ಹಾವೇರಿ: ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ ರಾಣಿಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ ಕೇವಲ ಒಂದು ವರ್ಷದಲ್ಲಿ ಎರಡು ಬಾರಿ ಸಚಿವರಾಗಿ, ಅನರ್ಹ ಗೊಂಡಿದ್ದಾರೆ!
ಶಾಸಕ ಆರ್.ಶಂಕರ್ ಅನರ್ಹತೆಯಿಂದ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಚುರುಕುಗೊಂ ಡಿದೆ. ಅನರ್ಹತೆ ಕಾರಣದಿಂದ ಶಂಕರ್ ಈ ಅವಧಿಯಲ್ಲಿ ನಡೆಯುವ ಯಾವುದೇ ಚುನಾವಣೆಯಲ್ಲಿ ಭಾಗವಹಿಸದಂತಾದರೆ ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ಏನಾಗಬಹುದು ಎಂಬುದು ಭಾರಿ ಕುತೂಹಲ ಕೆರಳಿಸಿದೆ.
ಶಂಕರ್ ನಡೆ ಹೀಗಿತ್ತು: ಆರ್.ಶಂಕರ್ ಮೂಲತ: ಬೆಂಗಳೂರಿನವರಾಗಿದ್ದು, ವೃತ್ತಿಯಲ್ಲಿ ಉದ್ಯಮಿ. 2004ರಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯರಾಗಿ ರಾಜಕಾರಣಕ್ಕೆ ಬಂದವರು. ಬಳಿಕ ಉಪಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು. 2012ರಲ್ಲಿ ತಮ್ಮ ಸಮಾಜದವರು (ಕುರುಬ) ಹೆಚ್ಚಿರುವ ರಾಣಿಬೆನ್ನೂರು ಕ್ಷೇತ್ರವನ್ನು ರಾಜ ಕಾರಣಕ್ಕೆ ಆಯ್ದುಕೊಂಡು, ಜಿಲ್ಲೆಗೆ ಕಾಲಿಟ್ಟರು.
ದ್ವಿತೀಯ ಬಾರಿ ಜಯ: 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಅವರಿಗೆ ಕಠಿಣ ಪೈಪೋಟಿಯೊಡ್ಡಿ, ಕೇವಲ 6,788 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದ ‘ಆಟೋ’ ಚಿಹ್ನೆಯೊಂದಿಗೆ ಸ್ಪರ್ಧಿಸಿದ ಆರ್. ಶಂಕರ್, ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು 4,338 ಮತಗಳಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಈಗ ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯ ಒಂದು ವರ್ಷದಲ್ಲಿಯೇ ಅನರ್ಹಗೊಂಡು ಚರ್ಚೆಗೆ ಗ್ರಾಸವಾಗಿದ್ದಾರೆ.
Advertisement
ಶಾಸಕರಾಗಿ ಕೆಲಸ ಮಾಡಿದ ಯಾವುದೇ ಅನುಭವ ಇಲ್ಲದೇ ಕೇವಲ ಅಧಿಕಾರಕ್ಕಾಗಿ ಗೆದ್ದೆತ್ತಿನ ಬಾಲ ಹಿಡಿಯಲು ಎತ್ತಬೇಕೆಂದರತ್ತ ಓಡುವ ಮೂಲಕ ಈಗ ಆರ್.ಶಂಕರ್ ಅನರ್ಹತೆಯ ಖೆಡ್ಡಾಕ್ಕೆ ಬಿದ್ದು, ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಿಕೊಂಡಿದ್ದಾರೆ. ಸ್ಪೀಕರ್ ಅನರ್ಹತೆ ತೀರ್ಪು ಪ್ರಶ್ನಿಸಿ ಆರ್. ಶಂಕರ್ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೊರೆ ಹೋದರೂ ಸದ್ಯಕ್ಕೆ ಅವರು ಈ ಜಂಜಡದಲ್ಲಿ ಸಿಲುಕಿ ಕೊಂಡಿರುವುದು ಅವರ ರಾಜಕೀಯ ಭವಿಷ್ಯಕ್ಕೆ ಕಪ್ಪುಚುಕ್ಕೆಯಾಗಿದೆ.
Related Articles
ಶಂಕರ್ ‘ಆಟೋ’ಟ
ಪಕ್ಷೇತರರಾಗಿ ಆಯ್ಕೆಯಾದ ಆರ್.ಶಂಕರ್‌ಗೆ ಸರ್ಕಾರ ರಚನೆ ವೇಳೆ ಭಾರೀ ಬೇಡಿಕೆ ಬಂದಿತ್ತು. ಆಗ ಇವರು ಅತ್ಯಧಿಕ ಸ್ಥಾನಗಳನ್ನು ಪಡೆದ ಬಿಜೆಪಿ, ಸರ್ಕಾರ ನಡೆಸಬಹುದು ಎಂದು ಬೆಳಗ್ಗೆ ಬಿಜೆಪಿಯಲ್ಲಿ ಗುರುತಿಸಿಕೊಂಡರು. ಸಂಜೆ ವೇಳೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ಗೊತ್ತಾದಾಗ ಕಾಂಗ್ರೆಸ್ ಬೆಂಬಲಕ್ಕೆ ನಿಂತರು. ಶಾಸಕರಾಗಿ ಆಯ್ಕೆಯಾದ ಪ್ರಥಮ ಬಾರಿಗೇ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡರು. ಬಳಿಕ ಅವರು ಆಂತರಿಕ ಒಪ್ಪಂದದಂತೆ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗದೆ ಇರುವುದರಿಂದ ಮೈತ್ರಿ ಸರ್ಕಾರದ ಸಂಪುಟದಿಂದ ಕೈಬಿಡಲಾಯಿತು. ಈ ಸಂದರ್ಭದಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ವೈಯಕ್ತಿಕವಾಗಿ ತಟಸ್ಥ ನಿಲುವು ತೋರಿದರೂ ಅವರ ಬೆಂಬಲಿಗರು ಮಾತ್ರ ಬಹಿರಂಗವಾಗಿಯೇ ಬಿಜೆಪಿಯನ್ನು ಬೆಂಬಲಿಸಿದರು. ಇದಾದ ಬಳಿಕ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ 2ನೇ ಬಾರಿ ಆರ್.ಶಂಕರ್‌ಗೆ ಸಚಿವ ಸ್ಥಾನ ದೊರಕಿತು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಆರ್.ಶಂಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಬೆಂಬಲಿಸುವ ಉದ್ದೇಶದಿಂದ ಮುಂಬೈಗೆ ಹೋಗಿ ಅತೃಪ್ತ ಶಾಸಕರ ಗುಂಪು ಸೇರಿಕೊಂಡು ಈಗ ಅನರ್ಹತೆಗೆ ಗುರಿಯಾಗಿದ್ದಾರೆ.
-ಎಚ್.ಕೆ. ನಟರಾಜ
Advertisement