Advertisement

ಆಟೋ-ಟ್ಯಾಕ್ಸಿ ಸೇವೆ ಬಂದ್‌: ಚಾಲಕರ ಪ್ರತಿಭಟನೆ

12:24 PM Jun 18, 2019 | Suhan S |

ಮಂಡ್ಯ: ಹದಿನೈದು ವರ್ಷಗಳ ಹಿಂದಿನ ಆಟೋ ಟ್ಯಾಕ್ಸಿಗಳಿಗೆ ಗುಣಮಟ್ಟ ಪ್ರಮಾಣಪತ್ರ ನೀಡದಿರುವುದರ ವಿರುದ್ದ ಸೋಮವಾರ ಜಿಲ್ಲಾದ್ಯಂತ ಆಟೋ-ಟ್ಯಾಕ್ಸಿ ಸೇವೆ ಬಂದ್‌ ಮಾಡಿ ಚಾಲಕರು ಪ್ರತಿಭಟನೆ ನಡೆಸಿದರು.

Advertisement

ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದ ಬಳಿ ಜಮಾವಣೆಗೊಂಡ ಚಾಲಕರು ಅಲ್ಲಿಂದ ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ಒಡೆಯರ್‌ ವೃತ್ತ, ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಆಗಮಿಸಿ ಧರಣಿ ನಡೆಸಿದರು.

ಆಖೀಲ ಕರ್ನಾಟಕ ರಾಜೀವ್‌ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಅಧ್ಯಕ್ಷ ಟಿ.ಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಆಟೋ ಮತ್ತು ಟ್ಯಾಕ್ಸಿಗಳಿವೆ. ಇವುಗಳನ್ನೇ ಅವಲಂಬಿಸಿಕೊಂಡು ಚಾಲಕರು 50 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಬದುಕು ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಈ ಹಿಂದೆ 65 ಸಾವಿರದಿಂದ 75 ಸಾವಿರ ರೂ.ಗಳಿಗೆ ಆಟೋಗಳು ಸಿಗುತ್ತಿದ್ದವು. ಈಗ ಅವುಗಳ ಬೆಲೆ 2 ಲಕ್ಷ ರೂ.ಗಳಿಗೂ ಹೆಚ್ಚಾಗಿದೆ. ಆಟೋ ಚಾಲಕರು ಸಾಲಗಾರರಾಗುವ ಪರಿಸ್ಥಿತಿ ಎದುರಾಗಿದೆ. ಆದರೆ, ಕೇಂದ್ರ ಸರ್ಕಾರ ಮೋಟಾರು ವಾಹನ ನಿಯಮಾವಳಿಗಳ 155ರ ಅಡಿ ವಾಯು ಮಾಲಿನ್ಯ ತಡೆಗಟ್ಟಲು ವಯೋಮಿತಿ ಆಧಾರದ ಮೇಲೆ 15 ವರ್ಷ ಮೀರಿದ ವಾಹನಗಳ ಪರವಾನಗಿ ಸರ್ಕಾರ ವಶಪಡಿಸಿಕೊಂಡು ಹೊಸ ಆಟೋ ಖರೀದಿಗಾಗಿ 50 ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಸರ್ಕಾರದ ಭರವಸೆ ಇದುವರೆಗೂ ಈಡೇರಿಲ್ಲ. ಹೊಸ ಆಟೋ ಖರೀದಿಗೆ ಚಾಲಕರ ಬಳಿ ಹಣವಿಲ್ಲ. ಹಾಗಾಗಿ 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಗುಣಮಟ್ಟ ಪ್ರಮಾಣಪತ್ರ ನವೀಕರಿಸುವುದರ ಜೊತೆಗೆ ಪರವಾನಗಿ ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು.

ಆಟೋ ಚಾಲಕರಾದ ವಿ.ಸಿದ್ದೇಗೌಡ, ಆರ್‌.ರವಿ, ಎಂ.ರಾಜು, ಎಂ.ಎನ್‌.ಸತ್ಯನಾರಾಯಣ್‌, ನಾರಾಯಣ, ಎಚ್.ಸಿ.ಮಹೇಶ್‌, ಕುಮಾರ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ಬೇಡಿಕೆಗಳೇನು? ಎಫ್ಸಿಯನ್ನು ಸಾರಿಗೆ ಅಧಿಕಾರಿಗಳಿಂದ ಕೂಡಲೇ ಕೊಡಿಸುವುದು. ಮಂಡ್ಯ ನಗರದ ಕಸಬಾ ಹೋಬಳಿ ವ್ಯಾಪ್ತಿಯ ಪರ್ಮಿಟ್ನ್ನು ರಸ್ತೆ ಸಾರಿಗೆ ಇಲಾಖೆ ಯಾವುದೇ ಸಭೆ ಕರೆಯದೇ 12 ಕಿ.ಮೀ ವ್ಯಾಪ್ತಿಯನ್ನು 8 ಕಿ.ಮೀಗೆ ಕಡಿತಗೊಳಿಸಿದೆ. ಇದನ್ನು 17 ಕಿ.ಮೀಗೆ ಹೆಚ್ಚಳ ಮಾಡಬೇಕು. ಸಾರಿಗೆ ಇಲಾಖೆ ಆಟೋಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಭೆ ನಡೆಸಬೇಕು.

ಬೆಂಗಳೂರಿನ ಬೆಲೆಯಲ್ಲೇ ಮಂಡ್ಯದಲ್ಲೂ ಆಟೋ ದೊರಕಿಸಿಕೊಡಬೇಕು. ಸ್ವಂತ ಮನೆ ಇಲ್ಲದ ಆಟೋ ಚಾಲಕರಿಗೆ ನಿವೇಶನ ನೀಡುವುದು. ನಗರಾದ್ಯಂತ ಆಟೋ ಟ್ಯಾಕ್ಸಿ ನಿಲ್ದಾಣಗಳಿಗೆ ಕೂಡಲೇ ನೋಂದಣಿ ಮಾಡಿಕೊಡಬೇಕು. ಎಲ್ಲ ನಿಲ್ದಾಣಗಳಿಗೆ ಸರ್ಕಾರದಿಂದ ಮೇಲ್ಛಾವಣಿ ಹಾಕಿಸುವುದು. ಕೇಂದ್ರ ಸರ್ಕಾರದಿಂದ ಆಟೋಗಳಿಗೆ ವಿಮೆ ಹೆಚ್ಚಿಸುತ್ತಿರುವುದರಿಂದ 5 ಸಾವಿರಕ್ಕಿಂತ ಕಡಿಮೆ ಮಾಡಿ ಕೊಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next