Advertisement

ಆಟೊಗ್ರಾಫ್ ಎಂಬ ಎಂದೂ ಮರೆಯದ ಹಾಡು

03:15 PM Mar 13, 2018 | Harsha Rao |

ಎರಡು ದಶಕದ ಹಿಂದೆ “ಆಟೊಗ್ರಾಫ್ ಪ್ಲೀಸ್‌’ ಎಂಬ ಪಿಸುಮಾತು  ಶಾಲೆ-ಕಾಲೇಜುಗಳ ತುಂಬಾ ಕೇಳಿ ಬರುತ್ತಿತ್ತು. ಈಗ, ಮೊಬೈಲ್‌ ಎಂಬ ಮಾಯೆಗೆ ಸಿಲುಕಿರುವ ಯುವಜನ, ಆಟೊಗ್ರಾಫ್ ಎಂಬ ನವಿಲುಗರಿ ನೀಡುತ್ತಿದ್ದ ಪುಳಕದಿಂದ ವಂಚಿತರಾಗಿದ್ದಾರೆ. ಒಂದು ಕಾಲದಲ್ಲಿ ಎಲ್ಲರನ್ನು ಜ್ವರದಂತೆ, ಪ್ರೇಮದಂತೆ ಆವರಿಸಿಕೊಂಡಿದ್ದ ಆಟೊಗ್ರಾಫ್ ಎಂಬ  ನಾಸ್ಟಾಲ್ಜಿಯಾದಲ್ಲಿ ತೇಲಿ ಹೋದಾಗ…

Advertisement

20 ಅಥವಾ 30 ವರ್ಷಗಳ ಹಿಂದೆ ಮಾರ್ಚ್‌ ತಿಂಗಳು ಬಂತು ಅಂದರೆ, ವಿದ್ಯಾರ್ಥಿ- ಶಿಕ್ಷಕರ ಬಳಗಕ್ಕೆ ಧಾವಂತ, ಸಂಕಟ ಜೊತೆಯಾಗುತ್ತಿತ್ತು. ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಡಿಗ್ರಿ ಕಡೆಯ ವರ್ಷದಲ್ಲಿ ಇದ್ದವರಿಗೆ ಅದು ವಿದಾಯದ ಸಂದರ್ಭ. ಇಷ್ಟು ದಿನ ಜತೆಗಿದ್ದವರನ್ನು ಬಿಟ್ಟು ಹೋಗಬೇಕಲ್ಲ ಎಂಬ ನೋವು ಅವರನ್ನು ಕಂಗಾಲು ಮಾಡುತ್ತಿತ್ತು. ಶಾಲೆ, ಕಾಲೇಜು ಬಿಟ್ಟ ನಂತರ ಯಾರು ಎಲ್ಲಿಗೆ ಹೋಗುತ್ತಾರೆ, ಮತ್ತೆ ಯಾವಾಗ ಸಿಗುತ್ತಾರೆ ಎಂಬ ಅಂದಾಜು ಇರುತ್ತಿರಲಿಲ್ಲ. ಅದೇ ಕಾರಣಕ್ಕೆ ಭಾವುಕ ಮನಸ್ಥಿತಿಯ ಹುಡುಗ-ಹುಡುಗಿಯರು ಕೊನೆಯ ದಿನ ಅಳುತ್ತಾ ನಿಂತು ಬಿಡುತ್ತಿದ್ದರು. ಇಂಥ ಸಂದರ್ಭದಲ್ಲಿ, ಗೆಳೆತನದ ಸವಿನೆನಪನ್ನು ಜತೆಗೇ ಉಳಿಸಿಕೊಳ್ಳಲು ನೆರವಾಗುತ್ತಿದ್ದ ನವಿಲುಗರಿಯೇ ಆಟೊಗ್ರಾಫ್ ಪುಸ್ತಕ!

