ್ಗಡೆ ಅವರು ತಮ್ಮ ಭಾಷಣದ ಸಂದರ್ಭದಲ್ಲಿ ತಿಮ್ಮಕ್ಕ ಅವರನ್ನು 108 ವರ್ಷದ ಕಿರಿಯ ಮಹಿಳೆ ಎಂದು ಪ್ರಶಂಸಿದರು.

Advertisement

Udayavani is now on Telegram. Click here to join our channel and stay updated with the latest news.

Next