“ಇಷ್ಟು ದಿನ ಅದು ಅವರ ಮನೆ, ಇನ್ನು ಮುಂದೆ ಅದು ನನ್ನ ಮನೆ…’ ಹೀಗೆ ಹೇಳಿ ವಿಲನ್‌ಗೆ ಟಕ್ಕರ್ ಕೊಡುತ್ತಾನೆ ನಾಯಕ ರಮ್ಮಿ. ವಿಲನ್ ಜಯಣ್ಣನ ಬಹುತೇಕ ಎಲ್ಲಾ ಕೆಲಸಗಳಲ್ಲಿ ಬಲಗೈ ಬಂಟನಂತಿದ್ದ ರಮ್ಮಿ ಏಕಾಏಕಿ ಹೀಗೆ ಹೇಳಲು ಕಾರಣವೇನೆಂದು ಜಯಣ್ಣ ತಲೆಕೆಡಿಸಿಕೊಂಡಾಗ ಆತನಿಗೆ “ರಮ್ಮಿ ಇನ್ ಲವ್’ ಎಂದು ಗೊತ್ತಾಗುತ್ತದೆ. ಮುಂದೆ ಆಗೋದು “ಪ್ರೇಮಯುದ್ಧ’. ಅದೇನೆಂಬುದನ್ನು ನೀವು ತೆರೆಯ ಮೇಲೆಯೇ ನೋಡಿ.
“ಕಾಣದಂತೆ ಮಾಯವಾದನು’ ಒಂದು ಔಟ್ ಅಂಡ್ ಔಟ್ ಲವ್‌ಸ್ಟೋರಿ. ಇಲ್ಲಿ ಪ್ರೀತಿ ಇದೆ, ದ್ವೇಷವಿದೆ, ಕಾಮಿಡಿ ಇದೆ, ಜೊತೆಗೆ ಆತ್ಮದ ಸಂಕಟವೂ ಇದೆ. ಲವ್‌ಸ್ಟೋರಿಯಲ್ಲಿ ಆತ್ಮ ಹೇಗೆ ಸೇರಿಕೊಂಡಿತು ಎಂದು ನಿಮಗೆ ಆಶ್ಚರ್ಯವಾಗಬಹುದು. ಅದೇ ಈ ಸಿನಿಮಾದ ಪ್ಲಸ್. ರೆಗ್ಯುಲರ್ ಲವ್‌ಸ್ಟೋರಿಗಿಂತ ಈ ಸಿನಿಮಾ ಕೊಂಚ ಭಿನ್ನವಾಗಿ ಕಾಣಲು ಕಾರಣ ಆ ಆತ್ಮದ ಕಥೆ. ಹಾಗಂತ ಕನ್ನಡಕ್ಕೆ ಆತ್ಮದ ಕಥೆ ತೀರ ಹೊಸದಲ್ಲ.
ಆತ್ಮವೊಂದು ಮತ್ತೂಬ್ಬರ ದೇಹ ಸೇರಿಕೊಂಡು ಸೇಡು ತೀರಿಸೋದು, ತನ್ನ ಪ್ರೀತಿ ಪಾತ್ರರ ಹಿಂದೆ ಸುತ್ತೋದು ಹೊಸದೇನಲ್ಲ. ಈ ಚಿತ್ರದಲ್ಲೂ ಅಂತಹದ್ದೇ ಸಾಕಷ್ಟು ಅಂಶಗಳಿವೆ. ಆದರೆ, ನಿರೂಪಣಾ ಶೈಲಿ ಭಿನ್ನವಾಗಿದೆ. ಕೇವಲ ಲವ್‌ಸ್ಟೋರಿ ಹಾಗೂ ಆತ್ಮದ ಆಟವನ್ನಷ್ಟೇ ತೋರಿಸಿದರೆ ಬೋರಾಗಬಹುದು ಎಂಬುದು ನಿರ್ದೇಶರಿಗೆ ಗೊತ್ತಾಗಿದೆ. ಅದೇ ಕಾರಣದಿಂದ ಚಿತ್ರದಲ್ಲಿ ಆ್ಯಕ್ಷನ್‌ಗೂ ಹೆಚ್ಚಿನ ಜಾಗ ಕೊಟ್ಟಿದ್ದಾರೆ.
ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೇನು ಇರಬೇಕೋ, ಆ ಎಲ್ಲಾ ಅಂಶಗಳನ್ನು ಸೇರಿಸಿ “ಕಾಣದಂತೆ ಮಾಯವಾದನು’ ಚಿತ್ರ ಕಟ್ಟಿಕೊಡಲಾಗಿದೆ. ಇಲ್ಲಿ ಆತ್ಮವಿದ್ದರೂ ರೆಗ್ಯುಲರ್ ಹಾರರ್ ಸಿನಿಮಾಗಳ ಶೈಲಿ ಇಲ್ಲ. ಇಲ್ಲಿ ಯಾರೂ ಕಿಟಾರನೇ ಕಿರುಚೋದಾಗಲಿ, ಬಾಗಿಲುಗಳು ಏಕಾಏಕಿ ಬಡಿದುಕೊಳ್ಳುವುದಾಗಲಿ, ಕುರ್ಚಿಯೊಂದು ಅಲ್ಲಾಡುವುದಾಗಲೀ ಆಗೋದಿಲ್ಲ. ಇದು ಅದರಾಚೆಗಿನ ಹಾರರ್ ಟಚ್ ಇರುವ ಸಿನಿಮಾ.
ಚಿತ್ರದಲ್ಲಿ ಬರುವ ಒಂದಷ್ಟು ಟ್ವಿಸ್ಟ್‌ಗಳು ಸಿನಿಮಾವನ್ನು ಚುರುಕುಗೊಳಿಸಿವೆ. ಅದರಲ್ಲೂ ಹಾಸ್ಯನಟ ಧರ್ಮಣ್ಣ ಎಂಟ್ರಿ ನಂತರ ಚಿತ್ರಕ್ಕೊಂದು ಹೊಸ ಆಯಾಮ ಸಿಗುತ್ತದೆ. ಹಾಗೆ ನೋಡಿದರೆ ಸಿನಿಮಾದ ನಿಜವಾದ ಜೀವಾಳ ಕೂಡಾ ಇದೇ ಅಂಶ ಎನ್ನಬಹುದು. ಲವ್‌ಸ್ಟೋರಿ ಜೊತೆಗೆ ಇವತ್ತಿನ ಸಮಾಜದ ಹಲವು ವಿಚಾರಗಳನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ. ರೌಡಿ ಶೀಟರ್ ಒಬ್ಬ ಸ್ವಾಮಿಯಾಗಿ ಜನರನ್ನು ಯಾಮಾರಿಸೋದು, ರಾಜಕಾರಣಿಯೊಬ್ಬನ ದುಡ್ಡು ಆ ನಕಲಿ ಸ್ವಾಮಿ ಬಳಿ ಇರೋದು, ಅನಾಥ ಮಕ್ಕಳ ಕಾಳಜಿ ಸೇರಿದಂತೆ ಹಲವು ಅಂಶಗಳು ಸಿನಿಮಾದಲ್ಲಿವೆ.
ಚಿತ್ರದಲ್ಲಿ ನಾಯಕ ವಿಕಾಸ್ ಪ್ರೇಮಿಯಾಗಿ, ಆ್ಯಕ್ಷನ್ ಹೀರೋ ಆಗಿ, ಆರಂಭದಲ್ಲಿ ನೆಗೆಟೀವ್ ಶೇಡ್ … ಹೀಗೆ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಲು ವಿಕಾಸ್ ಪ್ರಯತ್ನಿಸಿದರೂ ಲವರ್ ಬಾಯ್ ಆಗುವಲ್ಲಿ ಇನ್ನಷ್ಟು ದೂರ ಸಾಗಬೇಕು. ನಾಯಕಿ ಸಿಂಧು ಲೋಕನಾಥ್ ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಮೊದಲಾರ್ಧ ಉದಯ್ ಹಾಗೂ ದ್ವಿತೀಯಾರ್ಧ ಲೋಕಿ ಅಬ್ಬರಿಸಿದ್ದಾರೆ. ಇನ್ನು, ಅಚ್ಯುತ್, ಸುಚೇಂದ್ರ ಪ್ರಸಾದ್, ಧರ್ಮಣ್ಣ ಸೇರಿದಂತೆ ಇತರರು ನಟಿಸಿದ್ದಾರೆ.
ಚಿತ್ರ: ಕಾಣದಂತೆ ಮಾಯವಾದನು
ನಿರ್ಮಾಣ: ಚಂದ್ರ ಶೇಖರ್ ನಾಯ್ಡು, ಸೋಮ್ ಸಿಂಗ್
ನಿರ್ದೇಶನ: ರಾಜ್ ಪತಿಪಾಟಿ
ತಾರಾಗಣ: ವಿಕಾಸ್, ಸಿಂಧು, ಅಚ್ಯುತ್, ಧರ್ಮಣ್ಣ, ಸುಚೇಂದ್ರ ಪ್ರಸಾದ್ ಮತ್ತಿತರರು.
* ರವಿಪ್ರಕಾಶ್ ರೈ