   ಆ ದಿನಗಳಲ್ಲಿ ಆಟೊಗ್ರಾಫ್ ಹಾಕಿಸಬೇಕು ಎಂಬುದು ಜ್ವರದಂತೆ, ಪ್ರೇಮದಂತೆ, ಹವ್ಯಾಸದಂತೆ, ಫ್ಯಾಷನ್ನಿನಂತೆ, ದೊಡ್ಡಸ್ತಿಕೆಯಂತೆ, ಹೆಮ್ಮೆಯಂತೆ, ಸಂತೋಷದಂತೆ ಮತ್ತು ಕರ್ತವ್ಯದಂತೆ ಕಾಣುತ್ತಿತ್ತು. ಅಂಗೈಯಗಲದ ಆಟೊಗ್ರಾಫ್ ಪುಸ್ತಕದಲ್ಲಿ ತುಂಬಿಕೊಳ್ಳುತ್ತಿದ್ದ ಅಕ್ಷರಗಳ ರಂಗವಲ್ಲಿಯನ್ನೂ, ಅವುಗಳ ತರಹೇವಾರಿ ವೆರೈಟಿಯನ್ನೂ ಈಗ ನೆನಪು ಮಾಡಿಕೊಂಡರೆ ಒಮ್ಮೊಮ್ಮೆ ನಗು ಬರುತ್ತದೆ. ಮುಜುಗರವಾಗುತ್ತದೆ. ಸಂಕೋಚ ಕೈ ಹಿಡಿಯುತ್ತದೆ. ನಾಚಿಕೆ ಜತೆಯಾಗುತ್ತದೆ. ಆಟೊಗ್ರಾಫ್ನಿಂದ ಆದ ಒಂದೆರಡು ಅನಾಹುತಗಳನ್ನು ನೆನಪು ಮಾಡಿಕೊಂಡರೆ ಸಂಕಟವೂ ಆಗುತ್ತದೆ.
***
ನಿಜ ಹೇಳಬೇಕೆಂದರೆ- 80 ಹಾಗೂ 90ರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದವರಿಗೆ ಆಟೊಗ್ರಾಫ್ ಪುಸ್ತಕ ಖರೀದಿಸುವುದೇ ಕಷ್ಟದ ಕೆಲಸವಾಗಿತ್ತು. ಹಾಗಿದ್ದರೂ, ಅಪ್ಪ-ಅಮ್ಮನ ಹಿಂದೆಹಿಂದೆಯೇ ಸುತ್ತಾಡಿ, ಹಟ ಹಿಡಿದು, ನಂಗೆ ಅದು ಬೇಕೇ ಬೇಕು ಎಂದು ಗೋಗರೆದು ಕಣ್ಣೀರು ಹಾಕಿದರೆ, ಪ್ರತಿಫ‌ಲದಂತೆ ಆಟೊಗ್ರಾಫ್ ಪುಸ್ತಕ ಸಿಗುತ್ತಿತ್ತು. ಅದರಲ್ಲೂ ವೆರೈಟಿಗಳಿದ್ದವು. ಹೆಚ್ಚಿನವಕ್ಕೆ ಚರ್ಮದ ಹೊದಿಕೆ ಇರುತ್ತಿತ್ತು. ಒಳಗಿನ ಪುಟಗಳು ಕೆಂಪು, ನೀಲಿ, ಹಸಿರು, ಬಿಳಿಯ ಬಣ್ಣದಿಂದ ಕೂಡಿರುತ್ತಿದ್ದವು. ಜಾಸ್ತಿ ದುಡ್ಡು ನೀಡಿದರೆ ಹತ್ತು ಮಂದಿ “ವಾಹ್‌ ವಾಹ್‌’ ಎಂದು ಉದ್ಗರಿಸುವಂತೆ ಮಾಡುವ ಒಳಪುಟಗಳ ಕೊನೆಯಲ್ಲಿ ಹೂವಿನ ಚಿತ್ರವಿರುವ; ಮಿಕ್ಕಿ ಮೌಸ್‌ನ ಸ್ಟಿಕ್ಕರ್‌ ಇರುವ ಆಟೊಗ್ರಾಫ್ ಪುಸ್ತಕ ಸಿಗುತ್ತಿತ್ತು. ಆ ಪುಸ್ತಕದ ಮೊದಲ ಹಾಳೆಯಲ್ಲಿ ಹೆಸರು, ವಿಳಾಸ ಬರೆದು, ನಂತರ- “ವಿದಾಯದ ಈ ಸಂದರ್ಭದಲ್ಲಿ ನಿಮ್ಮ ನೆನಪಿರಲಿ; ಒಂದು ಸಂದೇಶವಿರಲಿ, ವಿಳಾಸವೂ ಜತೆಗಿರಲಿ’ ಎಂದು ಬರೆದು ಗೆಳೆಯ, ಗೆಳತಿಯರಿಗೆ; ಅಧ್ಯಾಪಕರಿಗೆ ಕೊಟ್ಟ ಮೇಲೆ ಆ ಪುಸ್ತ ಕದಲ್ಲಿ ಅರಳಿಕೊಳ್ಳುತ್ತಿದ್ದ ಅಕ್ಷರದ ಸುಗಂಧವಿತ್ತಲ್ಲ; ಅದು ವರ್ಣನೆಗೆ ನಿಲುಕದ್ದು.

