ಭಾರತೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಆಟಗಾರರಾದ ವೇಗಿ ಅವೇಶ್ ಖಾನ್ ಮತ್ತು ಫಿನಿಶರ್ ಶಾರುಖ್ ಖಾನ್ ಅವರ ಈ ಬಾರಿಯ ಮೂಲ ಬೆಲೆ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ದಿಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಿಂಚಿದ ಈ ಇಬ್ಬರು ಆಟಗಾರರಿಗೆ 20 ಲಕ್ಷ ರೂ ಮೂಲ ಬೆಲೆ ನಿಗದಿ ಮಾಡಲಾಗಿದೆ.
2022ರ ಐಪಿಎಲ್ ಮೆಗಾ ಹರಾಜಿಗೆ ತಮ್ಮನ್ನು ನೋಂದಾಯಿಸಿಕೊಂಡಿರುವ ಆಟಗಾರರ ಪಟ್ಟಿ ಹೊರ ಬಿದ್ದಿದೆ. ಒಟ್ಟು 896 ಭಾರತೀಯರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಆಟಗಾರರು ತಮ್ಮ ಹೆಸರನ್ನು ಒಟ್ಟು 5 ಮೂಲ ಬೆಲೆಯ ವರ್ಗಗಳ ಅಡಿಯಲ್ಲಿ ಹಾಕಬಹುದು. ಗರಿಷ್ಠ 2 ಕೋಟಿ ರೂ, 1.5 ಕೋಟಿ, 1 ಕೋಟಿ, 50 ಲಕ್ಷ ಮತ್ತು 20 ಲಕ್ಷ ರೂ ಮೂಲಬೆಲೆಗೆ ತಮ್ಮ ಹೆಸರು ನೋಂದಾಯಿಸಬಹುದು.
ಶಾರುಖ್ ಖಾನ್ ಅವರನ್ನು 2021 ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 5.25 ಕೋಟಿ ರೂ.ಗೆ ಖರೀದಿಸಿತು. ಅವೇಶ್ ಖಾನ್ ಅವರು 70 ಲಕ್ಷ ರೂ ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಸೇರಿದ್ದರು.
ಇದನ್ನೂ ಓದಿ:ಇಂದಾದರೂ ಸಿಗುತ್ತಾ ಜಯ? ಕೈ ಹಿಡಿಯುತ್ತಾ ಕೇಪ್ ಟೌನ್: ಟೀಂ ಇಂಡಿಯಾದಲ್ಲಿ ನಾಲ್ಕು ಬದಲಾವಣೆ
ಐಪಿಎಲ್ ಹರಾಜಿಗೆ ಒಟ್ಟು 1,214 ಕ್ರಿಕೆಟಿಗರ ಹೆಸರು ನೋಂದಾಯಿಸಲ್ಪಟ್ಟಿದೆ. ಇದರಲ್ಲಿ 896 ಆಟಗಾರರು ಭಾರತದವರಾದರೆ, 318 ಆಟಗಾರರು ವಿದೇಶಿಯರು. ಉಳಿದಂತೆ 33 ಕ್ರಿಕೆಟಿಗರನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿವೆ. ಇವರಲ್ಲಿ ಪ್ರಮುಖರೆಂದರೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ. ಹಾಗೆಯೇ ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜ, ಕೇನ್ ವಿಲಿಯಮ್ಸನ್, ಜಾಸ್ ಬಟ್ಲರ್, ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಆಯಾ ಫ್ರಾಂಚೈಸಿಗಳಲ್ಲಿ ಉಳಿದುಕೊಂಡಿದ್ದಾರೆ.
ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಮಿಚೆಲ್ ಸ್ಟಾರ್ಕ್, ಸ್ಯಾಮ್ ಕರನ್, ಅವರೆಲ್ಲ ಕೈಬಿಡಲ್ಪಟ್ಟ ಪ್ರಮುಖ ಆಟಗಾರರು. ಗೇಲ್, ಎಬಿಡಿ ಈ ಬಾರಿ ಆಡುವುದಿಲ್ಲ.
ಮೊದಲ ಸಲ ಭೂತಾನ್ ಕ್ರಿಕೆಟರ್ ಒಬ್ಬರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಲದ ವಿಶೇಷ. ಹಾಗೆಯೇ ಅಮೆರಿಕದ ದಾಖಲೆ ಸಂಖ್ಯೆಯ 14 ಆಟಗಾರರೂ ಇದ್ದಾರೆ. ಹಾಗೆಯೇ ನಮೀಬಿಯಾ (5), ನೇಪಾಲ (15), ನೆದರ್ಲೆಂಡ್ಸ್ (1), ಒಮಾನ್ (3), ಸ್ಕಾಟ್ಲೆಂಡ್ (1), ಜಿಂಬಾಬ್ವೆ (2), ಐರ್ಲೆಂಡ್ (3), ಯುಎಇ (1) ಕ್ರಿಕೆಟಿಗರೂ ಐಪಿಎಲ್ ಆಡಲು ಉತ್ಸುಕರಾಗಿದ್ದಾರೆ.