ಹುಡುಗಿಯರು, ಗೆಳತಿಯರಿಗೇ ಬರೆಯಬೇಕಾದ ಸಂದರ್ಭದಲ್ಲಿ – “ಮಲ್ಲಿಗೆ ಕಾಲದಲ್ಲಿ ಮದುವೆಯಾಗಿ, ಸಂಪಿಗೆ ಕಾಲದಲ್ಲಿ ಸಂಸಾರ ಹೂಡಿ, ಕನಕಾಂಬರದಂಥ ಕಂದನನ್ನು ಪಡೆದು, ಸುಖವಾಗಿ ಬಾಳು’ ಎಂದು ಮುಗಿಸುತ್ತಿದ್ದರು. ಹಾಗೆಯೇ ಹುಡುಗರು- “ಮರೆಯದಿರು ಮಿತ್ರ, ಬರೆಯುತಿರು ಪತ್ರ, ಮರೆಯದೇ ಕಳುಹಿಸು ನಿನ್ನ, ಮದುವೆಯ ಪತ್ರ’ ಎಂದು ಬರೆದು ಸಹಿ ಜಡಿಯುತ್ತಿದ್ದರು. ಇನ್ನು ಹುಡುಗ-ಹುಡುಗಿ ಇಬ್ಬರೂ ಪರಸ್ಪರರಿಗೆ ಬರೆಯಬೇಕಾಗಿ ಬಂದಾಗ “ಸ್ನೇಹ ಆಕಸ್ಮಿಕ, ಅಗಲಿಕೆ ಅನಿವಾರ್ಯ, ನೆನಪೊಂದೇ ಶಾಶ್ವತ’ ಎಂದು ಬರೆದು ವೇದಾಂತದ ಫೋಸ್‌ ಕೊಡುತ್ತಿದ್ದರು. ಕೆಲವರಂತೂ ಕಾಲಾತೀತರಂತೆ- “ಬಳ್ಳಿಯ ಹೂವು ಬಾಡಿದರೂ, ಬಾವಿಯ ನೀರು ಬತ್ತಿದರೂ, ನೀನು ನನ್ನನ್ನು ಮರೆತರೂ ನಾನು ನಿನ್ನನ್ನು ಮರೆಯಲಾರೆ’ ಎಂದು ಬರೆದು ಬಿಡುತ್ತಿದ್ದರು. ತಮಾಷೆಯೆಂದರೆ, ಹೀಗೆ ಗೆಳೆಯ- ಗೆಳತಿಯರ ತಳಮಳಕ್ಕೆ, ನಿಟ್ಟುಸಿರಿಗೆ, ಗೆಳೆತನದ ಸವಿಗೆ, ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದ್ದ ಆಟೊಗ್ರಾಫ್ ಪುಸ್ತಕ, ನಂತರದ ಕೆಲವೇ ದಿನಗಳಲ್ಲಿ ಹಳೆಯ ಪುಸ್ತಕಗಳ ಜತೆ ಕಸದ ಮೂಲೆ ಸೇರುತ್ತಿತ್ತು. (ಆದರೆ, ಕೆಲವರು ಆಟೊಗ್ರಾಫ್ ಪುಸ್ತಕಗಳನ್ನು ಒಂದು ಆಸ್ತಿಯಂತೆ ಕಾಪಾಡಿಕೊಳ್ಳುತ್ತಿದ್ದರು. ಈಗಲೂ ಕಾಪಿಟ್ಟುಕೊಂಡವರಿ¨ªಾರೆ)

   ಒಂದು ಸಣ್ಣ ಹೆದರಿಕೆ, ಹಿಂಜರಿಕೆಯೊಂದಿಗೇ ಆಟೊಗ್ರಾಫ್ ಪುಸ್ತಕವನ್ನು ಅಧ್ಯಾಪಕರ ಮುಂದಿಟ್ಟರೆ ಅಲ್ಲಿ ಕೂಡ ಒಂದು ಹೊಸ ಭಾವಲೋಕ ತೆರೆದುಕೊಳ್ಳುತ್ತಿತ್ತು. ಗಣಿತ, ವಿಜ್ಞಾನ ಹಾಗೂ ಸಮಾಜ ಶಾಸ್ತ್ರ ಬೋಧಿಸುತ್ತಿದ್ದ ಅಧ್ಯಾಪಕರಲ್ಲಿ ಹೆಚ್ಚಿನವರು -“All the best’ ಎಂದು ಬರೆದು ಸುಮ್ಮನಾಗುತ್ತಿದ್ದರು. ಅವರೇನಾದರೂ ಆಟೊಗ್ರಾಫ್ ಹಾಳೆಯ ಮೇಲ್ಭಾಗದಲ್ಲಿ – “ನನ್ನ ಅಚ್ಚುಮೆಚ್ಚಿನ ಪ್ರೀತಿಪಾತ್ರ ವಿದ್ಯಾರ್ಥಿಗೆ ಶುಭಹಾರೈಕೆಗಳು’ ಎಂದೋ, “ಬದುಕು ಬಂಗಾರವಾಗಲಿ’ ಎಂದೋ ಬರೆದುಬಿಟ್ಟಿದ್ದರೆ, ಆ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಕೋಡು ಮೂಡಿದಂತಾಗುತ್ತಿತ್ತು. ಕನ್ನಡ- ಇಂಗ್ಲಿಷ್‌ ಪಾಠಹೇಳುತ್ತಿದ್ದ ಅಧ್ಯಾಪಕರು ಮಾತ್ರ ಕಾವ್ಯಾತ್ಮಕ ಶೈಲಿಯ, ಪಸಂದ್‌ ಎನ್ನುವಂಥ ಸಂದೇಶಗಳನ್ನು ಬರೆಯುತ್ತಿದ್ದರು. ಕೆಲವರಂತೂ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಸಂದೇಶ ಬರೆದು- “ಶುಭವಾಗಲಿ’ ಎಂದು ಹಾರೈಸುತ್ತಿದ್ದರು.

Advertisement

   ಆಟೊಗ್ರಾಫ್ ಎಂದರೆ ಈಗಲೂ ಮೇಲಿಂದ ಮೇಲೆ ನೆನಪಾಗುವುದು ಗೆಳೆಯ- ಗೆಳತಿಯರ ಅಕ್ಷರ ವಿಹಾರದ ಪ್ರಸಂಗಗಳೇ. ಕೆಲವರಂತೂ “ನೀ ನಡೆವ ಹಾದಿಯಲ್ಲಿ/ ನಗೆಹೂವು ಬಾಡದಿರಲಿ..’ಎಂಬ ಸಿನಿಮಾದ ಹಾಡನ್ನೇ ಬರೆದು ಬಿಡುತ್ತಿದ್ದರು. ಮತ್ತೆ ಕೆಲವರು ಸರ್ವಜ್ಞನ “ವಚನ’ಕ್ಕೆ ಶರಣಾಗುತ್ತಿದ್ದರು. ಕೆಲವರು ಮನೆಯಲ್ಲಿ ಅಣ್ಣನೋ, ಅಕ್ಕನೋ ಮೊದಲೇ ಬರೆಸಿಕೊಂಡ ಆಟೊಗ್ರಾಫ್ ಪುಸ್ತಕವಿದ್ದರೆ ಅದರಿಂದ ಚೆನ್ನಾಗಿರುವುದನ್ನು ಕದ್ದು, ಸ್ಕೋಪ್‌ ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು ಅಲ್ಲಿ ಕೂಡ ಶ್ರೀ ಗಣೇಶಾಯ ನಮಃ; ಶ್ರೀ ರಾಘವೇಂದ್ರಾಯ ನಮಃ’ ಎಂದು ಬರೆದೇ ಮುಂದುವರಿಸುತ್ತಿದ್ದರು. ಮತ್ತೆ ಕೆಲವರು, ಬರೆಯುವ ಮೊದಲು ಉಳಿದ ಎಲ್ಲವನ್ನೂ ಓದಿ- “ಛೆ, ನಾನು ಬರೀಬೇಕು ಅಂದುಕೊಂಡಿ ದ್ದುದನ್ನು ಬೇರೆ ಯಾರೋ ಬರೆದಿ¨ªಾರೆ’ ಎಂದು ಬೇಸರಿಸಿಕೊಂಡು ಸಹಿ ಮಾಡಿ ಸುಮ್ಮನಾಗುತ್ತಿದ್ದರು. ಮತ್ತೂಂದಷ್ಟು ಜನ- “ನನಗೆ ಚೆನ್ನಾಗಿರೋ ಸಾಲು ಹೊಳೀತಾ ಇಲ್ಲ. ಹೊಳೆದ ತಕ್ಷಣ ಬರೆದುಕೊಡ್ತೀನಿ’ ಎಂದು ವಾರವಿಡೀ ಕೈಗೇ ಸಿಗದೆ ಆಟ ಆಡಿಸುತ್ತಿದ್ದರು!

   ಸ್ವಾರಸ್ಯವೆಂದರೆ, ಆಟೊಗ್ರಾಫ್ ಎಂಬುದು ಹುಡುಗ- ಹುಡುಗಿಯರ ಗೆಳೆತನಕ್ಕೆ, ಪಿಸುಮಾತಿಗೆ ಮತ್ತು ಕೆಲವೊಮ್ಮೆ ಪ್ರೇಮ ನಿವೇದನೆಗೆ ವೇದಿಕೆಯೂ ಆಗುತ್ತಿತ್ತು. ಇಡೀ ವರ್ಷ ಒಂದೇ ಒಂದು ಮಾತೂ ಆಡಿರದಿದ್ದ ಹುಡುಗಿಯರು, ಆಟೊಗ್ರಾಫ್ ಹಾಕುವ ನೆಪದಲ್ಲಿ ಮಾತಾಡುತ್ತಿದ್ದರು. ಸ್ವಲ್ಪ ಫ್ರೆಂಡ್ಲಿ ಎಂಬಂತಿದ್ದ ಹುಡುಗಿಯರು ಥೇಟ್‌ ಹುಡುಗರ ಭಾಷೆಯಲ್ಲಿ- “ಭೂಮಿ ಬಿರಿದರೂ, ಆಕಾಶ ಅಳಿದರೂ ನಮ್ಮಿಬ್ಬರ ಗೆಳೆತನ ಮುರಿಯಲಾರದು’ ಎಂದು ಬರೆದುಬಿಡುತ್ತಿದ್ದರು. ಹುಡುಗರನ್ನು ಕಿಚಾಯಿಸಬೇಕು ಅಂದುಕೊಂಡವರಂತೂ- “ಅಣ್ಣಾ, ನೀನು ಸುಖವಾಗಿ ಬಾಳು’ ಎಂದು ಬರೆದು ಕಿಸಕ್ಕನೆ ನಗುತ್ತಿದ್ದರು. ಹಾಗೆಯೇ ಹುಡುಗಿಯರಿಂದ ಆಟೊಗ್ರಾಫ್ ಪುಸ್ತಕ ಪಡೆದ ಫ‌ಟಿಂಗರು ನಾಲ್ಕು ಸಾಲು ಏನೋ ಬರೆದು, ಕಡೆಯಲ್ಲಿ ತನ್ನ ಹೆಸರಿನೊಂದಿಗೆ ಒಂದು ಲವ್‌ ಸಿಂಬಲ್‌ ಕೂಡ ಹಾಕಿಬಿಡುತ್ತಿದ್ದರು. ಅದು ಹತ್ತಾರು ಅಪಾರ್ಥಗಳಿಗೆ ಕಾರಣವಾಗುತ್ತಿತ್ತು.

  ಆಟೊಗ್ರಾಫ್ ಹಾಕುವ ನೆಪದಲ್ಲಿ ಇನ್ನಿಲ್ಲದ ಟೆನ್ಶನ್‌ಗೆ ಈಡಾದ ಹುಡುಗಿಯರ ಬಗ್ಗೆಯೂ ಹೇಳಬೇಕು. ಆಗ ತಾನೆ ಎಸ್ಸೆಸ್ಸೆಲ್ಸಿ ಮುಗಿಸಿರುತ್ತಿದ್ದ, ಪಿಯುಸಿ ದಾಟಿರುತ್ತಿದ್ದ ಹುಡುಗಿಯರು ಆಗಷ್ಟೇ “ದೊಡ್ಡವರಾಗಿರುತ್ತಿದ್ದರು’. “ಹುಡುಗರೊಂದಿಗೆ ಮಾತಾಡುವಂತಿಲ್ಲ’ ಎಂದು ಅವರಿಗೆ ಷರತ್ತು ವಿಧಿಸಲಾಗಿರುತ್ತಿತ್ತು. ಹೀಗಿ¨ªಾಗಲೇ, ಅವಳ ಮುಂದೆ ರೋಮಿಯೋನ ಗೆಟಪ್ಪಿನಲ್ಲಿ ಹುಡುಗ ನಿಂತಿರುತ್ತಿದ್ದ. “ಬರೆಯಲಾರೆ’ ಎಂದರೆ ಅವನು ನೊಂದುಕೊಂಡಾನೆಂದು ಭಾವಿಸಿ, ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಢವಗುಡುವ ಎದೆಯ ಮೇಲೆ ಎಡಗೈ ಇಟ್ಟುಕೊಂಡೇ ಹುಡುಗಿ ನಾಲ್ಕು ಸಾಲು ಬರೆದು ಮರುದಿನ ಅವನಿಗೆ ಕೊಟ್ಟುಬಿಡುತ್ತಿದ್ದಳು. ಅಷ್ಟು ದೂರಕ್ಕೆ ಹೋಗಿ ಉದ್ವೇಗದಿಂದಲೇ ತೆರೆದು ನೋಡಿದರೆ- “ಪ್ರೀತಿಯ ಸಹೋದರ, ನಿನ್ನ ಸೋದರಿಯನ್ನು ಮರೆಯಬೇಡ’ ಎಂಬ ಸಾಲು ಕಾಣಿಸುತ್ತಿತ್ತು! ಅವನಾಗ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದ!

  ನಂತರ ಬದಲಾದ ಕಾಲಘಟ್ಟದಲ್ಲಿ, ಆಟೊಗ್ರಾಫ್ ಪುಸ್ತಕದ ರೂಪ, ವಿನ್ಯಾಸವೂ ಬದಲಾಯಿತು. ಖಾಲಿ ಹಾಳೆಯ ಪುಸ್ತಕಗಳ ಬದಲು, ಪ್ರಶ್ನೋತ್ತರ ಮಾದರಿಯ  ಪುಸ್ತಕಗಳು ಬಂದವು. ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಇಷ್ಟದ ನಟ/ನಟಿ, ಇಷ್ಟದ ತಿಂಡಿ, ಬಣ್ಣ, ನನ್ನ ಕುರಿತು ಒಂದು ಸಾಲಿನಲ್ಲಿ ಬರೆಯಿರಿ, ಮುಂದೆ ಏನಾಗಬೇಕೆಂದಿದ್ದೀರಿ,  …ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವುದೇ ಆಟೊಗ್ರಾಫ್ ಎನಿಸಿಕೊಂಡಿತು.

ಆಟೊಗ್ರಾಫ್ನ ಇಂಥ ಮಾಯಾಲೋಕವನ್ನು ನೆನಪು ಮಾಡಿಕೊಂಡಾಗಲೇ ನೆನಪಿಗೆ ಬರುವ ಇನ್ನಷ್ಟು ಸಾಲುಗಳು: (ಈಗ 30-40 ವರ್ಷ ವಯೋಮಾನದಲ್ಲಿರುವ ಎಲ್ಲರೂ ಇವನ್ನು ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಓದಿರುತ್ತಾರೆ ಅಥವಾ ಬರೆದಿರುತ್ತಾರೆ.) “ಪರೀಕ್ಷೆ ಎಂಬ ಯುದ್ಧದಲ್ಲಿ/ಪೆನ್ನು ಎಂಬ ಖಡ್ಗ ಹಿಡಿದು/ಇಂಕು ಎಂಬ ರಕ್ತ ಚೆಲ್ಲಿ/ಜಯಶೀಲನಾಗಿ ಬಾ’. ಮತ್ತೂಂದು: lf wealth is lost, nothing is lost. If health is lost, something is lost, If character is lost, Everything is lost. So be good always…
—–
ಈಗ, ಕಾಲ ಬದಲಾಗಿದೆ. ಮೊಬೈಲ್‌ ಎಂಬ ಮಾಯಾಂಗನೆ ಎಲ್ಲರ ಜತೆಗಿದೆ. ಆಟೊಗ್ರಾಫ್ ಹಾಕಿಸಿಕೊಳ್ಳುವ ಆಸೆಯಾಗಲಿ, ಹಾಕುವ ಉಮೇದಿಯಾಗಲಿ ಯಾರಿಗೂ ಇಲ್ಲ. ಏಕೆಂದರೆ, ಎಲ್ಲರ ಬಳಿಯೂ ಲೈಫ್ ಟೈಮ್‌ ಕರೆನ್ಸಿಯ ಮೊಬೈಲ್‌ ಇದೆ. ಯಾರನ್ನೇ ಆದರೂ ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಲು ಫೇಸ್‌ಬುಕ್‌ ಇದೆ. ಪರಿಣಾಮ ಏನಾಗಿದೆ ಅಂದರೆ, ಯಾವುದೋ ಸಮಾರಂಭಗಳಲ್ಲಿ ಸಿಗುವ ಚಿತ್ರನಟ-ನಟಿಯರು, ಕ್ರಿಕೆಟ್‌ ಆಟಗಾರರು, ಇತರ ಕ್ಷೇತ್ರಗಳ ಪ್ರಮುಖರ ಸಹಿ ಸಂಗ್ರಹಣೆಯನ್ನೇ ಆಟೊಗ್ರಾಫ್ ಎಂದು ಕರೆಯಬೇಕಾಗಿ ಬಂದಿದೆ. ಇದನ್ನೇ ನೆಪ ಮಾಡಿಕೊಂಡು ಮೊಬೈಲ್‌ಗೆ, ಫೇಸ್‌ಬುಕ್‌ಗೆ  ಛೀಮಾರಿ ಹಾಕಬೇಕು; ಕಾಲ ಕೆಟ್ಟು ಹೋಯ್ತು ಎಂದು ನಿಟ್ಟುಸಿರು ಬಿಡಬೇಕು ಅಂದುಕೊಂಡಾಗಲೇ ಚಿಂತಕ ಜೀನ್‌ ಪಾಲ್‌ ಸಾತ್ರೆ ಬರೆದ ಆಟೊಗ್ರಾಫ್ನ ಸಾಲುಗಳು ನೆನಪಾಗುತ್ತವೆ: ಆತ ಹೀಗೆ ಬರೆದಿದ್ದ: The flood carries you away. That is life. We can’t Judge or understand. We can only ourselves drift.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next